ADVERTISEMENT

ರಾಜ್ಯಕ್ಕೆ ಬಿಜೆಪಿ ಕೊಟ್ಟಿದ್ದು ಖಾಲಿ ಚೊಂಬು!: ರಣದೀಪ್ ಸಿಂಗ್‌ ಸುರ್ಜೇವಾಲಾ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2024, 5:20 IST
Last Updated 21 ಏಪ್ರಿಲ್ 2024, 5:20 IST
ಕೋಲಾರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಖಾಲಿ ಚೊಂಬು ತೋರಿಸಿದರು. ಡಾ.ಎಂ.ಸಿ.ಸುಧಾಕರ್‌, ವಿ.ಆರ್‌.ಸುದರ್ಶನ್‌, ಕೊತ್ತೂರು ಮಂಜುನಾಥ್‌, ಎಂ.ಎಲ್‌.ಅನಿಲ್‌ ಕುಮಾರ್‌, ಸಿ.ಲಕ್ಷ್ಮಿನಾರಾಯಣ, ನಂದಿನಿ ಪ್ರವೀಣ್‌, ಕೆ.ಜಯದೇವ್‌, ಓಬಿಸಿ ಮಂಜುನಾಥ್‌ ಪಾಲ್ಗೊಂಡಿದ್ದರು
ಕೋಲಾರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಖಾಲಿ ಚೊಂಬು ತೋರಿಸಿದರು. ಡಾ.ಎಂ.ಸಿ.ಸುಧಾಕರ್‌, ವಿ.ಆರ್‌.ಸುದರ್ಶನ್‌, ಕೊತ್ತೂರು ಮಂಜುನಾಥ್‌, ಎಂ.ಎಲ್‌.ಅನಿಲ್‌ ಕುಮಾರ್‌, ಸಿ.ಲಕ್ಷ್ಮಿನಾರಾಯಣ, ನಂದಿನಿ ಪ್ರವೀಣ್‌, ಕೆ.ಜಯದೇವ್‌, ಓಬಿಸಿ ಮಂಜುನಾಥ್‌ ಪಾಲ್ಗೊಂಡಿದ್ದರು   

ಕೋಲಾರ: ‘ಪ್ರಧಾನಿ ನರೇಂದ್ರ ಮೋದಿ ಗ್ಯಾರಂಟಿಗಳೆಲ್ಲವೂ ನಕಲಿ ಹಾಗೂ ಸುಳ್ಳು. ಹತ್ತು ವರ್ಷಗಳಿಂದ ಅವರು ಹೇಳಿಕೊಂಡು ಬಂದಿರುವ ಒಂದೂ ಭರವಸೆ ಈಡೇರಿಲ್ಲ. ಅವರು ರಾಜ್ಯದ ಜನರಿಗೆ ಕೊಟ್ಟಿದ್ದು ಬರೀ ಚೊಂಬು. ಹೀಗಾಗಿ, ಬಿಜೆಪಿಯದ್ದು ಚೊಂಬು ಸರ್ಕಾರ’ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್‌ ಸುರ್ಜೇವಾಲಾ ವ್ಯಂಗ್ಯವಾಡಿದರು. 

ನಗರದ ಹೊರವಲಯದ ಹೋಟೆಲ್‌ನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಖಾಲಿ ಚೊಂಬು ತೋರಿಸಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

‘2022ರೊಳಗೆ 100 ಸ್ಮಾರ್ಟ್‌ ಸಿಟಿ ನಿರ್ಮಿಸಿದರೆ, 2022ರೊಳಗೆ ಎಲ್ಲರಿಗೂ ಪಕ್ಕಾ ಮನೆ ನಿರ್ಮಿಸಿಕೊಟ್ಟರೆ, ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ಘೋಷಿಸಿದ್ದ ಹಣ ಸಿಕ್ಕಿತೇ’ ಎಂದು ಪ್ರಶ್ನೆಗಳ ಮಳೆಗರೆದರು. 

ADVERTISEMENT

‘ನಮ್ಮ ಭರವಸೆಗಳನ್ನು ಜಾರಿ ಮಾಡಿ ತೋರಿಸಿದ್ದೇವೆ. ದೇಶದಲ್ಲಿ ನುಡಿದಂತೆ ನಡೆಯುವ ಏಕೈಕ ಪಕ್ಷ ಕಾಂಗ್ರೆಸ್‌. ಕರ್ನಾಟಕದಲ್ಲಿ ಅನುಷ್ಠಾನಗೊಳಿಸಿರುವ ಐದು ಗ್ಯಾರಂಟಿಗಳು ಜನರ ಬದುಕು ಹಸನುಗೊಳಿಸಿವೆ. ಕೇಂದ್ರದಲ್ಲಿ ಸರ್ಕಾರ ರಚನೆಯಾಗುತ್ತಿದ್ದಂತೆ ಗ್ಯಾರಂಟಿ ಜಾರಿ ಮಾಡುತ್ತೇವೆ’ ಎಂದು ಆಶ್ವಾಸನೆ ನೀಡಿದರು.

‘ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆ ಸಹಿಸಿಕೊಳ್ಳಲು ಬಿಜೆಪಿಯವರಿಗೆ ಸಾಧ್ಯವಾಗುತ್ತಿಲ್ಲ. ರಾಜ್ಯ ದಿವಾಳಿಯಾಗುತ್ತದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆರ್ಥಿಕ ತಜ್ಞರೊಂದಿಗೆ ಚರ್ಚಿಸಿದ ಬಳಿಕವೇ ಗ್ಯಾರಂಟಿ ಘೋಷಣೆ ಮಾಡಿದ್ದೇವೆ’ ಎಂದರು.

‘ರಾಜ್ಯದಲ್ಲಿ ಐದು ಗ್ಯಾರಂಟಿ ಘೋಷಣೆ ಮಾಡಿದಾಗ ಚುನಾವಣಾ ಗಿಮಿಕ್‌ಗಾಗಿ ಬೋಗಸ್ ಗ್ಯಾರಂಟಿ ಎಂದು ವಿರೋಧ ಪಕ್ಷದವರು ಟೀಕೆ ಮಾಡಿದರು. ಗ್ಯಾರಂಟಿ ಜಾರಿ ಮಾಡಿದ ನಂತರ ರಾಜ್ಯ ಅರ್ಥಿಕವಾಗಿ ದಿವಾಳಿಯಾಗಲಿದೆ ಎಂದು ಟೀಕಿಸಿದರು. ಈಗ ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆ ಕೈಬಿಡುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಗ್ಯಾರಂಟಿಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ’ ಎಂದು ಭರವಸೆ ನೀಡಿದರು.

ಕಾಂಗ್ರೆಸ್‌ನವರ ದೇಹದಲ್ಲಿ ರಕ್ತದ ಕೊನೆಯ ಹನಿ ಇರುವವರೆಗೆ ಗ್ಯಾರಂಟಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಗ್ಯಾರಂಟಿ ರದ್ದುಗೊಳಿಸಲು ಬಿಜೆಪಿಗೆ ಅವಕಾಶ ಕೊಡಲ್ಲ. ಐದು ವರ್ಷ ಗ್ಯಾರಂಟಿ ಜಾರಿ ಖಚಿತ.
–ರಣದೀಪ್ ಸಿಂಗ್‌ ಸುರ್ಜೇವಾಲಾ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.