ಕೆಜಿಎಫ್: ನಗರದ ಹೊರವಲಯದ ಚಂಬರಸನಹಳ್ಳಿಯಲ್ಲಿ ಬುಧವಾರ ಬೆಳಗ್ಗೆ ನಸುನಗುತ್ತ ಹಸಮಣೆ ಏರಿದ್ದ ನವ ಜೋಡಿ ಮಧ್ಯೆ ಸಂಜೆ ವೇಳೆ ಆರಂಭವಾದ ಜಗಳ ವಧುವಿನ ಕೊಲೆಯಲ್ಲಿ ಅಂತ್ಯವಾಗಿದೆ.
ಆಂಧ್ರಪ್ರದೇಶದ ಸಂತೂರು ಗ್ರಾಮದ ನವೀನ್ ಕುಮಾರ್ (27) ಮತ್ತು ಬೈನೇಹಳ್ಳಿಯ ಲಿಖಿತಾಶ್ರೀ (20) ಚಂಬರಸನಹಳ್ಳಿಯ ವರನ ಅಕ್ಕನ ಮನೆಯಲ್ಲಿ ಬುಧವಾರ ಸರಳವಾಗಿ ಮದುವೆಯಾಗಿದ್ದರು.
ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ಮದುವೆ ಮಾಡಲು ವಧುವಿನ ಮನೆಯವರು ಕೇಳಿಕೊಂಡಿದ್ದರು. ದುಂದುವೆಚ್ಚ ಬೇಡ, ಮನೆಯಲ್ಲಿಯೇ ಮದುವೆ ಮಾಡೋಣ ಎಂದ ವರನ ಕಡೆಯವರ ಮಾತನ್ನು ಒಪ್ಪಿದ್ದರು.
ಬೆಳಗಿನ ಮದುವೆ ಸಂಭ್ರಮ ಮುಗಿದು ಸಂಜೆ ಹೊತ್ತಿಗೆ ಪಕ್ಕದಲ್ಲಿರುವ ಸಂಬಂಧಿಕರ ಮನೆಗೆ ನವದಂಪತಿ ಚಹಾ ಕುಡಿಯಲು ಹೋಗಿದ್ದರು. ಚಹಾ ಕೊಟ್ಟ ಸಂಬಂಧಿ ಮಹಿಳೆ ಹೊರ ಹೋಗುತ್ತಲೇ ಬಾಗಿಲು ಹಾಕಿಕೊಂಡ ಇಬ್ಬರೂ ಕಿತ್ತಾಡಿಕೊಂಡರು.
ಸ್ವಲ್ಪ ಸಮಯದ ನಂತರ ಕಿರುಚಾಟ ಕೇಳಿ ಸಂಬಂಧಿಕರು ಕಿಟಕಿಯಲ್ಲಿ ಇಣುಕಿದಾಗ ವಧು ಲಿಖಿತಾಶ್ರೀ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ನವೀನ್ ಕುಮಾರ್ ಮಚ್ಚಿನಿಂದ ತನ್ನ ಕತ್ತು ಕೊಯ್ದುಕೊಳ್ಳುತ್ತಿದ್ದ. ಮನೆಯ ಬಾಗಿಲು ಮುರಿದು ರಕ್ಷಣೆ ಮಾಡಲಾಯಿತು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಲಿಖಿತಾಶ್ರೀ ಮೃತಪಟ್ಟಿದ್ದಾರೆ. ನವೀನ್ ಕುಮಾರ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.
ಘಟನೆ ನಡೆದಾಗ ಕೊಠಡಿಯಲ್ಲಿ ವಧು ಮತ್ತು ವರ ಮಾತ್ರ ಇದ್ದರು. ಜಗಳಕ್ಕೆ ಕಾರಣ ಏನು ಎಂಬುದು ಗೊತ್ತಾಗಿಲ್ಲ. ತನಿಖೆ ನಡೆಯುತ್ತಿದೆ.– ಕೆ.ಎಂ.ಶಾಂತರಾಜು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.