ADVERTISEMENT

ಕಸದ ಒಡಲಾದ ವಿಠಲೇಶ್ವರ ಕಲ್ಯಾಣಿ | ಕಲುಷಿತಗೊಂಡ ನೀರು: ಸಾಂಕ್ರಾಮಿಕ ರೋಗದ ಭೀತಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 7:37 IST
Last Updated 4 ಜನವರಿ 2026, 7:37 IST
ಮುಳಬಾಗಿಲು ನಗರದ ವಿಠಲೇಶ್ವರ ದೇವಾಲಯದ ರಸ್ತೆಯಲ್ಲಿರುವ ವಿಠಲೇಶ್ವರ ಕಲ್ಯಾಣಿ ತ್ಯಾಜ್ಯದಿಂದ ನೀರು ಹಸಿರಾಗಿರುವುದು
ಮುಳಬಾಗಿಲು ನಗರದ ವಿಠಲೇಶ್ವರ ದೇವಾಲಯದ ರಸ್ತೆಯಲ್ಲಿರುವ ವಿಠಲೇಶ್ವರ ಕಲ್ಯಾಣಿ ತ್ಯಾಜ್ಯದಿಂದ ನೀರು ಹಸಿರಾಗಿರುವುದು   

ಮುಳಬಾಗಿಲು: ನಗರದ ಹೃದಯ ಭಾಗದಲ್ಲಿರುವ ವಿಠಲೇಶ್ವರ ಕಲ್ಯಾಣಿ ನೀರಿನಲ್ಲಿ ನಾನಾ ಬಗೆಯ ತ್ಯಾಜ್ಯ ತುಂಬಿ ದುರ್ವಾಸನೆ ಬೀರುತ್ತಿದೆ. ಇದರಿಂದ ಭಕ್ತಿಯಿಂದ ಸ್ನಾನ ಮಾಡಬೇಕಿರುವ ನೀರು ಸಾಂಕ್ರಾಮಿಕ ರೋಗಗಳನ್ನು ಹರಡುವಂತಿದೆ.

ಧನ್ವಂತರಿ ದೇವಾಲಯದ ಪಕ್ಕದಲ್ಲಿರುವ ವಿಠಲೇಶ್ವರ ಕಲ್ಯಾಣಿಯಲ್ಲಿ ಪ್ಲಾಸ್ಟಿಕ್ ವಸ್ತುಗಳು, ಒಣಗಿದ ತೆಂಗಿನ ಚಿಪ್ಪು, ಒಣಗಿದ ಹುಲ್ಲು, ಪೇಪರ್ ಮತ್ತಿತರರ ವಸ್ತುಗಳು ನೀರಿನಲ್ಲಿ ಕೊಳೆತು ನಾರುತ್ತಿದೆ. ಹಾಗಾಗಿ ಕಲ್ಯಾಣಿ ನೀರು ಸಂಪೂರ್ಣ ತ್ಯಾಜ್ಯ ಮಿಶ್ರಣದಿಂದ ಹಸಿರು ಬಣ್ಣವಾಗಿ ಮಾರ್ಪಟ್ಟಿದೆ. ಇದರಿಂದ ಭಕ್ತಿಯಿಂದ ನಮಸ್ಕಾರ ಮಾಡಿ ತಲೆಯ ಮೇಲೆ ಹಾಕಿಕೊಳ್ಳಬೇಕಾದ ನೀರು ಮುಟ್ಟಲೂ ಯೋಗ್ಯವಾಗಿಲ್ಲ.

ಕಲ್ಯಾಣಿ ಸುತ್ತಲೂ ಸುಸಜ್ಜಿತ ಕಬ್ಬಿಣದ ಜಾಲರಿ ಅಳವಡಿಸಿದರೂ ಒಂದು ಕಡೆ ಬಾಗಿಲನ್ನು ಇಡಲು ಸ್ಥಳಾವಕಾಶ ಬಿಡಲಾಗಿದೆ. ಆದರೆ ವರ್ಷಗಳು ಕಳೆದರೂ ಇನ್ನೂ ಬಾಗಿಲನ್ನು ಇಟ್ಟಿಲ್ಲ. ಹಾಗಾಗಿ ಪುಂಡ ಪೋಕರಿಗಳು ಕಲ್ಯಾಣಿ ಮೆಟ್ಟಿಲುಗಳ ಮೇಲೆ ಕುಳಿತು ಗುಟ್ಕಾ ಅಗೆದು ಉಗಿದಿದ್ದು, ಕಲ್ಯಾಣಿ ಅಪವಿತ್ರವಾಗಿ ಬದಲಾಗುತ್ತಿದೆ.

ADVERTISEMENT

ಕಲ್ಯಾಣಿ ಮೆಟ್ಟಿಲುಗಳಿಗೆ ಹೊಂದಿಕೊಂಡಂತೆ ಹುಲ್ಲು ಬೆಳೆದಿದ್ದು, ಕಸ, ಕಡ್ಡಿ ಜೊತೆಗೆ ಹುಲ್ಲು, ಪಾಚಿಯಿಂದ ಸ್ವಚ್ಛತೆ ಇಲ್ಲದಂತಾಗಿದೆ. ಜೊತೆಗೆ ಕಲ್ಯಾಣಿ ಮೆಟ್ಟಿಲುಗಳು ಪಾಚಿಯಿಂದ ಕಾಲಿಟ್ಟರೆ ಬೀಳುವ ಸ್ಥಿತಿ ತಲುಪಿದೆ. ಎರಡು ತಿಂಗಳ ಹಿಂದೆ ವ್ಯಕ್ತಿಯೊಬ್ಬರು ಜಾರಿ ಬಿದ್ದು ಸಾವನ್ನಪ್ಪಿದ್ದರು. ಆದರೂ, ಕಲ್ಯಾಣಿಯನ್ನು ಸಂಬಂಧಿಸಿದ ಅಧಿಕಾರಿಗಳು ಸ್ವಚ್ಛಗೊಳಿಸದೆ ಬೇಜವಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ.

ಮತ್ತೊಂದು ಯಾವುದೇ ಅನಾಹುತ ಸಂಭವಿಸುವ ಮೊದಲು ಸಂಬಂಧಪಟ್ಟವರು ಎಚ್ಚೆತ್ತು ಕಲ್ಯಾಣಿಯನ್ನು ಸ್ವಚ್ಛಗೊಳಿಸಿ, ಭಕ್ತರಿಗೆ ಅನುವು ಮಾಡಿಕೊಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಕಲ್ಯಾಣಿಯ ಸ್ಥಿತಿ
ಇತ್ತೀಚೆಗೆ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಕುಂಟೆಯನ್ನು ಸ್ವಚ್ಛಗೊಳಿಸಲಾಗಿತ್ತು. ಕುಂಟೆಯ ನಿರ್ವಹಣೆ ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ.
ವಿ.ಶ್ರೀಧರ್ ನಗರಸಭೆ ಪೌರಾಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.