ಮುಳಬಾಗಿಲು: ತಾಲ್ಲೂಕಿನ ಮಿಣಜೇನಹಳ್ಳಿಯ ಬಳಿ ಶನಿವಾರ ರಾತ್ರಿ ವ್ಯಕ್ತಿಯೊಬ್ಬರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಮಿಣಜೇನಹಳ್ಳಿ ಗ್ರಾಮದ ಮಂಜುನಾಥ್ ( 48 ) ಕೊಲೆಯಾದವರು. ಮೃತರು ಶನಿವಾರ ಬಂಗಾರಪೇಟೆ ಕಡೆಯಿಂದ ಮಿಣಜೇನಹಳ್ಳಿಗೆ ದ್ವಿಚಕ್ರ ವಾಹನದಲ್ಲಿ ಬರುವಾಗ ಘಟನೆ ನಡೆದಿದ್ದು, ಹಣದ ವಿಚಾರ ಅಥವಾ ಪತ್ನಿಯ ಅನೈತಿಕ ವಿಚಾರವೇ ಕೊಲೆಗೆ ಕಾರಣ ಇರಬಹುದು ಎಂದು ಸಂಬಧಿಕರು ಸಂಶಯ ವ್ಯಕ್ತಪಡಿಸಿದ್ದಾರೆ.
ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಗ್ರಾಮದ ಮಂಜುನಾಥ್ ಅವರಿಗೆ ಇಬ್ಬರು ಪತ್ನಿಯರಿದ್ದು , ಮೊದಲ ಪತ್ನಿ ಸೌಭಾಗ್ಯಮ್ಮ ಎಂಬುವವರನ್ನು ಬಿಟ್ಟು, ಮಿಣಜೇನಹಳ್ಳಿಯ ನೇತ್ರಾ ಎಂಬುವವರನ್ನು ಎರಡನೇ ಮದುವೆಯಾಗಿ ಅಲ್ಲಿಯೇ ವಾಸವಾಗಿದ್ದರು. ಶನಿವಾರ ಮಿಣಜೇನಹಳ್ಳಿಗೆ ದ್ವಿಚಕ್ರ ವಾಹನದಲ್ಲಿ ಬರುವಾಗ ಬಂಗಾರಪೇಟೆ ತಾಲ್ಲೂಕಿನ ಮಾದ ಮುತ್ತನಹಳ್ಳಿ ಗ್ರಾಮದ ಶ್ರೀನಿವಾಸ್ ಎಂಬುವವರು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಮೃತನ ಸಂಬಧಿಕರು ಆರೋಪಿಸಿದ್ದಾರೆ.
ಮೃತ ಮಂಜುನಾಥ್ ಹಾಗೂ ಕೊಲೆ ಮಾಡಿರುವ ಶ್ರೀನಿವಾಸ್ ಇಬ್ಬರ ನಡುವೆ ₹ 40 ಸಾವಿರ ಹಣದ ವಿಚಾರಕ್ಕಾಗಿ ಆಗಾಗ್ಗೆ ಗಲಾಟೆ ಆಗುತ್ತಿತ್ತು. ಹೀಗಾಗಿ ಶ್ರೀನಿವಾಸ್ ಕೊಲೆ ಮಾಡಿದ್ದಾನೆ ಎಂದು ಮೃತನ ಮಾವ ನಾಗರಾಜ್ ಆರೋಪಿಸಿದ್ದಾರೆ.
ಮೃತರ ಎರಡನೇ ಪತ್ನಿ ನೇತ್ರಾಗೆ ಅನೈತಿಕ ಸಂಬಂಧದ ಇದ್ದು, ತನ್ನ ಪ್ರಿಯಕರನ ಜೊತೆ ಸೇರಿ ನೇತ್ರಾಳೆ ಕೊಲೆ ಮಾಡಿಸಿದ್ದಾಳೆ ಎಂದು ಮೃತರ ಮೊದಲ ಪತ್ನಿ ಸೌಭಾಗ್ಯಮ್ಮ ಆರೋಪಿಸಿದರು.
ಕೊಲೆ ಮಾಡಿರುವ ಆರೋಪಿ ಶ್ರೀನಿವಾಸನನ್ನು ಮುಳಬಾಗಿಲು ಗ್ರಾಮಾಂತರ ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.