
ಕೋಲಾರ: ‘ಮತ್ತೆ ಶಾಸಕರು ದೆಹಲಿಗೆ ಹೋಗಿದ್ದಾರೆಯೇ? ನಾನು ಬೆಳಿಗ್ಗೆ ಚಿಕ್ಕಬಳ್ಳಾಪುರದ ಕಾರ್ಯಕ್ರಮದಲ್ಲಿದ್ದೆ. ಹೀಗಾಗಿ, ಮಾಹಿತಿ ಇಲ್ಲ. ಯಾವ ಶಾಸಕರು ದೆಹಲಿಗೆ ಹೋಗಿದ್ದಾರೆ, ಯಾವ ಕಾರಣಕ್ಕೆ ಹೋಗಿದ್ದಾರೆ ಎಂಬುದು ನನಗೆ ಗೊತ್ತಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಇಲ್ಲಿನ ಜಿಲ್ಲಾಡಳಿತ ಭವನ ಮುಂದೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಅಧಿಕಾರ ಹಂಚಿಕೆ ವಿಚಾರ ನನಗೆ ಗೊತ್ತಿಲ್ಲ. ಅಂಥದ್ದು ಏನಾದರೂ ಇದ್ದರೆ ಹೈಕಮಾಂಡ್ ಎದುರು ಮಾತುಕತೆ ಆಗಿರುತ್ತದೆಯೇ ಹೊರತೂ ನಮ್ಮ ಎದುರು ಚರ್ಚೆಯಾಗುವುದಿಲ್ಲ’ ಎಂದರು.
ಅಧಿಕಾರ ಹಂಚಿಕೆ ವಿಚಾರವನ್ನು ಮಾಧ್ಯಮಗಳಲ್ಲಿ ಮಾತ್ರ ನೋಡುತ್ತಿದ್ದೇನೆ. ಈ ವಿಚಾರವಾಗಿ ನನಗೆ ಯಾರೂ ಕರೆ ಮಾಡಿಲ್ಲ. ಈ ಸಂಬಂಧ ಏನೇ ವಿಚಾರವಿದ್ದರೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಅದಕ್ಕೆ ನಾವೆಲ್ಲಾ ಮನ್ನಣೆ ನೀಡುತ್ತೇವೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಐದು ವರ್ಷ ಇರಬೇಕೇ ಎಂಬ ಪ್ರಶ್ನೆಗೆ, ‘ಈ ವಿಚಾರ ಕೂಡ ಹೈಕಮಾಂಡ್‌ಗೆ ಬಿಟ್ಟಿದ್ದು. ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ’ ಎಂದರು.
ಪಕ್ಷ ಅಧಿಕಾರಕ್ಕೆ ಬರಲು ಡಿ.ಕೆ.ಶಿವಕುಮಾರ್ ಶ್ರಮಪಟ್ಟಿದ್ದಾರಲ್ಲವೇ ಎಂಬುದಕ್ಕೆ, ‘ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಉತ್ತಮ ಕೆಲಸ ಮಾಡುತ್ತಿದ್ದಾರೆ. ಪಕ್ಷದ ಪ್ರತಿ ಕಾರ್ಯಕರ್ತರು ಹೆಚ್ಚಿನ ಕೆಲಸ ಮಾಡಿದ್ದಾರೆ, ಮತದಾರ ಪ್ರಭುಗಳು ಕೂಡ ಆಶೀರ್ವಾದ ಮಾಡಿದ್ದಾರೆ’ ಎಂದು ನುಡಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ನ.28ಕ್ಕೆ ಬೆಂಗಳೂರಿನಲ್ಲಿ ನಮ್ಮ ಇಲಾಖೆಯಿಂದ ಐಸಿಡಿಎಸ್ ಕಾರ್ಯಕ್ರಮದ ಸುವರ್ಣ ಮಹೋತ್ಸವ, ಅಕ್ಕ ಪಡೆ ಹಾಗೂ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘದ ಉದ್ಘಾಟನೆ ಇದೆ. ಇದೇ ವಿಚಾರವಾಗಿ ಖರ್ಗೆ ಅವರನ್ನು ಭೇಟಿಯಾಗಿ ಆಹ್ವಾನಿಸಿದ್ದೇನೆ. ಇಲಾಖೆಯ ವಿಚಾರಗಳ ಬಗ್ಗೆ ಮಾತನಾಡಿದ್ದೇನೆಯೇ ಹೊರತು ರಾಜಕೀಯ ಚರ್ಚೆ ಮಾಡಿಲ್ಲ’ ಎಂದರು.
ಗೃಹಲಕ್ಷ್ಮಿ ಯೋಜನೆಯ ಮೂರು ಕಂತಿನ ಹಣ ಬಾಕಿಯಿದ್ದು, ಆಗಸ್ಟ್ ತಿಂಗಳಿನದ್ದು ನೀಡಲಾಗಿದೆ. ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನದ್ದು ಪಾವತಿಸಬೇಕಿದ್ದು ಶೀಘ್ರವೇ ಆ ಕೆಲಸ ಆಗಲಿದೆ ಎಂದು ಹೇಳಿದರು.
ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ಮುಂದಿನ ಬಜೆಟ್‌ನಲ್ಲಿ ₹ 1 ಸಾವಿರ ಏರಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.