ADVERTISEMENT

ಮುಳಬಾಗಿಲು | ಕೋಡಿ ಹರಿಯುತ್ತಿರುವ ಕೆರೆಗಳು: ಭರ್ಜರಿ ಮೀನು ಶಿಕಾರಿ

ಕೆ.ತ್ಯಾಗರಾಜ್ ಎನ್.ಕೊತ್ತೂರು.
Published 26 ಅಕ್ಟೋಬರ್ 2025, 7:29 IST
Last Updated 26 ಅಕ್ಟೋಬರ್ 2025, 7:29 IST
ಮುಳಬಾಗಿಲು ತಾಲ್ಲೂಕಿನಲ್ಲಿ ಕೆರೆಗಳು ಕೋಡಿ ಹರಿಯುತ್ತಿದ್ದು ಮುಷ್ಟೂರು ಕೌಂಡಿನ್ಯ ನದಿಯಲ್ಲಿ (ಏಟಿ) ಮೀನುಗಳನ್ನು ಬೇಟೆಯಾಡುತ್ತಿರುವ ಮೀನು ಪ್ರಿಯರು
ಮುಳಬಾಗಿಲು ತಾಲ್ಲೂಕಿನಲ್ಲಿ ಕೆರೆಗಳು ಕೋಡಿ ಹರಿಯುತ್ತಿದ್ದು ಮುಷ್ಟೂರು ಕೌಂಡಿನ್ಯ ನದಿಯಲ್ಲಿ (ಏಟಿ) ಮೀನುಗಳನ್ನು ಬೇಟೆಯಾಡುತ್ತಿರುವ ಮೀನು ಪ್ರಿಯರು   

ಮುಳಬಾಗಿಲು: ತಾಲ್ಲೂಕಿನಲ್ಲಿ ಇತ್ತೀಚೆಗೆ ಸತತವಾಗಿ ಬೀಳುತ್ತಿರುವ ಭಾರಿ ಮಳೆಗೆ ತಾಲ್ಲೂಕಿನ ಬಹುತೇಕ ಕೆರೆಗಳು ತುಂಬಿ ಕೋಡಿ ಹರಿಯುತ್ತಿದ್ದು, ಮೀನು ಬೇಟೆಗಾರರು ಭರ್ಜರಿ ಮೀನು ಶಿಕಾರಿಯಲ್ಲಿ ತೊಡಗಿದ್ದಾರೆ.

ಮುಳಬಾಗಿಲು ತಾಲ್ಲೂಕಿನಲ್ಲಿ ಒಟ್ಟು 436 ಕೆರೆಗಳಿದ್ದು, ಇದರಲ್ಲಿ 35 ಕೆರೆಗಳು ಸಣ್ಣ ನೀರಾವರಿ ಇಲಾಖೆಗೆ ಸೇರಿವೆ. ಉಳಿದವು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸೇರುತ್ತವೆ. ಸುಮಾರು ಒಂದು ತಿಂಗಳಿನಿಂದ ಸುರಿದ ಮಳೆಯಿಂದಾಗಿ ಶೇಕಡಾ 90ರಷ್ಟು ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ. ಇನ್ನು ಕೆಲವು ಕೋಡಿ ಹರಿಯುವ ಹಂತದಲ್ಲಿವೆ.

ನಾಲ್ಕು ವರ್ಷಗಳ ಹಿಂದೆ ಮಳೆಯಿಂದಾಗಿ ಕೆರೆಗಳು ಕೋಡಿ ಹೋಗಿದ್ದಾಗ ಭೀಕರ ಬರಗಾಲದಿಂದ ಬತ್ತಿ ಹೋಗಿದ್ದ ಭೂಮಿಯಲ್ಲಿ ನೀರು ಹಿಂಗದಂತೆ ಅಂತರ್ಜಲ ಹೆಚ್ಚಾಗಲಿ ಎಂದು ತೂಬುಗಳನ್ನು ತೆರೆಯದಂತೆ ಅಂದಿನ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಕೆರೆಗಳ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸದಂತೆ ಆದೇಶ ಮಾಡಿದ್ದರು. ಹಾಗಾಗಿ ಕೆರೆಗಳು ತುಂಬಿದಾಗಿನಿಂದಲೂ ತೂಬುಗಳನ್ನು ತೆರೆದಿರಲಿಲ್ಲ. ಹಾಗಾಗಿ ಬಹುತೇಕ ಕೆರೆಗಳಲ್ಲಿ ಅಲ್ಪ ಸ್ವಲ್ಪ ನೀರು ಪ್ರಸಕ್ತ ಸಾಲಿನಲ್ಲಿ ತುಂಬುವ ಮೊದಲೇ ಸಂಗ್ರಹವಾಗಿತ್ತು.

ADVERTISEMENT

ಇನ್ನು ಎಲ್ಲಾ ಕೆರೆಗಳು ಬಹುತೇಕ ತುಂಬಿ ಕೋಡಿ ಹರಿಯುತ್ತಿರುವ ಕಾರಣದಿಂದಾಗಿ ರೈತರು ಕೆರೆಯ ನೀರಿನಿಂದ ಕೃಷಿ ಚಟುವಟಿಕೆಗಳು ಮಾಡಬಹುದು ಎಂಬ ಸಂತೋಷದಿಂದ ಕೆರೆಗಳ ತೂಬುಗಳು ಯಾವಾಗ ತೆಗೆಯಬಹುದು ಎಂದು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. 

ಮಳೆ ನೀರಿನ ಜೊತೆಯಲ್ಲಿ ಕಾಟ್ಲಾ, ರೋಹೊ, ಕಾಮನ್ ಕಾರ್ಫ್, ಗ್ರಾಸ್ ಕಾರ್ಫ್ ಮತ್ತಿತರರ ಜಾತಿಯ ಮೀನುಗಳು ಮಳೆಯ‌‌ ಕೋಡಿಯಲ್ಲಿ ಕೊಚ್ಚಿ ಹೋಗುತ್ತಿದ್ದು, ಮೀನು ಬೇಟೆಗಾರರು ಮೀನು ಹಿಡಿಯುತ್ತಿದ್ದಾರೆ. ಕೆಲವರು ಬಲೆ, ಗಾಲ, ಕೊಡ ಮತ್ತಿತರರ ಸಾಧನಗಳಿಂದ ಮೀನು ಹಿಡಿಯುತ್ತಿದ್ದರೆ, ಮತ್ತೆ ಕೆಲವೆಡೆ ನೀರಿನ ಮೇಲೆ ತೇಲಿ ಹೋಗುವ ಮೀನುಗಳನ್ನು ದೊಣ್ಣೆಗಳಿಂದ ಹೊಡೆದು, ಟೊಮೆಟೊ ಬಾಕ್ಸ್‌ಗಳನ್ನು ಮುಚ್ಚಿ ಹಿಡಿಯುತ್ತಿದ್ದಾರೆ. ಹಾಗಾಗಿ ಎಲ್ಲಿ ನೋಡಿದರೂ ಮೀನು ಬೇಟೆಗಾರರ ಗುಂಪುಗಳು ಸಾಮಾನ್ಯವಾಗಿವೆ.

ತಾಲ್ಲೂಕಿನಲ್ಲಿ ಯಥೇಚ್ಛವಾಗಿ ಮಳೆ ಬಿದ್ದು ಕೆರೆಗಳು ತುಂಬಿ ಕೋಡಿ ಹರಿಯುತ್ತಿದ್ದಂತೆ ಕೆರೆ ಕೋಡಿ, ಏಟಿಗಳಲ್ಲಿ, ಕುಂಟೆ, ಕಾಲುವೆಗಳಲ್ಲಿ ಹಾಗೂ ಕೆರೆಯ ನೀರು ಹರಿಯುವ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಮೀನುಗಳನ್ನು ಹಿಡಿಯಲು ಮೀನು ಬೇಟೆಗಾರರು ಹಗಲು ರಾತ್ರಿ ಎನ್ನದೆ ಬಿಡಾರ ಹೂಡಿರುವ ದೃಶ್ಯಗಳು ಎಲ್ಲೆಂದರಲ್ಲಿ ಕಂಡುಬರುತ್ತಿದೆ.

ಕೆರೆಗಳಲ್ಲಿದ್ದ ಮೀನುಗಳು ಆಚೆಗೆ: ಈಗಾಗಲೇ ಸುಮಾರು ವರ್ಷಗಳಿಂದ ಕೆರೆಗಳಲ್ಲಿ ಮೀನು ಸಂಗ್ರಹವಾಗಿದ್ದ ಕಾರಣದಿಂದಾಗಿ ಕೆರೆಗಳಲ್ಲಿ ಲಕ್ಷಾಂತರ ಮೀನು ಮರಿಗಳನ್ನು ಬಿಟ್ಟಿದ್ದ ಕಾರಣದಿಂದ ಎಲ್ಲಾ ಕೆರೆಗಳಲ್ಲಿ ಸುಮಾರು ಎರಡು ಮೂರು ಕೆಜಿಗಳಿಂದ ಸುಮಾರು ಹತ್ತು ಕೆಜಿವರೆಗೂ ಮೀನುಗಳು ದಪ್ಪಗಾಗಿದ್ದವು. ಕೆರೆ ಕೋಡಿಗಳಿಂದ ಕೋಡಿಯ ರಭಸಕ್ಕೆ ಮೀನುಗಳು ಕೋಡಿಯ ನೀರಿನ ಜೊತೆಗೆ ಕಾಲುವೆ ಹಾಗೂ ಏಟಿಗಳಲ್ಲಿ ಹರಿದು ಬರುತ್ತಿದೆ. ಇದರಿಂದ ಮೀನುಗಳು ಬೇಟೆಗಾರರ ಪಾಲಾಗುತ್ತಿವೆ.

ಲಕ್ಷಾಂತರ ನಷ್ಟ ಅನುಭವಿಸುತ್ತಿರುವ ಟೆಂಡರ್‌ದಾರರು: ನಾಲ್ಕು ವರ್ಷಗಳ ಹಿಂದೆ ಇಂತಿಷ್ಟು ಎಂದು ಹಣದ ಮೊತ್ತಕ್ಕೆ ಕೆರೆಗಳಲ್ಲಿನ ಮೀನುಗಳನ್ನು ಹರಾಜು ಕೂಗಿದ್ದ ಮೀನುಗಾರರಿಗೆ ಕೆರೆ ಕೋಡಿಗಳಿಂದ ಮೀನುಗಳು ಕೆರೆಯಿಂದ ಆಚೆ ಹೋಗುತ್ತಿವೆ. ಇದರಿಂದ ಹರಾಜುದಾರರು ನಷ್ಟ ಅನುಭವಿಸುವಂತಾಗಿದೆ ಎಂದು ಹರಾಜುದಾರ ರಮೇಶ್ ತಿಳಿಸಿದರು.

ನಂಗಲಿ ಕೆರೆ ಕೋಡಿಯ ನೀರಿನಲ್ಲಿ ಹಿಡಿದಿರುವ ಮೀನುಗಳು 
ಮೀನು ಮಾರಾಟದಿಂದ ದಿನಕ್ಕೆ ₹1500 ಗಳಿಕೆ ಭಾರಿ ಮಳೆಯಿಂದ ಕೋಡಿಯಲ್ಲಿ ಮೀನುಗಳು ಹರಿದು ಬರುತ್ತಿದ್ದು ಒಂದು ದಿನಕ್ಕೆ ಸುಮಾರು 30-40 ಕೆಜಿ ಮೀನುಗಳನ್ನು ಹಿಡಿಯಲಾಗುತ್ತಿದೆ. ಕೆಲವನ್ನು ಮನೆಯಲ್ಲಿ ಆಹಾರಕ್ಕಾಗಿ ಬಳಸಿದರೆ ಉಳಿದವನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದ ದಿನಕ್ಕೆ ₹1500 ರಿಂದ ₹2000 ಗಳಿಸಲಾಗುತ್ತಿದೆ.
ಕೃಷ್ಣ ಕೊತ್ತೂರು
ಕೋಡಿಯಲ್ಲಿ ಹರಿಯುತ್ತಿರುವ ಮೀನು ಕೆರೆಗಳು ಕೋಡಿ ಹೋಗುತ್ತಿರುವುದರಿಂದ ಒಂದು ಕಡೆ ಖುಷಿಯಾದರೆ ಮತ್ತೊಂದು ಕಡೆ ಮೀನುಗಳನ್ನು ಹರಾಜು ಕೂಗಿ ಲಕ್ಷಾಂತರ ಮೀನುಗಳು ಕೋಡಿಗಳಲ್ಲಿ ಹರಿದು ಹೋಗುತ್ತಿದೆ. ಇದರಿಂದ ಭಾರಿ ನಷ್ಟ ಅನುಭವಿಸುವಂತಾಗಿದೆ.
ರಮೇಶಪ್ಪ ನಂಗಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.