ADVERTISEMENT

ಮುಳಬಾಗಿಲು: ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 5:03 IST
Last Updated 13 ಜನವರಿ 2026, 5:03 IST
ಮುಳಬಾಗಿಲು ನಗರದ ಕೋಮುಲ್ ಶಿಬಿರ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿದರು 
ಮುಳಬಾಗಿಲು ನಗರದ ಕೋಮುಲ್ ಶಿಬಿರ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿದರು    

ಮುಳಬಾಗಿಲು: ನಗರದ ಕೋಮುಲ್ ಶಿಬಿರ ಕಚೇರಿಯಲ್ಲಿ ಸೋಮವಾರ ಶಾಸಕ‌‌ ಸಮೃದ್ಧಿ ಮಂಜುನಾಥ್ ನೇತೃತ್ವದಲ್ಲಿ ಎಲ್ಲಾ ಇಲಾಖೆ  ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಈ ವೇಳೆ ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿ, ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ಮಧ್ಯವರ್ತಿಗಳ ಕೈಯಲ್ಲಿ ಮಾಹಿತಿ ಹಕ್ಕು ಅರ್ಜಿ ಹಾಕಿಸಿ, ಮಾಹಿತಿ ಪಡೆದು ಕಚೇರಿಯಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಅಪಪ್ರಚಾರ ಮಾಡಿ ತಾಲ್ಲೂಕು ಆಡಳಿತದ ಸಣ್ಣ ಪುಟ್ಟ ಲೋಪದೋಷಗಳನ್ನು ಸೋರಿಕೆ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಹಾಗಾಗಿ  ಅವರನ್ನು ಕಚೇರಿಯಿಂದ ಹೊರ ಹಾಕಲಾಗಿದೆ ಎಂದರು.

ಕೆಲವು ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು 15 ವರ್ಷಗಳಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಾ ತಾಲ್ಲೂಕಿನ ಕಂದಾಯ ಭೂಮಿಯನ್ನು ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಜೊತೆಗೆ ಎರಡು ಎಕರೆ ಜಮೀನನ್ನು ಖರೀದಿಸಿದರೆ ಪಕ್ಕದಲ್ಲಿರುವ ಸರ್ಕಾರಿ ಜಮೀನಿಗೆ ದಾಖಲೆ ಸೃಷ್ಟಿಸಿ ರಿಯಲ್ ಎಸ್ಟೇಟ್ ಪಾಲಾಗುವಂತೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ ಎಂದರು.

ADVERTISEMENT

ಮುಳಬಾಗಿಲು ನಗರದಿಂದ ದೇವರಾಯ ಸಮುದ್ರ ಹೆದ್ದಾರಿಯ ಟೋಲ್‌ವರೆಗೂ ಕೆಲವು ರಾಜಸ್ವ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸರ್ಕಾರಿ ಜಮೀನುಗಳಿಗೆ ನಕಲಿ ದಾಖಲೆ ಸೃಷ್ಟಿಸಿ ರಿಯಲ್ ಎಸ್ಟೇಟ್ ಉದ್ಯಮಿಗಳು ಕಾಂಪೌಂಡ್‌ ಹಾಕಿಕೊಳ್ಳುವಂತೆ ಮಾಡುತ್ತಿದ್ದಾರೆ. ತಾಲ್ಲೂಕಿನ ಯಾವುದೇ ಅಧಿಕಾರಿ ಇಷ್ಟ ಇದ್ದರೆ ಮಾತ್ರ ಕೆಲಸ ಮಾಡಿ, ಇಲ್ಲವಾದಲ್ಲಿ ತಮಗೆ ತಾವೆ ವರ್ಗಾವಣೆ ಮಾಡಿಕೊಂಡು ತಾಲ್ಲೂಕಿನಿಂದ ಹೊರಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಹಶೀಲ್ದಾರ್ ವಿ.ಗೀತಾ, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಎನ್.ಎಂ.ಬಾಬು, ನಗರಸಭೆ ಪೌರಾಯುಕ್ತ ವಿ.ಶ್ರೀಧರ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ರಾಮಚಂದ್ರಪ್ಪ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಉಮಾಶಂಕರ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.