ADVERTISEMENT

ಕೋಲಾರ: ಮೊಬೈಲ್‌ ದರೋಡೆ; ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 16:36 IST
Last Updated 14 ಸೆಪ್ಟೆಂಬರ್ 2021, 16:36 IST

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ದೇವರಾಯಸಮುದ್ರ ಬಳಿ ಕಂಟೈನರ್‌ ಅಡ್ಡಗಟ್ಟಿ ₹ 6.39 ಕೋಟಿ ಮೌಲ್ಯದ ಮೊಬೈಲ್‌ಗಳನ್ನು ದೋಚಿ ಪರಾರಿಯಾಗಿದ್ದ ಪ್ರಕರಣ ಭೇದಿಸಿರುವ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯು ಮಧ್ಯಪ್ರದೇಶ ಮೂಲದವನು. ಆತ ವಿಚಾರಣೆ ವೇಳೆ ನೀಡಿರುವ ಸುಳಿವು ಆಧರಿಸಿ ಇತರೆ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಉನ್ನತ ಪೊಲೀಸ್‌ ಮೂಲಗಳು ತಿಳಿಸಿವೆ.

ಆರೋಪಿಗಳನ್ನು ಬಂಧಿಸಲು ಮಧ್ಯಪ್ರದೇಶಕ್ಕೆ ತೆರಳಿದ್ದ ಜಿಲ್ಲೆಯ ಪೊಲೀಸ್‌ ಸಿಬ್ಬಂದಿ ಮೇಲೆ ಸ್ಥಳೀಯ ಮಹಿಳೆಯರು ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಇತರೆ ಆರೋಪಿಗಳನ್ನು ಬಂಧಿಸಲು ಮಧ್ಯಪ್ರದೇಶದ ಪೊಲೀಸರು ಜಿಲ್ಲೆಯ ಪೊಲೀಸ್‌ ಸಿಬ್ಬಂದಿಗೆ ಸಹಕರಿಸುತ್ತಿಲ್ಲ ಎಂದು ಮೂಲಗಳು ಹೇಳಿವೆ.

ADVERTISEMENT

ಪ್ರಕರಣದ ಹಿನ್ನೆಲೆ: ಆ.5ರಂದು ತಮಿಳುನಾಡಿನ ಚೆನ್ನೈನಿಂದ ಜಿಲ್ಲೆಯ ಮಾರ್ಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಗೆ ಎಂ.ಐ ಕಂಪನಿ ಮೊಬೈಲ್‌ಗಳನ್ನು ಸಾಗಿಸುತ್ತಿದ್ದ ಶ್ರೀಜಿ ಟ್ರಾನ್ಸ್‌ಪೋರ್ಟ್‌ ಏಜೆನ್ಸಿಗೆ ಸೇರಿದ ಕಂಟೈನರ್‌ ವಾಹನವನ್ನು 6 ಮಂದಿ ದರೋಡೆಕೋರರ ಗುಂಪು ಕಾರಿನಲ್ಲಿ ಹಿಂಬಾಲಿಸಿ ಬಂದು ಅಡ್ಡಗಟ್ಟಿ ದುಷ್ಕೃತ್ಯ ಎಸಗಿತ್ತು.

ಕಂಟೈನರ್‌ ಅಡ್ಡಗಟ್ಟಿದ್ದ ದರೋಡೆಕೋರರು ಚಾಲಕ ಸುರೇಶ್‌ ಜತೆ ಜಗಳವಾಡಿ ಹಲ್ಲೆ ನಡೆಸಿದ್ದರು. ನಂತರ ಸುರೇಶ್‌ರನ್ನು ಸಮೀಪದ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಬಾಯಿಗೆ ಬಟ್ಟೆ ತುರುಕಿ, ಕೈ ಕಾಲುಗಳನ್ನು ಕಟ್ಟಿದ್ದರು. ಬಳಿಕ ಕಂಟೈನರ್‌ನಲ್ಲಿದ್ದ ಮೊಬೈಲ್‌ಗಳನ್ನು ಸಂಪೂರ್ಣವಾಗಿ ಮತ್ತೊಂದು ಲಾರಿಗೆ ತುಂಬಿಸಿಕೊಂಡು ಪರಾರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.