ADVERTISEMENT

ಕೋಲಾರ: ನೂರು ವರ್ಷದ ಶಾಲೆಗೆ ಹೊಸ ರೂಪ

₹2 ಕೋಟಿ ನೆರವು ನೀಡಿದ ಅಮೆರಿಕದ ವೈದ್ಯ ಡಾ.ರವೀಂದ್ರಕುಮಾರ್, ನಿರ್ಮಲಮ್ಮ ದಂಪತಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 6:54 IST
Last Updated 14 ಡಿಸೆಂಬರ್ 2025, 6:54 IST
ಬಂಗಾರಪೇಟೆ ಬಾಲಕರ ಪಿಯು ಕಾಲೇಜಿನ ಬಳಿ ₹2ಕೋಟಿ ವೆಚ್ಚದ ಕೊಠಡಿಗಳ ನಿರ್ಮಾಣಕ್ಕೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದರು
ಬಂಗಾರಪೇಟೆ ಬಾಲಕರ ಪಿಯು ಕಾಲೇಜಿನ ಬಳಿ ₹2ಕೋಟಿ ವೆಚ್ಚದ ಕೊಠಡಿಗಳ ನಿರ್ಮಾಣಕ್ಕೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದರು   

ಬಂಗಾರಪೇಟೆ: ಮಕ್ಕಳ ಗುಣಮಟ್ಟದ ವಿದ್ಯಾಭ್ಯಾಸಕ್ಕಾಗಿ ಆಧುನಿಕ ತಂತ್ರಜ್ಞಾನದೊಂದಿಗೆ 10 ಎಕರೆ ಪ್ರದೇಶದಲ್ಲಿ ಮಾದರಿ ಶಾಲೆಯೊಂದನ್ನು ನಿರ್ಮಿಸಲಾಗುವುದು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಿಳಿಸಿದರು.

ನಗರದ ಬಾಲಕರ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಹೊಸ ಶಾಲಾ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ಸರ್ಕಾರಿ ಶಾಲೆಗಳೆಂದರೆ ನಿರುತ್ಸಾಹ ತೋರುವ ಮತ್ತು ಮೂಗು ಮುರಿಯುವ ಕಾಲಘಟ್ಟದಲ್ಲಿ ಒಸಾಟ್ ಸಂಸ್ಥೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿರುವುದು ಶ್ಲಾಘನೀಯ. ನೂರು ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಯನ್ನು ಅಭಿವೃದ್ಧಿಪಡಿಸುವುದು ಅನಿವಾರ್ಯವಾಗಿತ್ತು ಎಂದರು.

ಬಂಗಾರಪೇಟೆಯಲ್ಲಿ ಹುಟ್ಟಿ ಬೆಳೆದು, ಅಮೆರಿಕದಲ್ಲಿ ವೈದ್ಯ ವೃತ್ತಿ ನಡೆಸುತ್ತಿರುವ ಡಾ.ರವೀಂದ್ರಕುಮಾರ್ ಮತ್ತು ಅವರ ಪತ್ನಿ ನಿರ್ಮಲಮ್ಮ ದಂಪತಿ ತಮ್ಮ ಜನ್ಮಸ್ಥಳ ಮತ್ತು ಮಕ್ಕಳಿಗೆ ಸಹಾಯ ಮಾಡುವ ಉದ್ದೇಶದಿಂದ ಒಸಾಟ್ ಮೂಲಕ ₹2 ಕೋಟಿ ವೆಚ್ಚದಲ್ಲಿ 10 ಕೊಠಡಿಗಳನ್ನು ನಿರ್ಮಿಸಿಕೊಡುತ್ತಿದ್ದಾರೆ. ದಾನಿಗಳ ನೆರವಿನಿಂದ ನಿರ್ಮಾಣವಾಗುವ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆಯುವ ಲಕ್ಷಾಂತರ ವಿದ್ಯಾರ್ಥಿಗಳು ಚೆನ್ನಾಗಿ ಓದಿ, ಉತ್ತಮ ಶ್ರೇಣಿ ಪಡೆದು ದಾನಿಗಳಿಗೆ ಕೃತಜ್ಞತೆ ಸಲ್ಲಿಸಬೇಕು ಎಂದು ಹೇಳಿದರು.

ADVERTISEMENT

ಒಸಾಟ್ ಸಂಸ್ಥೆಯ ಮೂಲಕ ನೆಲಮಹಡಿ ಮತ್ತು ಮೊದಲ ಮಹಡಿ ನಿರ್ಮಾಣವಾದರೆ ಅದರ ಮೇಲೆ ಮತ್ತೊಂದು ಕಟ್ಟಡ ನಿರ್ಮಾಣ ಮಾಡಲಾಗುವುದು. ಕೋಟ್ಯಂತರ ರೂಪಾಯಿ ಖರ್ಚಿನಲ್ಲಿ ಸ್ಮಾರ್ಟ್ ತರಗತಿಗಳನ್ನು ಆರಂಭಿಸಲಾಗುವುದು. ಬಂಗಾರಪೇಟೆ ತಾಲ್ಲೂಕಿನಲ್ಲೂ ಮುಂದಿನ ನಾಲ್ಕು ತಿಂಗಳಲ್ಲಿ ದಾನಿಗಳ ನೆರವಿನಿಂದ ಸ್ಮಾರ್ಟ್ ತರಗತಿ ನಿರ್ಮಿಸಲಾಗುವುದು. ಇದರ ಜೊತೆಗೆ ಮಾದರಿ ಶಾಲೆಯೊಂದನ್ನು ನಿರ್ಮಿಸುವ ಉದ್ದೇಶವಿದೆ. ಕೇಸರನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಎಕರೆ ಪ್ರದೇಶದಲ್ಲಿ ಮಾದರಿ ಶಾಲೆಯೊಂದನ್ನು ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ಒಸಾಟ್ ಸಂಸ್ಥೆ ಬಾಲಕೃಷ್ಣರಾವ್ ಮಾತನಾಡಿ, ‘ಅನಿವಾಸಿ ಭಾರತೀಯರು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವ ಕಾರ್ಯ ಮಾಡುತ್ತಿದ್ದಾರೆ. ಇದರಿಂದ ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಲು ಸಹಾಯಕವಾಗಲಿದೆ ಎಂದರು.

ಸಂಸ್ಥೆಯ ಮೂಲಕ ಈಗಾಗಲೇ 112 ಶಾಲೆಗಳನ್ನು ನಿರ್ಮಿಸಲಾಗಿದ್ದು, ಮಕ್ಕಳ ಸಂಖ್ಯೆ ಹೆಚ್ಚಿರುವ ಕಾಮಸಮುದ್ರ ಮತ್ತು ಬಂಗಾರಪೇಟೆ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸಂಸ್ಥೆಯ 137ನೇ ಶಾಲೆಯಾಗಿ ಬಂಗಾರಪೇಟೆ ಶಾಲೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. 10 ಕೊಠಡಿಗಳು ಮತ್ತು ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇತರ ಮೂಲ ಸೌಕರ್ಯ ಒದಗಿಸಲು ಒತ್ತು ನೀಡಲಾಗುವುದು ಎಂದರು.

ಒಸಾಟ್ ಸಂಸ್ಥೆಯ ಸದಸ್ಯರಾದ ನಾಗಭೂಷಣ, ನಾಗೇಶ್, ಮದನ್, ಶಿಕ್ಷಣ ಇಲಾಖೆ ಅಧಿಕಾರಿ ಪರ್ವೀನ್ ತಾಜ್, ಬಿಇಒ ಶಶಿಕಲಾ, ಪ್ರಾಂಶುಪಾಲ ನಾಗಾನಂದ ಕೆಂಪರಾಜ್, ಉಪಪ್ರಾಂಶುಪಾಲ ಶಂಕರಪ್ಪ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.