ADVERTISEMENT

ಕೋಲಾರ ನಗರಸಭೆ ಚುನಾವಣೆಗೆ ದಿನಗಣನೆ: ರಂಗೇರಿದ ಪ್ರಚಾರ

ಮತ ಬೇಟೆಗೆ ಅಭ್ಯರ್ಥಿಗಳ ಪೈಪೋಟಿ: ಫ್ಲೆಕ್ಸ್‌– ಬ್ಯಾನರ್‌ ಅಬ್ಬರ

ಜೆ.ಆರ್.ಗಿರೀಶ್
Published 8 ನವೆಂಬರ್ 2019, 19:45 IST
Last Updated 8 ನವೆಂಬರ್ 2019, 19:45 IST
ಕೋಲಾರ ನಗರಸಭೆ 10ನೇ ವಾರ್ಡ್‌ನ ಜೆಡಿಎಸ್‌ ಅಭ್ಯರ್ಥಿ ಪರ ಆಟೊದಲ್ಲಿ ಪ್ರಚಾರ ನಡೆಸುತ್ತಿರುವುದು.
ಕೋಲಾರ ನಗರಸಭೆ 10ನೇ ವಾರ್ಡ್‌ನ ಜೆಡಿಎಸ್‌ ಅಭ್ಯರ್ಥಿ ಪರ ಆಟೊದಲ್ಲಿ ಪ್ರಚಾರ ನಡೆಸುತ್ತಿರುವುದು.   

ಕೋಲಾರ: ಜಿಲ್ಲೆಯ 3 ನಗರಸಭೆಗಳ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಪ್ರಚಾರದ ಕಾವು ಏರ ತೊಡಗಿದೆ. ಅಭ್ಯರ್ಥಿಗಳು ಮತ ಬೇಟೆಗಾಗಿ ಬೆಂಬಲಿಗರೊಂದಿಗೆ ಗಲ್ಲಿ ಗಲ್ಲಿ ಸುತ್ತುತ್ತಿದ್ದು, ಚುನಾವಣಾ ಕಣ ರಂಗೇರಿದೆ.

ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತದಾರರ ಓಲೈಕೆಗಾಗಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಪಕ್ಷೇತರರು ಸಹ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಅವರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ಮೀರಿಸುವಂತೆ ಪ್ರಚಾರ ನಡೆಸುತ್ತಿದ್ದಾರೆ. ಕಾರ್ಯಕರ್ತರು ಸುಡು ಬಿಸಿಲು ಲೆಕ್ಕಿಸದೆ ಬಡಾವಣೆ ಸುತ್ತಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ.

ಮೂಡಣದಲ್ಲಿ ನೇಸರ ಮೂಡುವುದೇ ತಡ ಬೆಂಬಲಿಗರ ಪಡೆ ಕಟ್ಟಿಕೊಂಡು ರಸ್ತೆಗಿಳಿಯುವ ಅಭ್ಯರ್ಥಿಗಳು ಹಾಗೂ ಮುಖಂಡರು ಪ್ರಚಾರ ಮುಗಿಸಿ ಮತ್ತೆ ಮನೆ ಸೇರುವುದು ರಾತ್ರಿಯಾಗುತ್ತಿದೆ. ಅಭ್ಯರ್ಥಿಗಳ ಜತೆಗೆ ಕುಟುಂಬ ಸದಸ್ಯರು ಪ್ರಚಾರಕ್ಕೆ ಕೈಜೋಡಿಸಿದ್ದಾರೆ. ಬಡಾವಣೆಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ರೋಡ್‌ ಶೋಗಳು ಸಾಮಾನ್ಯವಾಗಿವೆ. ಈಗ ಎಲ್ಲೆಲ್ಲೂ ಚುನಾವಣೆಯದೆ ಗುಸು ಗುಸು.

ADVERTISEMENT

ಅಭ್ಯರ್ಥಿಗಳು ವಿವಿಧ ಜಾತಿ, ಧರ್ಮಗಳ ಮತದಾರರನ್ನು ಸೆಳೆಯಲು ದೇವಸ್ಥಾನ, ಪ್ರಾರ್ಥನಾ ಮಂದಿರ ಹಾಗೂ ಚರ್ಚ್‌ಗಳಿಗೆ ಭೇಟಿ ಕೊಡುವ ಪರಿಪಾಠ ಆರಂಭಿಸಿದ್ದಾರೆ. ಪರಸ್ಪರ ಪೈಪೋಟಿಗೆ ಇಳಿದವರಂತೆ ಗುಡಿ ಗೋಪುರ ಸುತ್ತುತ್ತಾ ಮತದಾರರ ಓಲೈಕೆಗೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ಉದ್ಯಾನಗಳಲ್ಲಿ ಜೋರು: ಉದ್ಯಾನಗಳು, ಹೋಟೆಲ್‌ಗಳು, ವಾಣಿಜ್ಯ ಸ್ಥಳಗಳಲ್ಲಿ ಮತ ಬೇಟೆ ಜೋರಾಗಿದೆ. ಅಭ್ಯರ್ಥಿಗಳು ಉದ್ಯಾನಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ಬರುವ ಸಾರ್ವಜನಿಕರು ಹಾಗೂ ಹೋಟೆಲ್‌ಗಳಲ್ಲಿ ಗ್ರಾಹಕರನ್ನು ಭೇಟಿಯಾಗಿ ಮತ ಯಾಚಿಸುತ್ತಿದ್ದಾರೆ. ಹೆಚ್ಚಿನ ಜನ ಸೇರುವ ಧಾರ್ಮಿಕ ಕಾರ್ಯಕ್ರಮಗಳಲ್ಲೂ ಚುನಾವಣಾ ಪ್ರಚಾರ ನಡೆಯುತ್ತಿದೆ.

ಆಟೊಗಳಲ್ಲಿ ಧ್ವನಿವರ್ಧಕ ಅಳವಡಿಸಿ ಅಭ್ಯರ್ಥಿಗಳ ಪರ ಬಡಾವಣೆಗಳಲ್ಲಿ ಭರ್ಜರಿ ಪ್ರಚಾರ ನಡೆಸಲಾಗುತ್ತಿದೆ. ಪಕ್ಷಗಳ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳ ಬೆಂಬಲಿಗರು ಮನೆ ಮನೆಗೂ ಪ್ರಚಾರದ ಕರಪತ್ರ ಹಂಚಿ ಮತ ಯಾಚಿಸುತ್ತಿದ್ದಾರೆ. ಪ್ರಮುಖ ರಸ್ತೆ, ವೃತ್ತ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರಚಾರದ ಫ್ಲೆಕ್ಸ್‌, ಬ್ಯಾನರ್‌ಗಳ ಅಬ್ಬರ ಜೋರಾಗಿದೆ. ಅಭ್ಯರ್ಥಿಗಳ ಮೆರವಣಿಗೆ ವೇಳೆ ಪಟಾಕಿ ಸಿಡಿಸುವುದು ಸಾಮಾನ್ಯವಾಗಿದೆ.

514 ಅಭ್ಯರ್ಥಿಗಳು: ಕೋಲಾರ, ಮುಳಬಾಗಿಲು ಹಾಗೂ ಕೆಜಿಎಫ್‌ (ರಾಬರ್ಟ್‌ಸನ್‌ಪೇಟೆ) ನಗರಸಭೆ ವ್ಯಾಪ್ತಿಯಲ್ಲಿ ಒಟ್ಟಾರೆ 101 ವಾರ್ಡ್‌ಗಳಿದ್ದು, ಮೂರೂ ನಗರಸಭೆಗಳಿಂದ ಅಂತಿಮವಾಗಿ 514 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಕೆಲ ಅಭ್ಯರ್ಥಿಗಳು ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಮೂಲಕ ಪ್ರಚಾರ ನಡೆಸಲು ಮುಂದಾಗಿದ್ದಾರೆ. ಮತ್ತೆ ಕೆಲ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ವೇದಿಕೆಯಾಗಿಸಿಕೊಂಡು ಮತದಾರರನ್ನು ಸೆಳೆಯುವ ತಂತ್ರಗಾರಿಕೆ ರೂಪಿಸಿದ್ದಾರೆ. ಎಸ್‌ಎಂಎಸ್‌ ಮತ್ತು ಮೊಬೈಲ್‌ ಕರೆಗಳ ಮೂಲಕ ಮತದಾರರನ್ನು ತಲುಪುವ ಪ್ರಯತ್ನ ಆರಂಭಿಸಿದ್ದಾರೆ.

ನೀರಿನ ರಾಜಕೀಯ: ಬಡಾವಣೆಗಳಲ್ಲಿ ನೀರಿನ ರಾಜಕೀಯ ಆರಂಭವಾಗಿದೆ. ಅಭ್ಯರ್ಥಿಗಳು ಹಾಗೂ ಪಕ್ಷಗಳ ಮುಖಂಡರು ಮನೆ ಮನೆಗೆ ಉಚಿತವಾಗಿ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಕೊಟ್ಟು ಮತದಾರರ ಮನ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೇ, ಸ್ವಂತ ಹಣ ಖರ್ಚು ಮಾಡಿ ಬೀದಿ ದೀಪ ಹಾಕಿಸಿ ಮತದಾರರನ್ನು ಓಲೈಸುತ್ತಿದ್ದಾರೆ.

ಸಂಸದರು ಹಾಗೂ ಶಾಸಕರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಅಖಾಡಕ್ಕಿಳಿದು ಪ್ರಚಾರ ನಡೆಸುತ್ತಿದ್ದಾರೆ. ಪ್ರಚಾರ ಕಣದಲ್ಲಿ ಝಣ ಝಣ ಕಾಂಚಣ ಸದ್ದು ಮಾಡುತ್ತಿದ್ದು, ಮತದಾರರನ್ನು ಸೆಳೆಯಲು ಹಣ, ಕೈಗಡಿಯಾರ, ಕುಕ್ಕರ್‌, ಮಿಕ್ಸಿ, ಚಿನ್ನದ ಮೂಗುತಿ, ಬೆಳ್ಳಿ ದೀಪ ಸೇರಿದಂತೆ ಉಡುಗೊರೆಗಳ ಮಹಾಪೂರವನ್ನೇ ಹರಿಸಲಾಗುತ್ತಿದೆ.

***
* 101 ವಾರ್ಡ್‌ಗೆ ಚುನಾವಣೆ
* 514 ಅಭ್ಯರ್ಥಿಗಳು ಕಣದಲ್ಲಿದ್ದಾರೆ
* 228 ಮಂದಿ ಪಕ್ಷೇತರ ಅಭ್ಯರ್ಥಿಗಳು
* 286 ಮಂದಿ ಪಕ್ಷದ ಅಭ್ಯರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.