ಕೋಲಾರ: ‘ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್‍ಕುಮಾರ್ ನನ್ನ ಮೇಲೆ ಕೇವಲವಾಗಿ ಮಾತನಾಡಿ ರೌಡಿಸಂ ಮಾಡುತ್ತಿದ್ದಾರೆ, ಧಮ್ಕಿ, ಬೆದರಿಕೆ ಹಾಕುತ್ತಿದ್ದಾರೆ. ಶ್ರೀನಿವಾಸಪುರ, ಮುಳಬಾಗಿಲಿನಿಂದ ರೌಡಿಗಳನ್ನು ಕರೆಸಿದ್ದಾರೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತರುತ್ತೇನೆ’ ಎಂದು ಸಚಿವ ಕೆ.ಎಚ್.ಮುನಿಯಪ್ಪ ಬೆಂಬಲಿಗ, ಕಾಂಗ್ರೆಸ್ ಮುಖಂಡ ಸೀತಿಹೊಸೂರು ಮುರಳಿಗೌಡ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನನ್ನ ಊರಿನ ಬಳಿ ಭಾನುವಾರ ಚಾಲನೆ ನೀಡಿದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಶಾಸಕ ಕೊತ್ತೂರು ಮಂಜುನಾಥ್ ಅವರನ್ನು ಪ್ರಶ್ನೆ ಮಾಡಿದ್ದಕ್ಕೆ ಅನಿಲ್ ಕುಮಾರ್ ರೌಡಿಸಂ ಮಾಡಿದ್ದು ಸರಿಯಲ್ಲ. ಶಾಸಕರು ಆರಂಭದಲ್ಲಿ ಶಾಂತವಾಗಿ ಉತ್ತರಿಸಿದರು’ ಎಂದರು.
‘ನಿಯಮಗಳು ಪಾಲನೆ ಆಗದೆ ಇದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ತಂದು ಬಲವಂತವಾಗಿ ಪೂಜೆ ನೆರವೇರಿಸುವ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಈ ಹಿಂದೆ ಎರಡು ಬಾರಿ ಟೆಂಡರ್ ಆಗಿ ರದ್ದಾಗಿತ್ತು. ಚಂಜಿಮಲೆಯಿಂದ ಕ್ಯಾಲನೂರು ರಸ್ತೆ ಮಾಡಿಸಿದ್ದರು. ಅದನ್ನು ರದ್ದು ಮಾಡಿ ಚಂಜಿಮಲೆಯಿಂದ ಬೇರೆ ಕಡೆ ಮಾಡಿಸಿದ್ದಾರೆ. ಕೆರೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುತ್ತಿದ್ದ ವೇಳೆ ರಸ್ತೆ ಕಾಮಗಾರಿ ಸಂಬಂಧ ಕ್ರಿಯಾ ಯೋಜನೆ ಆಗಿದೆಯೇ, ಟೆಂಡರ್ ಆಗಿದೆಯೇ, ವರ್ಕ್ ಆರ್ಡರ್ ಆಗಿದೆಯೇ ಎಂಬುದಾಗಿ ಪ್ರಶ್ನೆ ಮಾಡಿದೆನು. ಇದಕ್ಕೆ ಕೊತ್ತೂರು ಉತ್ತರ ನೀಡುತ್ತಿದ್ದರು. ಆಗ ಮಧ್ಯ ಪ್ರವೇಶ ಮಾಡಿದ ಅನಿಲ್ ದರ್ಪ ತೋರಿ, ದೌರ್ಜನ್ಯ ಎಸಗಿದ್ದಾರೆ. ಪ್ರಶ್ನೆ ಕೇಳಲು ನೀನು ಯಾರೆಂದು ಕೇಳಿದರು. ತಮ್ಮ ಪಟಾಲಂ ಜನಪನಹಳ್ಳಿ ನವೀನ್, ಜಾಲಿ ಮಂಜು ಇತರರು ನನ್ನನ್ನು ತಳ್ಳಿದರು’ ಎಂದು ಆರೋಪಿಸಿದರು.
‘ಕಾಮಗಾರಿ ಕೈಗೆತ್ತಿಕೊಳ್ಳಬೇಕಾದರೆ ನಿಯಮ ಪಾಲನೆ ಮಾಡಬೇಕು. ಅಭಿವೃದ್ಧಿ ಕುರಿತು ವೆಚ್ಚದ ಕ್ರಿಯಾಯೋಜನೆ ತಯಾರಿಸಬೇಕು, ಹಣ ಮಂಜೂರು ಪಡೆದು ಟೆಂಡರ್ ಕರೆಯಬೇಕು. ನಂತರ ಕಾರ್ಯಾದೇಶ ನೀಡಬೇಕು. ಇದೆಲ್ಲ ಆದ ನಂತರ ಶಂಕುಸ್ಥಾಪನೆ ಮಾಡಿದ್ದರೆ ಕೆಲಸವನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬಹುದು’ ಎಂದರು.
ಕಾರ್ಯಾದೇಶದ ಪತ್ರವನ್ನು ಅನಿಲ್ ಕುಮಾರ್ ತೋರಿಸಿದರಲ್ಲ ಎಂಬುದಕ್ಕೆ, ‘ಅವರು ತೋರಿಸಿದ್ದು ಕೆರೆ ಕಾಮಗಾರಿಗೆ ಸಂಬಂಧಿಸಿದ್ದು; ರಸ್ತೆ ವಿಚಾರದ್ದಲ್ಲ. ಕಾರ್ಯಾದೇಶ ಸಂಬಂಧ ನಾನು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ರಾಮಮೂರ್ತಿ ಅವರನ್ನು ಕೇಳಿದ್ದು, ಸಂಜೆ ವೇಳೆಗೆ ಪರಿಶೀಲಿಸಿ ಕೊಡುವುದಾಗಿ ಹೇಳಿದರು’ ಎಂದು ನುಡಿದರು.
ಕಾಂಗ್ರೆಸ್ ಪಕ್ಷದವರಾಗಿ ಪ್ರಶ್ನಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿ, ‘ಈಚೆಗೆ ಅನಿಲ್ ಕುಮಾರ್ ಹಾಗೂ ಅವರ ಪಟಾಲಂನಿಂದಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಹಿನ್ನೆಡೆ ಆಗುತ್ತಿದೆ. ಶಾಸಕರನ್ನು ಯಾರಾದರೂ ಪ್ರಶ್ನೆ ಮಾಡಿದರೆ ಈ ರೀತಿ ರೌಡಿಸಂ ಮಾಡಿಸುತ್ತಾರೆ. ನಾನು ವೇಮಗಲ್ ಭಾಗದ ಕಾಂಗ್ರೆಸ್ ಕಾರ್ಯಕರ್ತನಾಗಿ, ಜಿಲ್ಲಾ ಪದಾಧಿಕಾರಿಯಾಗಿ ಪ್ರಶ್ನೆ ಮಾಡಿದ್ದೇನೇ ಹೊರತು ಯಾವುದೇ ದುರುದ್ದೇಶವಿರಲಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಅಧಿಕಾರಿಯನ್ನು ನಾನು ಏಕವಚನದಿಂದ ಮಾತನಾಡಿಸಿಲ್ಲ. ಬೇಕಾದರೆ ವಿಡಿಯೊ ನೋಡಿ. ಈ ಹಿಂದೆ ಬಾಲಕಿಯರ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರನ್ನು ಶಾಸಕರು ಏಕವಚನದಿಂದ ಬೈಯ್ದಿರಲಿಲ್ಲವೇ? ಆಗ ಜೊತೆಗಿದ್ದ ಅನಿಲ್ ಏಕೆ ಸುಮ್ಮನಿದ್ದರು’ ಎಂದು ಪ್ರಶ್ನಿಸಿದರು.
‘ನಾನು ಈ ಸುದ್ದಿಗೋಷ್ಠಿಗೆ ಬರುವ ಮುನ್ನವೂ ನಮ್ಮ ಕುಟುಂಬ ಸದಸ್ಯರಿಗೆ ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್ ಕಡೆಯವರು ಕರೆ ಮಾಡಿ ಸುದ್ದಿಗೋಷ್ಠಿ ನಡೆಸದಂತೆ ಹೇಳಿದ್ದಲ್ಲದೆ, ಹುಷಾರಾಗಿ ಇರುವಂತೆ ಎಚ್ಚರಿಸಿದ್ದಾರೆ. ಅವರು ಹೇಳಿದಂತೆ ಹುಷಾರಾಗಿರುತ್ತೇನೆ. ಈ ಹಿಂದೆಯೂ ಒಮ್ಮೆ ಬೆದರಿಸಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತನಾಗಿರುವ ನನ್ನ ಮೇಲೆ ಈಗಾಗಲೇ 5 ಪ್ರಕರಣಗಳಿದ್ದು, ನಾನು ಬೆದರಿಕೆ ಹಾಕುವವರಿಗೆ ಹೆದರುವುದಿಲ್ಲ’ ಎಂದು ತಿರುಗೇಟು ನೀಡಿದರು.
‘ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷ ಹಾಗೂ ಚಂದ್ರಾರೆಡ್ಡಿ ಜಿಲ್ಲಾ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನನ್ನನ್ನು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ. ಆನಂತರ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮುಳಬಾಗಿಲು ನಗರಸಭೆ ಚುನಾವಣೆಯಲ್ಲಿ ಉಸ್ತುವಾರಿ ನೀಡಿದ್ದು, ಜವಾಬ್ದಾರಿಯಿಂದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದೇನೆ. ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದಲ್ಲಿ ನೀಡಿದ್ದ ವಾರ್ಡ್‍ಗಳಲ್ಲಿ ಮತಗಳ ಲೀಡ್ ಕೊಡಿಸಿದ್ದೇನೆ. ದೇವನಹಳ್ಳಿ ಕ್ಷೇತ್ರದ ತೂಬಗೇರಿ ಹೋಬಳಿಯ ಉಸ್ತುವಾರಿ ಹಾಕಿದ್ದು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ವೇಮಗಲ್ ಭಾಗದಲ್ಲೂ 2023ರಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದೇನೆ. ಆದರೆ, ಈಚೆಗೆ ನಡೆದ ವೇಮಗಲ್–ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ನನಗೆ ಯಾರೂ ಆಹ್ವಾನ ನೀಡಲಿಲ್ಲ. ಹೀಗಾಗಿ, ನಾನು ಹೋಗಲಿಲ್ಲ’ ಎಂದರು.
ಕೆ.ಎಚ್.ಮುನಿಯಪ್ಪ ಜಿಲ್ಲೆಯಿಂದ ದೂರವಿರುವ ಹಿನ್ನೆಲೆಯಲ್ಲಿ ಇವರ ಅಟ್ಟಹಾಸ ದೌರ್ಜನ್ಯ ಹೆಚ್ಚಾಗುತ್ತಿದೆ. ಮುನಿಯಪ್ಪ ಬಂದು ಸಕ್ರಿಯರಾದರೆ ಇವರ ಆಟಾಟೋಪ ಮಟ್ಟ ಹಾಕುತ್ತಾರೆಸೀತಿಹೊಸೂರು ಮುರಳಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ
ವರ್ತೂರು ಕರೆತಂದು ದಿಕ್ಕುತಪ್ಪಿಸಿದ್ದು ಅನಿಲ್:
‘2014ರಲ್ಲಿ ವರ್ತೂರು ಪ್ರಕಾಶ್ ಅವರನ್ನು ಕರೆತಂದು ನಮ್ಮ ಭಾಗದ ಮುಖಂಡರನ್ನೆಲ್ಲ ದಿಕ್ಕು ತಪ್ಪಿಸಿ ಕಾಂಗ್ರೆಸ್ ಪಕ್ಷ ಸಂಘಟನೆ ಕುಸಿಯಲು ಅನಿಲ್ ಕುಮಾರ್ ಕಾರಣರಾದರು. ಶೂನ್ಯ ಮತ ಇದ್ದಿದ್ದ ನನ್ನ ಬೂತ್‍ನಲ್ಲಿ ಕಾಂಗ್ರೆಸ್‍ಗೆ 300 ಮತಗಳು ಬರುವಂತೆ ಮಾಡಿದ್ದೆ. ಈಗ ಅನಿಲ್ ನನ್ನ ಮೇಲೆಯೇ ರೌಡಿಸಂ ಮಾಡುತ್ತಾರೆ’ ಎಂದು ಸೀತಿಹೊಸೂರು ಮುರಳಿ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.