
ಶ್ರೀನಿವಾಸಪುರ: ತಾಲ್ಲೂಕಿನ ದುಡಿಯುವ ವರ್ಗ ಸಂಘಟನೆಗಳ ರೈತ ಮತ್ತು ಕಾರ್ಮಿಕರ ಸಂಘಟನೆಗಳಿಂದ ಮಾತೃಭಾಷೆ ಮತ್ತು ಕೆಂಪು ಪುಸ್ತಕ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೈತ ಮತ್ತು ಕಾರ್ಮಿಕ ಚಳವಳಿಯ ನೇತಾರ ಪಿ.ಆರ್ ಸೂರಿ, ‘ಜಗತ್ತಿನ ಎಲ್ಲಾ ಹೋರಾಟನಿರತ ಸಂಘಟನೆಗಳು, ವ್ಯಕ್ತಿಗಳು ರೈತರ, ಕಾರ್ಮಿಕರ, ಜನತೆಯ ಅಥವಾ ವಿಮೋಚನಾ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವವರು ತಮ್ಮ ಹಕ್ಕುಗಳಿಗಾಗಿ, ಸಮಾಜದ ಬೆಳವಣಿಗೆಗಾಗಿ, ಆಯಾ ದೇಶಗಳ ಸಾರ್ವಭೌಮತೆಗಾಗಿ, ಸ್ವಾಭಿಮಾನಕ್ಕಾಗಿ, ಸಮಾನತೆಗಾಗಿ ಚಳವಳಿ ನಡೆಸುತ್ತಿದ್ದಾರೆ. ಅವರು ಪ್ರತಿಪಾದನೆ ಮಾಡುವ ವಿಚಾರಗಳನ್ನು ಜಗತ್ತಿನ ಜನತೆಯ ಮುಂದೆ ತೆಗೆದುಕೊಂಡು ಹೋಗಬೇಕೆನ್ನುವ ಜಾಗತಿಕ ಮಹಾ ಆಂದೋಲನವೇ ಈ ಕೆಂಪು ಪುಸ್ತಕ ದಿನಾಚರಣೆ. ಫೆ.21 ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ’ ಎಂದರು.
‘ಯುಎಸ್ ಅಮೆರಿಕನ್ ಸಾಮ್ರಾಜ್ಯಶಾಹಿ’ ಎನ್ನುವ ಪುಸ್ತಕ ಬಿಡುಗಡೆ ಮಾಡಿ, ‘ಅಮೆರಿಕದ ಸಾಮ್ರಾಜ್ಯಶಾಹಿಯ ನಾಯಕ ಟ್ರಂಪ್ ಕ್ರೂರವಾದ ಸಾಮ್ರಾಜ್ಯಶಾಹಿ ನೀತಿಗಳನ್ನು ಇಡೀ ಜಗತ್ತಿನ ರಾಷ್ಟ್ರಗಳ ಮೇಲೆ ಬಲವಂತವಾಗಿ ಹೇರುತ್ತಿದ್ದು, ಈ ಕ್ರಮಗಳಿಂದ ಜಗತ್ತಿನ ದುಡಿಯುವ ವರ್ಗ ತೀವ್ರ ಬಿಕ್ಕಟ್ಟಿಗೆ ಬಲಿಯಾಗುತ್ತಿದೆ’ ಎಂದು ತಿಳಿಸಿದರು.
ಸಾರ್ವಭೌಮ ರಾಷ್ಟ್ರವಾದ ಭಾರತವು ಅಮೆರಿಕದ ಒತ್ತಡಕ್ಕೆ ಮಣಿದಿದೆ. ರಷ್ಯಾದಿಂದ ಕಡಿಮೆ ಬೆಲೆಗೆ ಸಿಗುತ್ತಿದ್ದ ಪೆಟ್ರೋಲಿಯಂ ಉತ್ಪನ್ನಗಳನ್ನು ನಿಲ್ಲಿಸಿ ಅಮೆರಿಕ ಸೂಚಿಸುವ ದೇಶಗಳಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಕೊಳ್ಳುವ ಸ್ಥಿತಿಗೆ ತಲುಪಿದೆ. ಇದರಿಂದ ಭಾರತಕ್ಕೆ ₹ 75 ಸಾವಿರ ಕೋಟಿ ನಷ್ಟವಾಗಲಿದೆ ಎಂದು ಹೇಳಿದರು.
ಕೃಷಿ ಮತ್ತು ಕೈಗಾರಿಕೆಗಳ ಕ್ಷೇತ್ರದಲ್ಲೂ ಭಾರತವು ಅಮೆರಿಕ ಹೇಳಿದಂತೆ ನಡೆದುಕೊಳ್ಳುವ ಸ್ಥಿತಿಗೆ ತಲುಪಿದೆ. ಭಾರತದಿಂದ ಅಮೆರಿಕಕ್ಕೆ ರಪ್ತು ಆಗುವ ವಸ್ತುಗಳಿಗೆ ಅಮೆರಿಕ ಶೇ 18ರವರೆಗೆ ತೆರಿಗೆ ವಿಧಿಸುತ್ತಿದ್ದರೆ, ಅಮೆರಿಕದಿಂದ ಬರುವ ಉತ್ಪನ್ನಗಳಿಗೆ ಭಾರತದಲ್ಲಿ ಯಾವುದೇ ತೆರಿಗೆ ಇಲ್ಲದೆ ಮಾರುಕಟ್ಟೆ ಅವಕಾಶ ನೀಡಿದೆ. ಇದರಿಂದ ಭಾರತದ ರೈತಾಪಿ ವರ್ಗಕ್ಕೆ, ದುಡಿಯುವ ವರ್ಗಕ್ಕೆ ದೊಡ್ಡ ರೀತಿಯ ಸಂಕಷ್ಟಗಳು ಎದುರಾಗಲಿವೆ ಎಂದರು.
ದಲಿತ ಸಂಘರ್ಷ ಸಮಿತಿಯ ಮುಖಂಡ ನಾರಾಯಣಸ್ವಾಮಿ ಮಾತನಾಡಿ, ‘ಜಗತ್ತಿನ ಜನತೆಯ ಮುಂದೆ ಸಾವಿರಾರು ಭಾಷೆಗಳು, ಸಂಸ್ಕೃತಿಗಳು, ಆಚರಣೆಗಳು ಇರುವಾಗ ಕೆಲವು ಕಡೆ ಪ್ರಭುತ್ವಗಳು ಇಂತದ್ದೇ ಭಾಷೆ, ಇಂಥದೇ ಸಂಸ್ಕೃತಿ, ಇಂತದ್ದೇ ಆಚರಣೆಗಳನ್ನು ನಡೆಸಬೇಕೆಂದು ಒತ್ತಡ ಹೇರುತ್ತವೆ. ಇಂತಹ ಸಂದರ್ಭದಲ್ಲಿ ಇಡೀ ಜಗತ್ತಿನಲ್ಲಿ ಅವರವರು ಮಾತನಾಡುವ ಭಾಷೆ ಪ್ರಧಾನ ಮಾತೃಭಾಷೆಗಳಾಗ ಬೇಕೆಂದು ಫೆ.1 ನ್ನು ಮಾತೃಭಾಷೆ ದಿನವನ್ನಾಗಿ ಆಚರಿಸಲಾಗುತ್ತಿದೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್ ಕುಮಾರ್, ಸೈಯದ್ ಫಾರೂಕ್, ಎನ್ ವೀರಪ್ಪರೆಡ್ಡಿ, ಸೋಮಶೇಖರ್ ಗೌಡ, ಉಪೇಂದ್ರ, ವಾಸಿಂ, ಅರುಣ್ ಕುಮಾರ್, ಕವಿ ಕೆ.ವಿ.ನಾಗರಾಜ್, ಕಾರ್ಮಿಕ ಮುಖಂಡರಾದ ಅಮರನಾರಾಯಣಪ್ಪ, ಆರ್ ಆಂಜಲಮ್ಮ, ಮಮತಾ, ಅನಂತಮ್ಮ, ಆಂಜಪ್ಪ, ದಲಿತ ಮುಖಂಡ ನರಸಿಂಹಮೂರ್ತಿ, ಚಳವಳಿಗಳ ಮುಖಂಡರಾದ ಜಿ.ಮಂಜುಳಾ, ಪ್ರಭಾವತಿ, ಗೌನಪಲ್ಲಿ ಶ್ರೀನಿವಾಸ್, ಯದುರೂರು ರಮೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.