ADVERTISEMENT

ನನ್ನ ಗೆಲುವನ್ನು ಕೋರ್ಟ್‌ ಎತ್ತಿ ಹಿಡಿದಿದೆ: ಸತ್ಯಕ್ಕೆ ಸಂದ ಜಯ ಎಂದ ನಂಜೇಗೌಡ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 15:26 IST
Last Updated 5 ಫೆಬ್ರುವರಿ 2026, 15:26 IST
<div class="paragraphs"><p>ಶಾಸಕ ನಂಜೇಗೌಡ</p></div>

ಶಾಸಕ ನಂಜೇಗೌಡ

   

ಕೋಲಾರ: ಎರಡೂವರೆ ವರ್ಷಗಳಿಂದ ಮಾನಸಿಕವಾಗಿ ನೋವುಂಡಿದ್ದ ನನಗೆ ಸುಪ್ರೀಂ ಕೋರ್ಟ್‌ ತೀರ್ಪಿನಿಂದಾಗಿ ಈಗ ನೆಮ್ಮದಿ ಸಿಕ್ಕಿದೆ. ಇದು ಸತ್ಯಕ್ಕೆ ಲಭಿಸಿದ ಗೆಲುವು. ಇನ್ನುಳಿದ ಅವಧಿಯಲ್ಲಿ ಧೈರ್ಯವಾಗಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳತ್ತ ಗಮನ ಹರಿಸುವೆ ಎಂದು ಮಾಲೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ನಗರ ಹೊರವಲಯದ ಕೋಮುಲ್‌ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನನ್ನ ಗೆಲುವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ, ಶಾಸಕನಾಗಿ ಮುಂದುವರಿಯಲು ಹಸಿರು ನಿಶಾನೆ ತೋರಿದೆ. ಮರು ಮತ ಎಣಿಕೆಯಲ್ಲಿ ಹಿಂದಿಗಿಂತಲೂ ಎರಡು ವೋಟು ಹೆಚ್ಚಳವಾಗಿದೆ. ಮೋಸ ನಡೆದಿದೆ ಎಂದು ಮರು ಮತ ಎಣಿಕೆಗೆ ತಕರಾರು ಅರ್ಜಿ ಸಲ್ಲಿಸಿದ್ದ ಬಿಜೆಪಿ ಅಭ್ಯರ್ಥಿ ಕೆ.ಎಸ್‌.ಮಂಜುನಾಥಗೌಡ ಅವರಿಗೆ ತೀವ್ರ ಮುಖಭಂಗವಾಗಿದೆ’ ಎಂದರು.

ADVERTISEMENT

ತಕರಾರು ಅರ್ಜಿ ಸಲ್ಲಿಸಿ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿರುವ ಬೆಂಗಳೂರಿನ ಜಯನಗರ ಕ್ಷೇತ್ರದ ಸೌಮ್ಯಾ ರೆಡ್ಡಿ ಇನ್ನೈದು ತಿಂಗಳಲ್ಲಿ ಶಾಸಕರಾಗಲಿದ್ದಾರೆ ಎಂದು ನುಡಿದರು.

ಮಾಲೂರು ತಾಲ್ಲೂಕಿನಲ್ಲಿ ಸರ್ಕಾರಿ ಜಮೀನುಗಳನ್ನು ಕಬಳಿಸಿರುವ ಆರೋಪವಿದ್ದು, ಎಷ್ಟೇ ಪ್ರಭಾವಿಗಳಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ. ಚನ್ನಿಗರಾಯಪುರದಲ್ಲಿ 81 ಎಕರೆ, ಅಗಲಕೋಟೆಯಲ್ಲಿ ಶಾಲೆಗೆ ಭೂದಾನದ 51 ಎಕರೆ ಹಾಗೂ ಶಿವಾರಪಟ್ಟಣ ಜಮೀನು ವಿಚಾರವಾಗಿ ದಾಖಲೆ ನೀಡುವಂತೆ ತಹಶೀಲ್ದಾರ್‌ಗೆ ಸೂಚಿಸಿದ್ದೇನೆ. ಜಮೀನು ಕಬಳಿಕೆ ನಡೆದಿರುವುದು ನಿಜವೇ ಆಗಿದ್ದರೆ ಸರ್ಕಾರದ ಸುಪರ್ದಿಗೆ ಪಡೆಯಲಾಗುವುದು ಎಂದು ಹೇಳಿದರು.

ಸಂಸದ ಡಾ.ಕೆ.ಸುಧಾಕರ್‌, ಮಾಜಿ ಶಾಸಕ ಕೆ.ಎಸ್‌.ಮಂಜುನಾಥಗೌಡ ಹಾಗೂ ಮುಖಂಡ ಹೂಡಿ ವಿಜಯಕುಮಾರ್‌ ರಿಯಲ್‌ ಎಸ್ಟೇಟ್‌ ದಂಧೆ ನಡೆಸುವವರು. ನಾನು ರೈತ, ವ್ಯವಸಾಯಗಾರ ಎಂದರು.

ಅಕ್ರಮ ನೀಡುವಂತೆ ತಿಳಿಸಲಾಗಿದೆ. ಇಷ್ಟು ವರ್ಷಗಳು ಇಲ್ಲದೆ ಇರುವ ವಿಷಯಗಳನ್ನು ಹೊಸದಾಗಿ ಮಾತನಾಡುತ್ತಿದ್ದಾರೆ ಒಂದು ವಾರದಲ್ಲಿ ಅಧಿಕಾರಿಗಳು ದಾಖಲೆಗಳನ್ನು ನೀಡಿದ ನಂತರ ನಿಜವಾಗ್ಲೂ ಅಲ್ಲಿ ಅಕ್ರಮ ಹಾಗಿದ್ದರೆ. ಸರ್ಕಾರಕ್ಕೆ ಸೇರಲೇಬೇಕು ಎಂದರೆ ಎಷ್ಟೆ ಪ್ರಭಾವಿಗಳಾಗಿದ್ದರೂ ಬಿಡುವ ಮಾತೆ ಇಲ್ಲ‌ ಅದಕ್ಕೆ ಸರ್ಕಾರದಿಂದ ಅನುಧಾನ ತಂದು ವಿಧ್ಯಾಬ್ಯಾಸಕ್ಕೆ ಮೀಸಲಿಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.