ADVERTISEMENT

ಮುಳಬಾಗಿಲು | ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 7:33 IST
Last Updated 27 ಫೆಬ್ರುವರಿ 2026, 7:33 IST
ಕೋದಂಡ
ಕೋದಂಡ   

ಮುಳಬಾಗಿಲು: ಬೇರೊಬ್ಬರ ಹೆಸರಿನಲ್ಲಿ ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದ ವ್ಯಕ್ತಿಗೆ ಮುಳಬಾಗಿಲು ಪ್ರಧಾನ ಮತ್ತು ಸಿವಿಲ್ ನ್ಯಾಯಾಲಯ ಶಿಕ್ಷೆ ವಿಧಿಸಿದ್ದರೂ, ಎರಡು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಅಪರಾಧಿಯನ್ನು ಮುಳಬಾಗಿಲು ಪೊಲೀಸರು ಗುರುವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮುಳಬಾಗಿಲು ತಾಲ್ಲೂಕಿನ ತಾಯಲೂರು ಹೋಬಳಿಯ ಶೆಟ್ಟಿಕಲ್ಲು ಗ್ರಾಮದ ಕೋದಂಡ (40) ಬಂಧಿತ ಆರೋಪಿ. 

2004ರ ಅ.12ರಂದು ಮುಳಬಾಗಿಲು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಇಂಗ್ಲಿಷ್ ಪರೀಕ್ಷೆಯಂದು ಬಿ.ಎಂ.ಮಂಜುನಾಥ್ ಎಂಬುವವರಿಗೆ ಸೇರದ್ದ ನೋಂದಣಿ ಸಂಖ್ಯೆಯಲ್ಲಿ ಕೋದಂಡ ಪರೀಕ್ಷೆ ಬರೆಯುತ್ತಿದ್ದರು. ಈ ವೇಳೆ ಪರೀಕ್ಷಾ ಜಾಗೃತ ದಳದವರು ಅನುಮಾನಗೊಂಡು ಕೋದಂಡನನ್ನು ವಿಚಾರಿಸಿದಾಗ ಬೇರೊಬ್ಬರ ಹೆಸರಿನಲ್ಲಿ ತಾನು ಪರೀಕ್ಷೆ ಬರೆಯುತ್ತಿರುವುದಾಗಿ ತಿಳಿಸಿದ್ದಾರೆ. ಹಾಗಾಗಿ ತನಿಖಾಧಿಕಾರಿ ಪಿಎಸ್ಐ ಜಿ.ಪ್ರಭಾಕರ್ ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.

ADVERTISEMENT

ಈ ಕುರಿತು ವಿಚಾರಣೆ ನಡೆಸಿದಾಗ ಆರೋಪ ಸಾಬೀತಾದ ಹಿನ್ನೆಲೆ ಪ್ರಧಾನ ಮತ್ತು ಸಿವಿಲ್ ನ್ಯಾಯಾಲಯ ಆರೋಪಿಗೆ 1 ವರ್ಷ ಆರು ತಿಂಗಳು ಜೈಲು ಶಿಕ್ಷೆ ಹಾಗೂ ₹5 ಸಾವಿರ ದಂಡ ವಿಧಿಸಿತ್ತು. ದಂಡವನ್ನು ಪಾವತಿಸದಿದ್ದರೆ ನಾಲ್ಕು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸತಕ್ಕದ್ದು ಎಂದು ಆದೇಶಿಸಿತ್ತು.

ಆದರೆ, ಆರೋಪಿ ಈ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಪ್ರಧಾನ ಮತ್ತು ಸಿವಿಲ್ ನ್ಯಾಯಾಲಯದ ಆದೇಶ ಪಾಲಿಸುವಂತೆ ನಿರ್ದೇಶನ ನೀಡಿತ್ತು. ಆದರೆ, ಆರೋಪಿ ಯಾವುದನ್ನು ಪಾಲಿಸದೆ ಎರಡು ವರ್ಷಗಳಿಂದ ತಲೆ ಮರೆಸಿಕೊಂಡಿದ್ದರು. ಹಾಗಾಗಿ ಆರೋಪಿಯ ವಿರುದ್ಧ ನ್ಯಾಯಾಲವು ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ಅದರಂತೆ ಮುಳಬಾಗಿಲು ನಗರ ಠಾಣೆ ಇನ್‌ಸ್ಪೆಕ್ಟರ್ ಎಂ.ಆರ್.ಅಣ್ಣಯ್ಯ ಮಾರ್ಗದರ್ಶನದಲ್ಲಿ ಕಾನ್‌ಸ್ಟೆಬಲ್ ಶಂಕರ್ ಶೇಖರ್ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದೇ ಪ್ರಕರಣದಲ್ಲಿ ಸಿಲುಕಿದ್ದ ಬಿ.ಎಂ.ಮಂಜುನಾಥ್ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಸುಮತಿ ಶಾಂತ ಮೇರಿ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.