ADVERTISEMENT

ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಗೆ ಚಾಲನೆ

₹28 ಕೋಟಿ ವೆಚ್ಚ; 1.6 ಕಿ.ಮೀ ಉದ್ದದ ಸೇತುವೆ ಉದ್ಘಾಟಿಸಿದ ಸಂಸದ ಮಲ್ಲೇಶ್‌ ಬಾಬು

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 5:23 IST
Last Updated 21 ಡಿಸೆಂಬರ್ 2025, 5:23 IST
ಕೋಲಾರ ತಾಲ್ಲೂಕಿನ ನರಸಾಪುರ ಬಳಿ ರಾಷ್ಟೀಯ ಹೆದ್ದಾರಿ ಮೇಲ್ಸೇತುವೆಯನ್ನು ಶನಿವಾರ ಸಂಸದ ಎಂ.ಮಲ್ಲೇಶ್ ಬಾಬು ಉದ್ಘಾಟಿಸಿದರು
ಕೋಲಾರ ತಾಲ್ಲೂಕಿನ ನರಸಾಪುರ ಬಳಿ ರಾಷ್ಟೀಯ ಹೆದ್ದಾರಿ ಮೇಲ್ಸೇತುವೆಯನ್ನು ಶನಿವಾರ ಸಂಸದ ಎಂ.ಮಲ್ಲೇಶ್ ಬಾಬು ಉದ್ಘಾಟಿಸಿದರು   

ಕೋಲಾರ: ತಾಲ್ಲೂಕಿನ ನರಸಾಪುರ ಬಳಿ ಬೆಂಗಳೂರು–ತಿರುಪತಿ ರಾಷ್ಟ್ರೀಯ ಹೆದ್ದಾರಿ–75ರಲ್ಲಿ ನಿರ್ಮಿಸಲಾಗಿರುವ ನೂತನ ಮೇಲ್ಸೇತುವೆಯನ್ನು ಸಂಸದ ಎಂ.ಮಲ್ಲೇಶ್ ಬಾಬು ಉದ್ಘಾಟಿಸಿದರು.

ಬೆಳ್ಳೂರು ಮತ್ತು ನರಸಾಪುರ ಕೈಗಾರಿಕಾ ವಲಯದಲ್ಲಿರುವ ಈ ಮೇಲ್ಸೇತುವೆಗಳನ್ನು ಸುಮಾರು ₹ 28.03 ಕೋಟಿ ವೆಚ್ಚದಲ್ಲಿ 1.6 ಕಿಲೋ ಮೀಟರ್ ಉದ್ದ ನಿರ್ಮಿಸಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲೇಶ್‌ ಬಾಬು, ‘ಕಾಮಗಾರಿ ಮುಗಿದು ಸಾರ್ವಜನಿಕ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಈ ಭಾಗದಲ್ಲಿ ಇನ್ನುಮುಂದೆ ಸುಗಮ ಸಂಚಾರ ಸಾಧ್ಯವಾಗಲಿದೆ’ ಎಂದರು.

ADVERTISEMENT

ಈಗ ಒಂದು ಮಾರ್ಗದ ರಸ್ತೆ ಮಾತ್ರ ಮುಕ್ತವಾಗಿದ್ದು, ಮತ್ತೊಂದು ಕಡೆ ಮಾರ್ಗದ ರಸ್ತೆಯನ್ನು ಒಂದು ವಾರದೊಳಗೆ ವಾಹನ ಸಂಚಾರಕ್ಕೆ ಸುಗಮಗೊಳಿಸಲಾಗುವುದು. ಅದರ ಉದ್ಘಾಟನೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಯನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.

‌ಮುಳಬಾಗಿಲು ರಸ್ತೆಯ ತಂಬಹಳ್ಳಿ ಮತ್ತು ವಡಗೂರು ರಸ್ತೆಯಲ್ಲಿ ನಿರ್ಮಿಸುತ್ತಿರುವ ಮೇಲ್ಸೇತುವೆಯನ್ನು ಜ.30 ರೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ. ನರಸಿಂಹ ತೀರ್ಥ ಮತ್ತು ವಡ್ಡಹಳ್ಳಿ ಬಳಿ ನಿರ್ಮಿಸುತ್ತಿರುವ ಮೇಲ್ಸೇತುವೆ ಕಾಮಗಾರಿ ಫೆಬ್ರುವರಿಯಲ್ಲಿ ಪೂರ್ಣಗೊಳ್ಳಲಿದೆ. ಎಲ್ಲಾ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಸೇರಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದರು.

ಶಾಸಕ ಕೊತ್ತೂರು ಜಿ.ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಜೆಡಿಎಸ್‌ ಮುಖಂಡ ಸಿಎಂಆರ್‌ ಶ್ರೀನಾಥ್‌, ಕೋಮುಲ್‌ ನಿರ್ದೇಶಕರಾದ ವಡಗೂರು ಡಿ.ವಿ.ಹರೀಶ್‌, ಚಲುವನಹಳ್ಳಿ ನಾಗರಾಜ್‌, ಗುತ್ತಿಗೆದಾರ ಸಂಜೀವ ರಾಜು, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಖಾಜಿಕಲ್ಲಹಳ್ಳಿ ಮುನಿರಾಜು, ಕಾಂಗ್ರೆಸ್‌, ಜೆಡಿಎಸ್‌ ಮುಖಂಡರು, ಅಧಿಕಾರಿಗಳು ಹಾಗೂ ಸ್ಥಳೀಯರು ಇದ್ದರು.

ಹೆದ್ದಾರಿಯಲ್ಲಿ 8 ಮೇಲ್ಸೇತುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಬ್ಲಾಕ್ ಸ್ಪಾಟ್‌ ಗುರುತಿಸಿ ಅಂತಹ ಜಾಗಗಳಲ್ಲಿ ಸರ್ವೀಸ್ ರಸ್ತೆ ಹಾಗೂ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಜಿಲ್ಲೆಯ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ 8 ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಲ್ಲೇಶ್‌ ಬಾಬು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.