ADVERTISEMENT

ನರೇಗಾ ಅಕ್ರಮ: ತನಿಖೆಗೆ ಒತ್ತಾಯ

ಯಂತ್ರೋಪಕರಣ ಬಳಕೆ: ರೈತ ಸಂಘ ಸದಸ್ಯರ ಆರೋಪ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 16:26 IST
Last Updated 20 ಸೆಪ್ಟೆಂಬರ್ 2021, 16:26 IST
ನರೇಗಾ ಕಾಮಗಾರಿಗಳಲ್ಲಿ ಯಂತ್ರೋಪಕರಣ ಬಳಸಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ ರೈತ ಸಂಘ ಸದಸ್ಯರು ಕೋಲಾರ ಜಿಲ್ಲಾ ಪಂಚಾಯಿತಿ ಎದುರು ಸೋಮವಾರ ಪ್ರತಿಭಟನೆ ಮಾಡಿದರು
ನರೇಗಾ ಕಾಮಗಾರಿಗಳಲ್ಲಿ ಯಂತ್ರೋಪಕರಣ ಬಳಸಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ ರೈತ ಸಂಘ ಸದಸ್ಯರು ಕೋಲಾರ ಜಿಲ್ಲಾ ಪಂಚಾಯಿತಿ ಎದುರು ಸೋಮವಾರ ಪ್ರತಿಭಟನೆ ಮಾಡಿದರು   

ಕೋಲಾರ: ನರೇಗಾ ಕಾಮಗಾರಿಗಳಲ್ಲಿ ಯಂತ್ರೋಪಕರಣ ಬಳಸಿ ಅಕ್ರಮ ಎಸಗುತ್ತಿರುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ರೈತ ಸಂಘ ಸದಸ್ಯರು ಇಲ್ಲಿ ಸೋಮವಾರ ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ಮಾಡಿದರು.

‘ಕೋಲಾರ ತಾಲ್ಲೂಕಿನ ತೊಟ್ಲಿ ಗ್ರಾಮ ಪಂಚಾಯಿತಿ ಸೇರಿದಂತೆ ಜಿಲ್ಲೆಯ ಹಲವು ಗ್ರಾ.ಪಂಗಳ ವ್ಯಾಪ್ತಿಯ ನರೇಗಾ ಕಾಮಗಾರಿಗಳಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದೆ. ಗ್ರಾ.ಪಂ ಸದಸ್ಯರು ಹಾಗೂ ಭ್ರಷ್ಟ ಅಧಿಕಾರಿಗಳು ಶಾಮೀಲಾಗಿ ಯಂತ್ರೋಪಕರಣಗಳ ಮೂಲಕ ಕಾಮಗಾರಿ ಮಾಡಿ ಯೋಜನೆಯ ಹಣ ದೋಚಿದ್ದಾರೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಕೇಂದ್ರ ಸರ್ಕಾರವು ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಖಾತ್ರಿ ನೀಡುವ ಉದ್ದೇಶಕ್ಕೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಜಾರಿಗೊಳಿಸಿದೆ. ಆದರೆ, ಗ್ರಾ.ಪಂ ಸದಸ್ಯರು ಯೋಜನೆಯ ಮೂಲ ಉದ್ದೇಶಕ್ಕೆ ತಿಲಾಂಜಲಿ ಹಾಡಿ ರಾಜಾರೋಷವಾಗಿ ಯಂತ್ರೋಪಕರಣಗಳಿಂದ ನರೇಗಾ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ’ ಎಂದು ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಹೇಳಿದರು.

ADVERTISEMENT

‘ಗ್ರಾ.ಪಂ ವ್ಯಾಪ್ತಿಯ ಜನರಿಗೆ ಉದ್ಯೋಗ ನೀಡುವ ಉದ್ದೇಶಕ್ಕಾಗಿ ನರೇಗಾ ಅಡಿ ಕೋಟ್ಯಂತರ ರೂಪಾಯಿ ಮೊತ್ತದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸರ್ಕಾರದ ನಿಯಮದ ಪ್ರಕಾರ ನರೇಗಾ ಕಾಮಗಾರಿಗಳನ್ನು ಕೂಲಿ ಕಾರ್ಮಿಕರಿಂದಲೇ ಮಾಡಿಸಬೇಕು. ಆದರೆ, ಗ್ರಾ.ಪಂ ಸದಸ್ಯರು ದುಡಿಯುವ ಕೈಗಳಿಗೆ ಕೆಲಸ ನೀಡದೆ ಯಂತ್ರೋಪಕರಣಗಳಿಂದ ಕಾಮಗಾರಿ ಮಾಡಿಸಿ ಕೂಲಿ ಕಾರ್ಮಿಕರನ್ನು ವಂಚಿಸಿದ್ದಾರೆ’ ಎಂದು ಕಿಡಿಕಾರಿದರು.

ಅಭಿವೃದ್ಧಿ ಮರೀಚಿಕೆ: ‘ದೇಶಕ್ಕೆ ಸ್ವಾತಂತ್ರ ಬಂದು 7 ದಶಕವಾದರೂ ಹಳ್ಳಿಗಳ ಅಭಿವೃದ್ಧಿ ಮರೀಚಿಕೆಯಾಗಿದೆ. ನರೇಗಾ ಯೋಜನೆಯು ಜೆಸಿಬಿ ಯೋಜನೆಯಾಗಿ ಬದಲಾಗಿದೆ. ಗುತ್ತಿಗೆದಾರರು ಕೂಲಿ ಕಾರ್ಮಿಕರ ಹೆಸರಿನಲ್ಲಿ ಜಾಬ್‌ ಕಾರ್ಡ್‌ ಸೃಷ್ಟಿಸಿ ಯಂತ್ರೋಪಕರಣಗಳಲ್ಲಿ ಕೆಲಸ ಮಾಡಿದ್ದಾರೆ. ಯೋಜನೆಯ ಕೋಟ್ಯಂತರ ರೂಪಾಯಿ ಹಣ ಕೂಲಿ ಕಾರ್ಮಿಕರ ಕೈಸೇರುವ ಬದಲು ಸದಸ್ಯರು ಹಾಗೂ ಅಧಿಕಾರಿಗಳ ಜೇಬು ಸೇರಿದೆ’ ಎಂದು ಸಂಘಟನೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಕೆ.ನಳಿನಿಗೌಡ ಅಸಮಾಧಾನ ವ್ಯಕ್ತಪಡಿಸಿದರು.

‘ಗ್ರಾ.ಪಂ ಸದಸ್ಯರು ಮತ್ತು ಅಧಿಕಾರಿಗಳ ಪಾಲಿಗೆ ಈ ಯೋಜನೆಯು ಚಿನ್ನದ ಮೊಟ್ಟೆಯಿಡುವ ಕೋಳಿಯಂತಾಗಿದೆ. ಗ್ರಾ.ಪಂ ಸದಸ್ಯರು ಬೇನಾಮಿಯಾಗಿ ತಮ್ಮ ಆಪ್ತರು, ಕುಟುಂಬ ಸದಸ್ಯರು ಹಾಗೂ ಸಂಬಂಧಿಕರ ಹೆಸರಿನಲ್ಲಿ ನರೇಗಾ ಕಾಮಗಾರಿಗಳನ್ನು ಮಾಡಿ ಅಧಿಕಾರಿಗಳ ಮೇಲೆ ಒತ್ತಡ ತಂದು ಕದ್ದುಮುಚ್ಚಿ ಬಿಲ್‌ ಮಂಜೂರು ಮಾಡಿಸಿಕೊಳ್ಳುತ್ತಿದ್ದಾರೆ’ ಎಂದು ಆರೋಪ ಮಾಡಿದರು.

ನಕಲಿ ದಾಖಲೆಪತ್ರ: ‘ಸಾಕಷ್ಟು ಗ್ರಾ.ಪಂ ವ್ಯಾಪ್ತಿಯ ನರೇಗಾ ಕಾಮಗಾರಿಗಳಲ್ಲಿ ಯಂತ್ರೋಪಕರಣ ಬಳಸಿದ್ದರೂ ಜನರಿಂದ ಕೆಲಸ ಮಾಡಿಸಿ ಕೂಲಿ ಹಣ ಪಾವತಿಸಿರುವುದಾಗಿ ನಕಲಿ ದಾಖಲೆಪತ್ರ ಸೃಷ್ಟಿಸಲಾಗಿದೆ. ನಾಮಕಾವಸ್ಥೆಗೆ ಕಾಮಗಾರಿ ಸ್ಥಳದಲ್ಲಿ ಕೆಲ ಕೂಲಿ ಕಾರ್ಮಿಕರನ್ನು ನಿಲ್ಲಿಸಿ ಕೈಗೆ ಕೃಷಿ ಉಪಕರಣ ಕೊಟ್ಟು ಫೋಟೊ ತೆಗೆಸಿ ದಾಖಲೆಪತ್ರಗಳ ಜತೆ ಸೇರಿಸಲಾಗಿದೆ’ ಎಂದು ಪ್ರತಿಭಟನಾಕಾರರು ದೂರಿದರು.

‘ನರೇಗಾ ಕಾಮಗಾರಿಗಳಲ್ಲಿನ ಅಕ್ರಮದ ಸಂಬಂಧ ಉನ್ನತ ತನಿಖೆ ನಡೆಸಬೇಕು. ಅಕ್ರಮದಲ್ಲಿ ಭಾಗಿಯಾಗಿರುವ ಗ್ರಾ.ಪಂ ಸದಸ್ಯರ ಸದಸ್ಯತ್ವ ರದ್ದುಪಡಿಸಬೇಕು. ಅಕ್ರಮಕ್ಕೆ ಕೈಜೋಡಿಸಿರುವ ಸಿಬ್ಬಂದಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಸೇವೆಯಿಂದ ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದರು.

ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್‌, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಕಿರಣ್, ಸದಸ್ಯರಾದ ಮುನಿಯಪ್ಪ, ಶಿವಾರೆಡ್ಡಿ, ಕೇಶವ, ಯಲ್ಲಪ್ಪ, ಹರೀಶ್, ತಿಮ್ಮಣ್ಣ, ನಾಗೇಶ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.