
ಮುಳಬಾಗಿಲು: ತಾಲ್ಲೂಕು ಪಶುಪಾಲನಾ ಇಲಾಖೆ ವತಿಯಿಂದ ನಂಗಲಿ ಗ್ರಾಮದಲ್ಲಿ ಸೋಮವಾರ ಹೆಚ್ಚು ಹಾಲು ಕರೆಯುವ ಸ್ಪರ್ಧೆ ನಡೆಯಿತು. ಬೆಳಗ್ಗೆ ಮತ್ತು ಸಂಜೆ ಹೆಚ್ಚು ಹಾಲು ಕರೆದ ಹಸುಗಳಿಗೆ ಬಹುಮಾನ ವಿತರಿಸಲಾಯಿತು.
ತಾಲ್ಲೂಕಿನಲ್ಲಿ ಸುಮಾರು 400ಕ್ಕೂ ಹೆಚ್ಚು ಗ್ರಾಮಗಳಿವೆ. ಆದರೆ, ಇಲಾಖೆಯ ಪ್ರಚಾರದ ಕೊರತೆಯಿಂದ ಕೇವಲ ನಾಲ್ಕೈದು ಗ್ರಾಮಗಳ ಹಸುಗಳು ಮಾತ್ರ ಭಾಗವಹಿಸಿದ್ದವು.
ತಾಲ್ಲೂಕಿನ ಕುರುಬರಹಳ್ಳಿ ಗ್ರಾಮದ ಶ್ರೀನಾಥ್ ಅವರ ಹಸು ಒಂದು ದಿನದಲ್ಲಿ 43.3 ಲೀಟರ್ ಹಾಲು ನೀಡುವ ಮೂಲಕ ಪ್ರಥಮ ಸ್ಥಾನ ಪಡೆದು ₹30 ಸಾವಿರ ನಗದು ಬಹುಮಾನ ಗಳಿಸಿತು. ಬಿಕ್ಕನಹಳ್ಳಿಯ ಶ್ರೀನಿವಾಸಯ್ಯ ಅವರ ಹಸು 43 ಲೀಟರ್ ಹಾಲು ನೀಡಿ ದ್ವಿತೀಯ ಸ್ಥಾನ ಪಡೆದು ₹20 ಸಾವಿರ ಬಹುಮಾನ ಗಳಿಸಿತು. ಎಚ್.ಕೋಡಿಹಳ್ಳಿ ಗ್ರಾಮದ ಸುಬ್ರಮಣಿ ಅವರ ಹಸು 42 ಲೀಟರ್ ಹಾಲು ನೀಡಿ ತೃತೀಯ ಸ್ಥಾನ ಪಡೆದು ₹10 ಸಾವಿರ ನಗದು ಬಹುಮಾನ ಪಡೆಯಿತು.
ಬಿಬಿಎಂಪಿ ಮಾಜಿ ಸದಸ್ಯ ಹರಿರೆಡ್ಡಿ ಮಾತನಾಡಿ, ಹೈನುಗಾರಿಕೆ ತಾಲ್ಲೂಕಿನ ಜನರ ಬೆನ್ನೆಲುಬು. ಹಾಲನ್ನೇ ನಂಬಿಕೊಂಡು ಬದುಕುತ್ತಿರುವ ಕುಟುಂಬಗಳಿಗೆ ಯಾವುದೇ ಸಮಸ್ಯೆ ಇದ್ದರೂ ನನ್ನ ಸಹಕಾರ ಇರುತ್ತದೆ. ಇಲಾಖೆ ವತಿಯಿಂದ ಹೆಚ್ಚು ಪ್ರಚಾರ ಮಾಡಿದ್ದರೆ ಮತ್ತಷ್ಟು ಹಸುಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದವು. ಹಾಗಾಗಿ ಕಾರ್ಯಕ್ರಮ ನೀರಸವಾಗಿದೆ. ಮುಂದಿನ ಕಾರ್ಯಕ್ರಮಗಳಲ್ಲಿ ಈ ತಪ್ಪುಗಳನ್ನು ತಿದ್ದುಕೊಳ್ಳಿ ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಎನ್.ಸಿ.ಶ್ರೀಧರ್, ಜ್ಯೋತಿ ಹರಿನಾಥ ರೆಡ್ಡಿ, ಸದಸ್ಯ ಲಕ್ಷ್ಮಿಪತಿ, ಮುನಿರೆಡ್ಡಿ, ವಿಶ್ವನಾಥ ರೆಡ್ಡಿ , ಪಶುಪಾಲನಾ ಇಲಾಖೆ ತಾಲ್ಲೂಕು ನಿರ್ದೇಶಕಿ ಅನುರಾಧ ಹಾಗೂ ಪಶುಪಾಲನಾ ಇಲಾಖೆಯ ವೈದ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.