ಕೋಲಾರ: ರಾಜ್ಯ ಸರ್ಕಾರ ಕೊರೊನಾ ಸೋಂಕು ತಡೆಗಾಗಿ ಜಿಲ್ಲೆಯಾದ್ಯಂತ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6ರವರೆಗೆ ಘೋಷಿಸಿರುವ ಕರ್ಫ್ಯೂ ಬುಧವಾರ ರಾತ್ರಿಯಿಂದ ಜಾರಿಯಾಗಿದೆ.
ಜಿಲ್ಲೆಯಲ್ಲಿ ರಾತ್ರಿ ಕರ್ಫ್ಯೂ ಆದೇಶಕ್ಕೆ ಜನ ಬೆಂಬಲ ವ್ಯಕ್ತವಾಗಿದ್ದು, ವರ್ತಕರು ರಾತ್ರಿ 9ಕ್ಕೂ ಮುನ್ನವೇ ಸ್ವಪ್ರೇರಣೆಯಿಂದ ಅಂಗಡಿಗಳನ್ನು ಮುಚ್ಚಿ ವಹಿವಾಟು ಸ್ಥಗಿತಗೊಳಿಸಿದರು. ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶ ಸೇರಿದಂತೆ ಜಿಲ್ಲೆಯಾದ್ಯಂತ ಜನರು ಕರ್ಫ್ಯೂ ಅವಧಿ ಜಾರಿಗೂ ಮುನ್ನವೇ ತಮ್ಮ ಮನೆಗಳಿಗೆ ತೆರಳಿ ಕರ್ಫ್ಯೂಗೆ ಬೆಂಬಲ ಸೂಚಿಸಿದರು.
ಎಲ್ಲೆಡೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿತ್ತು. ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಬ್ಯಾರಿಕೇಡ್ ಹಾಕಿದ ಪೊಲೀಸರು, ರಾತ್ರಿ 9ರ ನಂತರ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಲಾಠಿ ಏಟಿನ ಬಿಸಿ ಮುಟ್ಟಿಸಿದರು. ಆಸ್ಪತ್ರೆ ಸೇರಿದಂತೆ ತುರ್ತು ಕೆಲಸಕ್ಕೆ ಅಥವಾ ಅವಶ್ಯ ಕಾರ್ಯಕ್ಕೆ ತೆರಳುತ್ತಿದ್ದವರಿಗೆ ಮಾತ್ರ ಅವಕಾಶ ಕೊಟ್ಟರು.
ಕರ್ಫ್ಯೂ ಆದೇಶ ಲೆಕ್ಕಿಸದೆ ಬೈಕ್ ಹಾಗೂ ಕಾರುಗಳಲ್ಲಿ ಸಂಚರಿಸುತ್ತಿದ್ದವರನ್ನು ಪೊಲೀಸರು ತಡೆದು ಮನೆಗೆ ವಾಪಸ್ ಹೋಗುವಂತೆ ಬುದ್ಧಿ ಮಾತು ಹೇಳಿದರು. ಕೆಲವೆಡೆ ಕರ್ಫ್ಯೂ ನಡುವೆಯೂ ತೆರದಿದ್ದ ಅಂಗಡಿಗಳನ್ನು ಪೊಲೀಸರು ಬಂದ್ ಮಾಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.