ಮುಳಬಾಗಿಲು: ನಗರದ ತಾಲ್ಲೂಕು ಕಚೇರಿಯಲ್ಲಿ ನಾರಾಯಣ ಗುರುವಿನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅವರ ಜಯಂತಿ ಆಚರಿಸಲಾಯಿತು.
ಬಳಿಕ ಮಾತನಾಡಿದ ತಹಶೀಲ್ದಾರ್ ವಿ. ಗೀತಾ, ‘ಬ್ರಹ್ಮಶ್ರೀ ನಾರಾಯಣ ಗುರು ಜಾತಿ, ಮತಗಳ ತಾರತಮ್ಯ ತೊರೆದು ಎಲ್ಲರೂ ಒಂದೇ ಎಂಬ ಸಾರ್ವತ್ರಿಕ ತತ್ವವನ್ನು ಸಾರಿದ ಮಹಾಪುರುಷ. ಅವರ ಆದರ್ಶ ಹಾಗೂ ತತ್ವಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಒಂದೇ ಜಾತಿ, ಒಂದೇ ಮತ ಎಂಬ ಸಂದೇಶ ಸಾರುತ್ತಿದ್ದ ಅವರು, ಪ್ರತಿಯೊಬ್ಬರೂ ಪ್ರಬುದ್ಧರಾಗಿ, ಸಂಘಟನೆಯಿಂದ ಬಲಿಷ್ಠರಾಗಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಅಂಥ ವ್ಯಕ್ತಿಯ ಜಯಂತಿಯನ್ನು ಅರ್ಥವತ್ತಾಗಿ ಆಚರಿಸಬೇಕು. ನಗರದಲ್ಲಿ ನಾರಾಯಣ ಗುರು ಸಮುದಾಯ ಭವನ ನಿರ್ಮಾಣಕ್ಕೆ ಕಂದಾಯ ಇಲಾಖೆಯಿಂದ ನಿವೇಶನ ನೀಡಲಾಗುವುದು ಎಂದು ಹೇಳಿದರು.
ಈಡಿಗ ಸಂಘದ ಉಪಾಧ್ಯಕ್ಷ ವಮ್ಮಸಂದ್ರ ನಾರಾಯಣಸ್ವಾಮಿ ಮಾತನಾಡಿ, ಸಮುದಾಯವು ಅತ್ಯಂತ ಹಿಂದುಳಿದಿದೆ. ಹೀಗಾಗಿ, ನಾರಾಯಣ ಗುರು ಸಮುದಾಯ ಭವನ ನಿರ್ಮಾಣಕ್ಕಾಗಿ ನಿವೇಶನ ಮಂಜೂರು ಮಾಡುವಂತೆ ಹಲವು ವರ್ಷಗಳಿಂದ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಇನ್ನಾದರೂ, ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈಡಿಗ ಸಂಘದ ತಾಲ್ಲೂಕು ನಿರ್ದೇಶಕ ಗಂಗಾಧರ್, ಹೇಮಂತ್, ಆರ್ .ಶ್ರೀನಿವಾಸಪ್ಪ, ರಾಜಗೋಪಾಲ್, ಕೊಲದೇವಿ ರಾಮಚಂದ್ರ, ರಾಮಕೃಷ್ಣ, ಆನಂದ್, ನಾರಾಯಣಪ್ಪ, ಸೀನಪ್ಪ, ಲಕ್ಷ್ಮಿಪತಿ, ರವಿ, ಬಾಬಣ್ಣ, ನಾರಾಯಣಪ್ಪ, ಮುರಳಿ, ಕಿರಣ್, ರಾಮಚಂದ್ರಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.