ಮುಳಬಾಗಿಲು: ಮಳೆಯಾಶ್ರಿತ ಹಾಗೂ ವಾಣಿಜ್ಯ ಬೆಳೆಗಳಿಗಾಗಿ ಯೂರಿಯಾ ಗೊಬ್ಬರಕ್ಕಾಗಿ ರೈತರು ಅಂಗಡಿಗಳ ಮುಂದೆ ಮುಗಿ ಬೀಳುತ್ತಿದ್ದಾರೆ.
ತಾಲ್ಲೂಕಿನಲ್ಲಿ ರಾಗಿ 4266 ಹೆಕ್ಟೇರ್, ಭತ್ತ 68, ಮುಸುಕಿನ ಜೋಳ 269, ತೊಗರಿ 154, ಹುರುಳಿ 5, ಅಲಸಂದಿ 226, ಅವರೆ 240, ನೆಲಗಡಲೆ 1514 ಹಾಗೂ ನೀರಾವರಿ ಮೂಲದ ನಾನಾ ವಾಣಿಜ್ಯ ಬೆಳೆಗಳನ್ನು 6742 ಹೆಕ್ಟೇರ್‌ನಷ್ಟು ಬೆಳೆದಿದ್ದಾರೆ. ಈಚೆಗೆ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಯೂರಿಯಾ ಸಿಗದೆ ರೈತರು ಪರದಾಡುವಂತಾಗಿದೆ.
ಸಾಮಾನ್ಯವಾಗಿ ಜೂನ್ ಹಾಗೂ ಜುಲೈ ತಿಂಗಳಲ್ಲಿ ಮುಂಗಾರು ಮಳೆ ಸರಿಯಾಗಿ ಸುರಿಯದೆ ಮಳೆಯಾಶ್ರಿತ ರಾಗಿ, ನೆಲಗಡಲೆ ಮತ್ತಿತರರ ಬೆಳೆ ತಡವಾಗಿದೆ. ಆಗಸ್ಟ್ ತಿಂಗಳಲ್ಲಿ ಮಳೆಯಾಗುತ್ತಿದ್ದು ಯಾವುದೇ ಬೆಳೆಯನ್ನು ಬೆಳೆದ 40-45 ದಿನಗಳ ನಂತರ ಯೂರಿಯಾ ಹಾಕ ಬೇಕಾಗುತ್ತದೆ. ಬಿತ್ತನೆ ಮಾಡಿರುವ ಹೊಲಗಳಿಗೆ ಗೊಬ್ಬರ ಬೇಕಾಗಿದ್ದು ರೈತರು ಮುಗಿ ಬೀಳುತ್ತಿದ್ದಾರೆ.
ಉತ್ತರ ಭಾರತದಲ್ಲಿ ಹೆಚ್ಚು ಮಳೆ ಸುರಿಯುತ್ತಿರುವ ಪರಿಣಾಮ ಸಾಮಾನ್ಯವಾಗಿ ಯೂರಿಯಾಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ದಕ್ಷಿಣ ಭಾಗದಲ್ಲಿ ಜುಲೈ ನಂತರ ಮಳೆಯಾಗುತ್ತಿರುವ ಪರಿಣಾಮ ಅವಶ್ಯಕತೆಗಿಂತಲೂ ಹೆಚ್ಚು ಯೂರಿಯಾ ಗೋದಾಮುಗಳಲ್ಲಿ ಸಂಗ್ರಹವಾಗುತ್ತಿದೆ. ರೈತರು ಚಿಂತಿಸುವ ಅವಶ್ಯ ಇಲ್ಲ ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ.
ತಾಲ್ಲೂಕಿನಲ್ಲಿ ಸುಮಾರು ಶೇ40ರಷ್ಟು ರೈತರು ಮಳೆಯಾಶ್ರಿತ ಬೆಳೆ ಬೆಳೆಯುತ್ತಿದ್ದು ಆವಣಿ, ದುಗ್ಗಸಂದ್ರ, ತಾಯಲೂರು ಹೋಬಳಿಗಳಲ್ಲಿ ರಾಗಿ ಹೆಚ್ಚಾಗಿದ್ದರೆ, ಬೈರಕೂರು ಹಾಗೂ ಕಸಬಾ ಹೋಬಳಿಯ ಕೆಲವು ಕಡೆ ನೆಲಗಡಲೆ ಹೆಚ್ಚು ಬೆಳೆಯುತ್ತಿದ್ದಾರೆ. ಯೂರಿಯಾದಿಂದಲೇ ಫಸಲು ಹೆಚ್ಚಾಗುತ್ತದೆ ಎಂದು ರೈತರು ತಿಳಿಯಬಾರದು ಎಂಬುವುದು ಕೃಷಿ ಪರಿಣಿತರು ಹೇಳುತ್ತಾರೆ.
ತಾಲ್ಲೂಕಿನಲ್ಲಿ ಡಿ.ಎ.ಪಿ ಗೊಬ್ಬರ ಗೋದಾಮುಗಳಲ್ಲಿ 126.6 ಟನ್ ಸಂಗ್ರಹ ಇದ್ದರೆ, ಯೂರಿಯಾ 250.4, ಕಾಂಪ್ಲೆಕ್ಸ್ 648.2, ಎಂಒಪಿ 24.1, ಎಸ್.ಎಸ್.ಪಿ 16.8 ಸೇರಿದಂತೆ ಒಟ್ಟು 1066.1 ಟನ್ ಗೊಬ್ಬರ ಸಂಗ್ರಹ ಇದೆ ಎನ್ನುವುದು ಕೃಷಿ ಅಧಿಕಾರಿಗಳ ಮಾಹಿತಿ.
ಮಳೆ ಸಮೃದ್ಧವಾಗಿ ಬೆಳೆಯುತ್ತಿರುವ ಕಾರಣದಿಂದ ರಾಗಿ ನೆಲಗಡಲೆ ಸೇರಿದಂತೆ ಎಲ್ಲ ಮಳೆಯಾಶ್ರಿತ ಹಾಗೂ ವಾಣಿಜ್ಯ ಬೆಳೆಗಳಿಗೆ ಯೂರಿಯಾ ಅತ್ಯವಶ್ಯರಮೇಶ್ ನಾಗೇನಹಳ್ಳಿ
ಗೊಬ್ಬರ ಕೊರತೆ ಇಲ್ಲ: ಯೂರಿಯಾಗೆ ತಾಲ್ಲೂಕಿನಲ್ಲಿ ಯಾವುದೇ ಕೊರತೆ ಇಲ್ಲ. ನಿಗದಿತ ಪ್ರಮಾಣಕ್ಕಿಂತಲೂ ಎರಡರಷ್ಟು ಸಂಗ್ರಹ ತಾಲ್ಲೂಕಿನಲ್ಲಿ ಇದೆ. ಆದರೆ ರೈತರು ಯೂರಿಯಾ ಹೆಚ್ಚು ಬಳಸಬಾರದು. ಬಳಕೆಯಿಂದ ಸಸಿ ಅಥವಾ ಬೆಳೆಗಳು ಎತ್ತರಕ್ಕೆ ಬೆಳೆಯುತ್ತದೆ. ಆದರೆ ಫಸಲು ಸರಿಯಾಗಿ ಬರುವುದಿಲ್ಲ. ಕಡಿಮೆ ಬಳಸಬೇಕು.ಎಸ್.ರವಿಕುಮಾರ್ ಸಹಾಯಕ ಕೃಷಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.