ADVERTISEMENT

ಎಂವಿಕೆ ಡೇರಿ: ರಾಜಕೀಯ ದುರುದ್ದೇಶವಿಲ್ಲ ಎಂದ ಸಚಿವ ಡಾ. ಕೆ. ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 14:14 IST
Last Updated 21 ಮಾರ್ಚ್ 2020, 14:14 IST
ಸಚಿವ ಡಾ. ಕೆ. ಸುಧಾಕರ್
ಸಚಿವ ಡಾ. ಕೆ. ಸುಧಾಕರ್   

ಕೋಲಾರ: ‘ನನಗೆ ಕೋಲಾರ ಜಿಲ್ಲೆಯ ಮೇಲೆ ಪ್ರೀತಿ ಜಾಸ್ತಿ, ಯಾವುದೇ ಜಿದ್ದಿಲ್ಲ. ಕೋಚಿಮುಲ್ ವಿಭಜಿಸಬೇಕು ಎಂಬುದು ಇಂದಿನ ಬೇಡಿಕೆಯಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 12 ವರ್ಷವಾಗಿದ್ದು, ಕೋಚಿಮುಲ್ ವಿಭಜನೆಗೆ ಒಕ್ಕೂಟದ ಆಡಳಿತ ಮಂಡಳಿಯೇ ಒಪ್ಪಿಗೆ ನೀಡಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಡಿಸಿಸಿ ಬ್ಯಾಂಕ್‌ ಮತ್ತು ಕೋಚಿಮುಲ್ ವಿಭಜನೆ ಮಾಡಬೇಕೆಂಬ ಬೇಡಿಕೆ ಹಲವು ವರ್ಷಗಳದು. ಮೆಗಾ ಡೇರಿಯ ಟೆಂಡರ್ ಸಂದರ್ಭದಲ್ಲೇ ಕೋಚಿಮುಲ್‌ ವಿಭಜನೆಗೆ ಆಡಳಿತ ಮಂಡಳಿ ಒಪ್ಪಿಕೊಂಡಿದೆ’ ಎಂದು ಹೇಳಿದರು.

‘ಹಾಲು ಒಕ್ಕೂಟದ ವಿಭಜನೆಗೂ ಮೊದಲು ಎಂವಿಕೆ ಗೋಲ್ಡನ್ ಡೇರಿ ನಿರ್ಮಾಣ ಮಾಡಿದರೆ ಸಾಲದ ಹೊರೆ ಹೆಚ್ಚಿ ವಿಭಜನೆ ಕಷ್ಟವಾಗುತ್ತದೆ. ತಾಂತ್ರಿಕ ಕಾರಣಕ್ಕೆ ಎಂವಿಕೆ ಗೋಲ್ಡನ್‌ ಡೇರಿ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಡಿಸಿಸಿ ಬ್ಯಾಂಕ್ ಮತ್ತು ಹಾಲು ಒಕ್ಕೂಟ ವಿಭಜನೆ ಮಾಡಬೇಕೆಂದು ಸ್ಥಳೀಯ ನಿರ್ದೇಶಕರು, ಶಾಸಕರು ಸಹ ಮನವಿ ಮಾಡಿದ್ದಾರೆ. ವಿಭಜನೆ ಕುರಿತ ಮತ್ತು ಎಂವಿಕೆ ಗೋಲ್ಡನ್‌ ಡೇರಿಯ ಟೆಂಡರ್‌ ತಡೆಗೆ ಸಂಬಂಧಿಸಿದ ವಿವರವನ್ನು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದೇನೆ’ ಎಂದು ಮಾಹಿತಿ ನೀಡಿದರು.

ಈ ವೇಳೆ ಪಕ್ಕದಲ್ಲೇ ಇದ್ದ ಸಂಸದ ಎಸ್.ಮುನಿಸ್ವಾಮಿ, ‘ಎಂವಿಕೆ ಗೋಲ್ಡನ್‌ ಡೇರಿ ನಿರ್ಮಾಣಕ್ಕೆ ಅಡ್ಡಿಪಡಿಸಬೇಡಿ’ ಎಂದು ಮನವಿ ಮಾಡಿದರು. ಆಗ ಸಚಿವ ಸುಧಾಕರ್, ‘ಈಗ ಈ ವಿಷಯದ ಪ್ರಸ್ತಾಪ ಬೇಡ. ನಾವು ನಂತರ ಮಾತನಾಡೋಣ’ ಎಂದು ಹೇಳಿ ಜಾರಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.