ADVERTISEMENT

ಶಾಲೆಗೆ ದಾನ ನೀಡಿದ 50 ಎಕರೆ ಜಮೀನು ಕಬಳಿಕೆ: ಸಂಸದ ಡಾ.ಕೆ.ಸುಧಾಕರ್‌

ಭೂಗಳ್ಳರ ವಿರುದ್ಧ ಕ್ರಮ ಕೈಗೊಂಡು ಜಮೀನು ವಾಪಸ್‌ ಪಡೆಯಿರಿ: ಸಂಸದ ಡಾ.ಸುಧಾಕರ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 6:46 IST
Last Updated 28 ಜನವರಿ 2026, 6:46 IST
ಕೋಲಾರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್‌ ಮಾತನಾಡಿದರು. ಎನ್‌.ಮುನಿಸ್ವಾಮಿ, ಓಂಶಕ್ತಿ ಚಲಪತಿ, ಕೆ.ಎಸ್‌.ಮಂಜುನಾಥಗೌಡ, ವೈ.ಎ.ನಾರಾಯಣಸ್ವಾಮಿ ಪಾಲ್ಗೊಂಡಿದ್ದರು
ಕೋಲಾರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್‌ ಮಾತನಾಡಿದರು. ಎನ್‌.ಮುನಿಸ್ವಾಮಿ, ಓಂಶಕ್ತಿ ಚಲಪತಿ, ಕೆ.ಎಸ್‌.ಮಂಜುನಾಥಗೌಡ, ವೈ.ಎ.ನಾರಾಯಣಸ್ವಾಮಿ ಪಾಲ್ಗೊಂಡಿದ್ದರು   

ಕೋಲಾರ: ಮಾಲೂರು ತಾಲ್ಲೂಕು ಟೇಕಲ್‌ ಹೋಬಳಿಯ ಅಗಲಕೋಟೆ ಗ್ರಾಮದಲ್ಲಿ ಸರ್ಕಾರಿ ಶಾಲೆಗೆ ದಾನ ನೀಡಿದ್ದ ಸುಮಾರು 50 ಎಕರೆ ಜಮೀನನ್ನು ಎರಡು ಸಂಸ್ಥೆಗಳು ಕಬಳಿಸಿವೆ. ಈ ಸಂಬಂಧ ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಂಡು, ಜಮೀನು ವಾಪಸ್‌ ಪಡೆಯಬೇಕು ಎಂದು ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್‌ ಆಗ್ರಹಿಸಿದರು.

ನಗರ ಹೊರವಲಯದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಟಿ.ಜಿ.ಶ್ರೀನಿವಾಸುಲು ಎಂಬುವರು 1955ರಲ್ಲಿ ಅಗಲಕೋಟೆ ಗ್ರಾಮದ ಸರ್ವೆ ನಂಬರ್‌ 2, 7, 8, 10, 18, 60, 61, 63, 64 ರ 50 ಎಕರೆ 26 ಗುಂಟೆ ಖುಷ್ಕಿ ಜಮೀನನ್ನು ಶಿಕ್ಷಣ ಇಲಾಖೆಗೆ ದಾನ ಮಾಡಿದ್ದರು. ದಾನಪತ್ರದ ಮೂಲಕ ನೋಂದಣಿ ಮಾಡಿಸಿ ಶಾಲೆಗೆ ನೀಡಿದ್ದರು. ಆದರೆ, ನಕಲಿ ದಾಖಲೆ ಸೃಷ್ಟಿಸಿ ಆ ಜಮೀನನ್ನು ಕಬಳಿಸಲಾಗಿದೆ. ಈ ಭಾಗದಲ್ಲಿ ಒಂದೊಂದು ಎಕರೆ ₹ 1 ಕೋಟಿ ಬೆಲೆ ಬಾಳುತ್ತಿದ್ದು, ಈ ಜಮೀನಿನ ಒಟ್ಟು ಮೌಲ್ಯ ಅಂದಾಜು ₹ 50 ಕೋಟಿ’ ಎಂದರು.

ನಾಲ್ಕೈದು ತಿಂಗಳ ಹಿಂದೆ ನಕಲಿ ದಾಖಲೆ ಸೃಷ್ಟಿಸಿಕೊಂಡು ಪರಭಾರೆ ಮಾಡಿಕೊಂಡು ಸಾರ್ವಜನಿಕರ ಸ್ವತ್ತನ್ನು ಪಟ್ಟಭದ್ರ ಹಿತಾಸಕ್ತರು ನುಂಗಿದ್ದಾರೆ. ಈ ಸಂಬಂಧ ಕ್ರಮ ಕೈಗೊಳ್ಳಲು ಗ್ರಾಮಸ್ಥರೇ ನನಗೆ ದೂರು ನೀಡಿದ್ದಾರೆ. ಅಲ್ಲದೇ, ಶಿಕ್ಷಣ ಇಲಾಖೆ ಮಟ್ಟದಲ್ಲಿ ಪತ್ರ ವ್ಯವಹಾರಗಳು ನಡೆದಿವೆ ಎಂದು ಹೇಳಿದರು.

ADVERTISEMENT

ಗಂಗಾಧರ್‌ ಹಾಗೂ ಪಂಚಾಕ್ಷರಯ್ಯ ಎಂಬುವರ ಸಂಸ್ಥೆಗಳಿಗೆ ಈ ಜಮೀನು ನೀಡಲಾಗಿದೆ. ಯಾವುದೇ ಕಾರಣಕ್ಕೂ ಈ ಜಮೀನು ಬೇರೆ ಉದ್ದೇಶಕ್ಕೆ ಬಳಕೆಯಾಗಬಾರದು ಎಂದು ದಾನಪತ್ರ ಬರೆಯಲಾಗಿತ್ತು. ಆದರೆ, ಇಲ್ಲಿ ಕೈಗಾರಿಕೆಗಳು ಆರಂಭವಾದ ಬಳಿಕ ರಿಯಲ್‌ ಎಸ್ಟೇಟ್‌ ಮಾಫಿಯಾ ಆರಂಭವಾಯಿತು. ಜೊತೆಗೆ ಭೂಗಳ್ಳರು ಬಂದು ಅಮಾಯಕರ ಜಮೀನುಗಳನ್ನು ಲಪಟಾಯಿಸುತ್ತಿದ್ದಾರೆ. ಹೂಡಿಕೆದಾರರು, ಚುನಾಯಿತ ಜನಪ್ರತಿನಿಧಿಗಳು ಹಾಗೂ ಭೂಗಳ್ಳರು ಸೇರಿಕೊಂಡು ಇಂತಹ ಕೆಲಸ ಮಾಡುತ್ತಿದ್ದಾರೆ. ನಾನು ಈ ಭಾಗಕ್ಕೆ ಬರುತ್ತೇನೆಂದು ತಿಳಿದ ಕೂಡಲೇ ಕೆಲ ಪ್ರಭಾವಿಗಳು ನನ್ನನ್ನು ಸಂಪರ್ಕಿಸಿದ್ದಾರೆ ಎಂದು ಆರೋಪಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹಣ ನೀಡದೆ ವರ್ಗಾವಣೆ, ಬಡ್ತಿ ಸಿಗುತ್ತಿಲ್ಲ. ಭೂಮಾಫಿಯಾದ ಜೊತೆ ಕೈಜೋಡಿಸಿರುವ ಚುನಾಯಿತ ಪ್ರತಿನಿಧಿಗಳು ಸರ್ಕಾರದ ಜಮೀನುಗಳನ್ನು ಕಬಳಿಸುತ್ತಿದ್ದಾರೆ. ‘ಪಿ’ ನಂಬರ್‌ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುತ್ತಿದ್ದಾರೆ. ಶಿಡ್ಲಘಟ್ಟ, ಚಿಂತಾಮಣಿ, ದೇವನಹಳ್ಳಿ, ಹೊಸಕೋಟೆ, ಮಾಲೂರು ಸೇರಿದಂತೆ ವಿವಿಧೆಡೆ ಕಡಿಮೆ ದರದಲ್ಲಿ ಜಮೀನು ಪಡೆದು ಕೈಗಾರಿಕೆ ಸ್ಥಾಪಿಸುವುದಾಗಿ, ಉದ್ಯೋಗ ಕೊಡಿಸುವುದಾಗಿ ಹೇಳುತ್ತಿದ್ದಾರೆ. ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 20 ಕಿ.ಮೀ. ಸುತ್ತಳತೆಯಲ್ಲಿ ಜಮೀನು ಪಡೆಯುತ್ತಿದ್ದಾರೆ ಎಂದು ದೂರಿದರು.

ಜಂಗಮಕೋಟೆಯಲ್ಲಿ ಎರಡೂವರೆ ಸಾವಿರ ಎಕರೆ ಜಮೀನನ್ನು ಭೂಸ್ವಾಧೀನ ಮಾಡಿ ರೈತರ ಹೊಟ್ಟೆ ಮೇಲೆ ಹೊಡೆದಿದ್ದಾರೆ. ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರಾಯಲಸೀಮೆ ಹಾಗೂ ವಿಶಾಖಪಟ್ಟಣಂನಲ್ಲಿ ಕೈಗಾರಿಕೆ ಆರಂಭಿಸುತ್ತಿದ್ದಾರೆ. ಕೈಗಾರಿಕೆ ಅಭಿವೃದ್ಧಿ ಮಾಡಲು ಅವರನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ಮಾದರಿಯಾಗಿಸಿಕೊಳ್ಳಬಹುದು. ಆದರೆ, ಬೆಂಗಳೂರು ಸುತ್ತಮುತ್ತ, ಚಿಕ್ಕಬಳ್ಳಾಪುರದ ಹಳ್ಳಿಗಳನ್ನು ಸರ್ಕಾರ ಹಾಳು ಮಾಡುತ್ತಿದೆ. ‌ಇದು ಮುಖ್ಯಮಂತ್ರಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಹಲವೆಡೆ ಭೂ ಕಬಳಿಕೆ ಆಗಿದ್ದರೂ ಈ ವಿಚಾರದ ಬಗ್ಗೆ ಮಾತ್ರ ಮಾತನಾಡುತ್ತಿರುವುದೇಕೆ ಎಂಬ ಪ್ರಶ್ನೆಗೆ, ‘ಈ ವಿಚಾರ ಈಗ ನಮ್ಮ ಗಮನಕ್ಕೆ ಬಂದಿದೆ. ಉಳಿದೆಡೆ ಆಗಿರುವ ಭೂಕಬಳಿಕೆ ಬಗ್ಗೆಯೂ ಮಾತನಾಡುತ್ತೇವೆ’ ಎಂದರು. 

ಇದೇ ವಿಚಾರವಾಗಿ ಮಾಜಿ ಸಂಸದ ಎಸ್‌.ಮುನಿಸ್ವಾಮಿ, ಮಾಜಿ ಶಾಸಕ ಕೆ.ಎಸ್‌.ಮಂಜುನಾಥಗೌಡ, ವಿಧಾನ ಪರಿಷತ್‌ ಮಾಜಿ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ, ಮಾಜಿ ಅಧ್ಯಕ್ಷ ಡಾ.ವೇಣುಗೋಪಾಲ್, ಜಿಲ್ಲಾ ಮಾಧ್ಯಮ ಪ್ರಮುಖ್‌ ಪ್ರವೀಣ್‌ ಗೌಡ, ಸಹ ಪ್ರಮುಖ್‌ ಕೆಂಬೋಡಿ ನಾರಾಯಣಸ್ವಾಮಿ, ಮುಖಂಡರಾದ ವಿಜಯ ಕುಮಾರ್, ಸಿ.ಡಿ.ರಾಮಚಂದ್ರ, ಕಪಾಲಿ ಶಂಕರ್, ಸಾ.ಮಾ.ಅನಿಲ್ ಬಾಬು, ರಾಜು, ಸುಗಟೂರು ಚಂದ್ರಶೇಖರ್, ವಕೀಲ ಮಂಜುನಾಥ್, ಶ್ರೀನಿವಾಸ್, ತಿಮ್ಮರಾಯಪ್ಪ, ಕೆಂಬೋಡಿ ನಾರಾಯಣಸ್ವಾಮಿ, ರಾಜೇಶ್ ಸಿಂಗ್, ಅರುಣಮ್ಮ, ಮಮತಮ್ಮ, ಸುಮ, ರಾಜೇಶ್ವರಿ, ಕಾರ್ಯಕರ್ತರು ಇದ್ದರು.

ಮಾಲೂರು ತಾಲ್ಲೂಕಿನ ಅಗಲಕೋಟೆ ಗ್ರಾಮ, ₹ 50 ಮೌಲ್ಯದ ಜಮೀನು ದಾನದ ಜಮೀನಿನ ಹಗಲು ದರೋಡೆ: ಆರೋಪ ಶಾಲೆಗಾಗಿ ನೀಡಿದ ಭೂಮಿ ಕಬಳಿಸಿದ ಎರಡು ಸಂಸ್ಥೆಗಳು: ಡಾ.ಕೆ.ಸುಧಾಕರ್‌

ಚುನಾಯಿತ ಜನಪ್ರತಿನಿಧಿಗಳೇ ಜಮೀನು ಪಡೆದು ಕೆಐಎಡಿಬಿಗೆ ನೀಡಿ ಕಪ್ಪು ಹಣವನ್ನು ಬಿಳಿ ಹಣ ಮಾಡುತ್ತಿದ್ದಾರೆ. ₹ 60 ಲಕ್ಷಕ್ಕೆ ರೈತರಿಂದ ಜಮೀನು ಪಡೆದು ₹ 1 ಕೋಟಿಗೆ ಮಾರಾಟ ಮಾಡುತ್ತಿದ್ದಾರೆ

-ಡಾ.ಕೆ.ಸುಧಾಕರ್‌ ಸಂಸದ

ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಕೋಲಾರ ಜಿಲ್ಲೆಯವರೇ ಆದ ಕಂದಾಯ ಸಚಿವ ಕೃಷ್ಣಬೈರೇಗೌಡರು ಕೂಡಲೇ ಈ ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ಶಿಕ್ಷಣ ಇಲಾಖೆಯ ಆಯುಕ್ತರು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜೊತೆ ಚರ್ಚಿಸಿ ಜಮೀನಿನ ಎಲ್ಲಾ ದಾಖಲೆಗಳನ್ನು ಪಡೆದು ಜಮೀನು ಮಂಜೂರಾತಿ ರದ್ದು ಮಾಡಬೇಕು ಎಂದು ಡಾ.ಕೆ.ಸುಧಾಕರ್‌ ಆಗ್ರಹಿಸಿದರು. ಈ ಬಗ್ಗೆ ಪ್ರಧಾನಿ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವರಿಗೂ ಪತ್ರ ಬರೆಯುತ್ತೇನೆ. ಮುಂಬರುವ ಸಂಸತ್ತಿನ ಅಧಿವೇಶನದಲ್ಲೂ ಧ್ವನಿ ಎತ್ತುತ್ತೇನೆ. ಬಿಜೆಪಿಯಿಂದ ಹೋರಾಟ ಕೂಡ ನಡೆಸಿ ತಾರ್ಕಿಕ ಅಂತ್ಯ ಕಾಣಿಸಲಾಗುವುದು. ಈ ಜಾಗದಲ್ಲಿ ಕೇಂದ್ರ ಸರ್ಕಾರದಿಂದಲೇ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಮನವಿ ಮಾಡುತ್ತೇನೆ. ಸಂಸದ ಎಂ.ಮಲ್ಲೇಶ್ ಬಾಬು ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಜೊತೆ ಚರ್ಚಿಸುತ್ತೇನೆ ಎಂದರು.

ರಾಜ್ಯಪಾಲರಿಗೆ ಹೊಡೆಯಲು ಹೋಗಿದ್ದರು ರಾಜ್ಯಪಾಲರು ಎಂದರೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಇಟ್ಟುಕೊಂಡಿರುವ ಪಿ.ಎ ಅಥವಾ ಸೆಕ್ರೇಟರಿ ಅಲ್ಲ. ಈ ಸರ್ಕಾರ ಕೇವಲ ರಾಜ್ಯಪಾಲರನ್ನು ವಿರೋಧಿಸಿಲ್ಲ; ಸಂವಿಧಾನ ಹಾಗೂ ‌ಅಂಬೇಡ್ಕರ್ ಅವರಿಗೆ ಅವಮಾನ ‌ಮಾಡಿದೆ. ಈ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಬೇಷರತ್ ಕ್ಷಮೆಯಾಚಿಸಬೇಕು. ಇದಕ್ಕೆಲ್ಲಾ ಮುಖ್ಯಮಂತ್ರಿ ಜವಾಬ್ದಾರರು. ಏಕೆಂದರೆ ಅವರ‌ ಮುಂದೆ‌ಯೇ ರಾಜ್ಯಪಾಲರಿಗೆ ಕಾಂಗ್ರೆಸ್‌ ಶಾಸಕರು ಹೊಡೆಯಲು ಹೋಗಿದ್ದಾರೆ. ಇದು ತಲೆ ತಗ್ಗಿಸಬೇಕಾದ ‌ಘಟನೆ ಎಂದು ಡಾ.ಕೆ.ಸುಧಾಕರ್‌ ಖಂಡಿಸಿದರು.

ಅಧಿಕಾರಿಗಳು ನಮ್ಮ ಆಳುಗಳಲ್ಲ ಯಾವುದೇ ರಾಜಕಾರಣಿಯು ಅಧಿಕಾರಿಗಳು ಅಥವಾ ಬೇರೆ ಯಾರ ಜೊತೆಯಾಗಲಿ ಮಾತನಾಡುವಾಗ ನಾಲಿಗೆ ಮೇಲೆ ಬಿಗಿ ಹಿಡಿತ ಹೊಂದಿರಬೇಕು. ಕಾನೂನಿಗಿಂತ ಯಾರೂ ಮಿಗಿಲಲ್ಲ. ಅಧಿಕಾರಿಗಳು ನಮ್ಮ ಆಳುಗಳಲ್ಲ. ಶಿಡ್ಲಘಟ್ಟದ ರಾಜೀವ್‌ ಗೌಡ ಅವರನ್ನು 14 ದಿನ ಆದ ಮೇಲೆ ಪೊಲೀಸರು ಬಂಧಿಸಿದ್ದಾರೆ. ನಾನು ಈಗಾಗಲೇ ಈ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿದ್ದೆ. ರಾಜ್ಯ ಸರ್ಕಾರ ಯಾವ ರೀತಿ ಕ್ರಮ ವಹಿಸಲಿದೆ ಎಂಬುದನ್ನು ಕಾದು ನೋಡುತ್ತೇನೆ ಎಂದು ಡಾ.ಕೆ.ಸುಧಾಕರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.