ADVERTISEMENT

ಕೋಲಾರ: ಮೂರು ದಿನ ನಿಖಿಲ್‌ ಸುತ್ತಾಟ; ಜೆಡಿಎಸ್‌ಗೆ ಬಲತುಂಬಿತೇ, ಒಡಕು ತೋರಿಸಿತೇ?

ಕೋಲಾರ ಜಿಲ್ಲೆಯಲ್ಲಿ ಮೂರು ದಿನ ನಿಖಿಲ್‌ ಕುಮಾರಸ್ವಾಮಿ ಸುತ್ತಾಟ; ಎಚ್ಚೆತ್ತುಕೊಂಡ ದಳಪತಿಗಳು!

ಕೆ.ಓಂಕಾರ ಮೂರ್ತಿ
Published 14 ಜುಲೈ 2025, 5:53 IST
Last Updated 14 ಜುಲೈ 2025, 5:53 IST
ನಿಖಿಲ್‌ ಕುಮಾರಸ್ವಾಮಿ
ನಿಖಿಲ್‌ ಕುಮಾರಸ್ವಾಮಿ   

ಕೋಲಾರ: ನಿಖಿಲ್‌ ಕುಮಾರಸ್ವಾಮಿ ಅವರನ್ನು ಪಕ್ಷದ ರಾಜ್ಯ ಅಧ್ಯಕ್ಷ ಪಟ್ಟಕ್ಕೇರಿಸುವ ಮುಂದಾಲೋಚನೆಯೊಂದಿಗೆ ಜೆಡಿಎಸ್‌ ವರಿಷ್ಠರು ರಾಜ್ಯದಾದ್ಯಂತ ಸುತ್ತಾಡಲು ಕಳಿಸಿರುವುದು ಕೋಲಾರ ಜಿಲ್ಲೆಯಲ್ಲಿ ಕಳೆಗುಂದಿದ್ದ ದಳಪತಿಗಳನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಜೊತೆಗೆ ಸ್ಥಳೀಯಮಟ್ಟದಲ್ಲಿ ಪಕ್ಷದ ನಾಯಕರ ನಡುವೆ ಇರುವ ಒಡಕು, ಹೊಂದಾಣಿಕೆಯ ಕೊರತೆಯನ್ನೂ ಎತ್ತಿ ತೋರಿಸಿದೆ.

ಬಂಗಾರಪೇಟೆ, ಕೋಲಾರ, ಶ್ರೀನಿವಾಸಪುರ ಹಾಗೂ ಮಾಲೂರಿನಲ್ಲಿ ನಿಖಿಲ್‌ ಮೂರು ದಿನ ಬೈಕ್‌ ರ‍್ಯಾಲಿ, ಸಮಾವೇಶ ನಡೆಸಿರುವುದು ಸಹಜವಾಗಿಯೇ ತಳಮಟ್ಟದ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದೆ. ಜಿಲ್ಲಾಮಟ್ಟದಲ್ಲಿ ಪಕ್ಷ ಸಂಘಟಿಸುವ ನಾಯಕರೇ ಇಲ್ಲ ಎಂಬಂತಾಗಿರುವ ಪಕ್ಷಕ್ಕೆ ಈ ಭೇಟಿ ತುಸು ಚೇತರಿಕೆ ನೀಡಿದೆ.

ಕೇಂದ್ರ ಸಚಿವರಾದ ಮೇಲೆ ಎಚ್‌.ಡಿ.ಕುಮಾರಸ್ವಾಮಿ ಜಿಲ್ಲೆಗೆ ಭೇಟಿ ಕೊಟ್ಟಿದ್ದು ಒಮ್ಮೆ ಮಾತ್ರ. ಹೀಗಾಗಿ, ಜಿಲ್ಲೆಯಲ್ಲಿ ಜೆಡಿಎಸ್‌ ಪಕ್ಷದ ಸಂಘಟನೆ ಕುಸಿದಿತ್ತು. ಈಚೆಗೆ ನಡೆದ ಡಿಸಿಸಿ ಬ್ಯಾಂಕ್‌ ಹಾಗೂ ಕೋಮುಲ್‌ ಚುನಾವಣೆಯಲ್ಲೂ ಕೋಲಾರ, ಮುಳಬಾಗಿಲು ಹೊರತುಪಡಿಸಿ ಉಳಿದ ಕಡೆ ಜೆಡಿಎಸ್‌ಗೆ ಭಾರಿ ಹಿನ್ನಡೆಯಾಗಿತ್ತು. ಕಾಂಗ್ರೆಸ್‌ ಒಳಜಗಳದ ಪ್ರಯೋಜನ ಪಡೆಯುವಲ್ಲಿಯೂ ವಿಫಲವಾಗಿದ್ದಾರೆ.

ADVERTISEMENT

ದಳಪತಿಗಳು ಆಯಾಯ ತಾಲ್ಲೂಕಿಗೆ ಸೀಮಿತವಾಗಿದ್ದಾರೆ. ಜಿಲ್ಲಾಮಟ್ಟದ ನಾಯಕರು ಎನಿಸಿಕೊಂಡವರು ಇಲ್ಲ. ಅಲ್ಲದೇ, ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಬಳಿಕ ಅಭ್ಯರ್ಥಿಗಳು ಎರಡನೇ ಹಂತದ ನಾಯಕರು ಹಾಗೂ ಕಾರ್ಯಕರ್ತರೊಂದಿಗಿನ ಕೊಂಡಿ ಕಳಚಿಕೊಂಡಂತಿತ್ತು. ಅದರಲ್ಲೂ ಬಂಗಾರಪೇಟೆ, ಕೆಜಿಎಫ್‌, ಮಾಲೂರಿನಲ್ಲಿ ಪಕ್ಷಕ್ಕೆ ಸರಿಯಾದ ಧ್ವನಿಯೇ ಇಲ್ಲದಂತಾಗಿದೆ ಎಂದು ಕಾರ್ಯಕರ್ತರು ಹೇಳಿಕೊಳ್ಳುತ್ತಿದ್ದಾರೆ.

ಜೆಡಿಎಸ್‌ ಮುಖಂಡರೇ ಹೇಳುವಂತೆ ನಿಖಿಲ್‌ ಭೇಟಿ ಕಾರ್ಯಕರ್ತರು ಸಕ್ರಿಯರಾಗುವಂತೆ ಮಾಡಿದೆ. ಅವರು ಭೇಟಿ ನೀಡುತ್ತಾರೆಂದು ಜನ ಸೇರಿಸಲು ತಾಲ್ಲೂಕುಮಟ್ಟ, ಗ್ರಾಮಮಟ್ಟದ ಮುಖಂಡರೊಂದಿಗೆ ಸಭೆ ನಡೆಸುವುದು, ಸಂಪರ್ಕ ಸಾಧಿಸುವ ಕೆಲಸ ನಡೆದಿದೆ. ಅದೆಲ್ಲಾ ಇಷ್ಟು ದಿನ ಅದು ಸ್ಥಗಿತಗೊಂಡಿತ್ತು. ಅಲ್ಲದೇ, ಪರಸ್ಪರ ಅಸಮಾಧಾನದಿಂದ ಇದ್ದ ನಾಯಕರನ್ನು ಒಂದೇ ವೇದಿಕೆಯಲ್ಲಿ ಸೇರಿಸಿದ್ದಾರೆ. ಅದಕ್ಕೆ ಉದಾಹರಣೆ ಸಂಸದ ಎಂ.ಮಲ್ಲೇಶ್‌ ಬಾಬು ಹಾಗೂ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್‌ ವೇದಿಕೆ ಹಂಚಿಕೊಂಡಿದ್ದು.

ಆದರೆ, ಕೋಲಾರದಲ್ಲಿ ನಡೆದ ಸಮಾವೇಶದಲ್ಲಿ ನಿಖಿಲ್‌ ಕುಮಾರಸ್ವಾಮಿ ಎದುರೇ ವೇದಿಕೆಯಲ್ಲಿ ಪಕ್ಷದ ಶಾಸಕರು ಹಾಗೂ ಸಂಸದ ಪರಸ್ಪರ ಕಾಲೆಳೆದುಕೊಂಡ ಪ್ರಸಂಗವೂ ನಡೆಯಿತು. ಅಲ್ಲದೇ, ಮುಳಬಾಗಿಲು ಕ್ಷೇತ್ರವನ್ನು ನಿಖಿಲ್‌ ಪ್ರವಾಸದಿಂದ ಕೈಬಿಟ್ಟಿರುವ ಬಗ್ಗೆ ಪ್ರಸ್ತಾಪವೂ ಆಯಿತು.

‘ಮುಳಬಾಗಿಲು ಕ್ಷೇತ್ರಕ್ಕೆ ಸೀಮಿತವಾಗಿದ್ದಾರೆ’ ಎಂಬ ಟೀಕೆಯನ್ನು ಪಕ್ಷದೊಳಗೆ ಎದುರಿಸುತ್ತಿರುವ ಸಮೃದ್ಧಿ ಮಂಜುನಾಥ್‌, ಜಿಲ್ಲಾ ಜೆಡಿಎಸ್‌ ಜಿಲ್ಲಾ ಅಧ್ಯಕ್ಷರೂ ಆಗಿರುವ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹಾಗೂ ಮಲ್ಲೇಶ್‌ ಬಾಬು ಅವರ ಕಾಲೆಳೆದರು. ‘ಯಾರು ಸೋತರೇನು ಬಿಟ್ಟರೇನು ವೆಂಕಟಾಶಿವರೆಡ್ಡಿ ಯಾವುದೇ ರೀತಿಯ ಟೆನ್ಷನ್‌ ತೆಗೆದುಕೊಳ್ಳುವುದಿಲ್ಲ. ಮಲ್ಲೇಶ್‌ ಬಾಬು ಅವರಿಗೆ ವಯಸ್ಸಿದೆ, ತಮ್ಮ ಆಟ ತೋರಿಸಿಬೇಕು. ತಾವು ಈ ರೀತಿ ಇದ್ದರೆ ಆಗಲ್ಲ ಸರ್‌’ ಎಂದಿದ್ದರು. ತಮ್ಮ ಭಾಷಣ ಸರದಿಯಲ್ಲಿ ಮಲ್ಲೇಶ್‌ ಬಾಬು, ‘ಸಮೃದ್ಧಿ ಮುಂದೆ ಹೋದರೆ, ತಾವು ಹಿಂದೆ ಬರುತ್ತೇವೆ’ ಎಂಬುದಾಗಿ ಹೇಳಿ ತಿರುಗೇಟು ನೀಡಿದರು. ಕೊನೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ‘ಇಬ್ಬರೂ ಅಣ್ಣ ತಮ್ಮಂದಿರು’ ಎಂದು ಹೇಳುವ ಮೂಲಕ ಒಡಕು ಸರಿಪಡಿಸಲು ಪ್ರಯತ್ನ ಹಾಕಿದ್ದಾರೆ.

ಮತಗಳಾಗಿ ಪರಿವರ್ತನೆ ಆಗುತ್ತವೆಯೇ?: ಎಚ್‌.ಡಿ.ಕುಮಾರಸ್ವಾಮಿ, ನಿಖಿಲ್‌ ಕುಮಾರಸ್ವಾಮಿ ಹೋದಲೆಲ್ಲಾ ಜನ ಸೇರುತ್ತಿದ್ದಾರೆ. ಆದರೆ, ಆವು ಮತಗಳಾಗಿ ಪರಿವರ್ತನೆ ಆಗುತ್ತಿಲ್ಲ ಎಂಬ ಬೇಸರವನ್ನೂ ಆ ಪಕ್ಷದ ನಾಯಕರು ವ್ಯಕ್ತಪಡಿಸುತ್ತಿದ್ದಾರೆ. ಹಿಂದೆ ಜಿಲ್ಲೆಯಲ್ಲಿ ಕುಮಾರಸ್ವಾಮಿ ‘ಪಂಚರತ್ನ’ ಯಾತ್ರೆ ಕೈಗೊಂಡಿದ್ದಾಗಲೂ ಜನ ಸೇರಿದ್ದರು. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದು ಎರಡು ಕ್ಷೇತ್ರ ಮಾತ್ರ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌–ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಗೆದ್ದು ಸಂಸದರಾಗಿರುವ ಉದಾಹರಣೆಯನ್ನು ನಿಖಿಲ್‌ ನೀಡಿದ್ದಾರೆ. ಇದರ ಆಧಾರದ ಮೇಲೆ 2028ರ ಚುನಾವಣೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ 11 ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 8ರಲ್ಲಿ ಗೆಲ್ಲಬೇಕೆಂಬ ಗುರಿಯನ್ನೂ ನೀಡಿದ್ದಾರೆ.

ಸಿಎಂಆರ್‌ ಶ್ರೀನಾಥ್‌
ಕೋಲಾರ ಚಿಕ್ಕಬಳ್ಳಾಪುರದ ಭೇಟಿ ವೇಳೆ ಉತ್ತಮ ಸ್ಪಂದನೆ ಸಿಕ್ಕಿದೆ. ಕೇವಲ ನಾನು ಅಥವಾ ಎಚ್‌ಡಿಕೆಯಿಂದ ಪಕ್ಷ ಕಟ್ಟಲು ಸಾಧ್ಯವಿಲ್ಲ. ಮುಖಂಡರು ಕಾರ್ಯಕರ್ತರ ಬೆಂಬಲಬೇಕು
ನಿಖಿಲ್‌ ಕುಮಾರಸ್ವಾಮಿ ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ

Quote - ಅನಾಥ ಪ್ರಜ್ಞೆಯಲ್ಲಿದ್ದ ಪಕ್ಷಕ್ಕೆ ನಿಖಿಲ್‌ ಭೇಟಿ ಚೇತರಿಕೆ ನೀಡಿದೆ. ಕಾರ್ಯಕರ್ತರನ್ನು ಹುರಿದುಂಬಿಸಿ ಮುಖಂಡರ ನಡುವಿನ ಅಸಮಾಧಾನ ಸರಿಪಡಿಸಿದ್ದಾರೆ. ಅವರ ಭೇಟಿ ಜಿಲ್ಲೆಗೆ ಅನಿವಾರ್ಯವಾಗಿತ್ತು ಸಿಎಂಆರ್‌ ಶ್ರೀನಾಥ್‌ ಜೆಡಿಎಸ್‌ ಮುಖಂಡ ಕೋಲಾರ

ಅಭ್ಯರ್ಥಿ ಆಕಾಂಕ್ಷಿಗಳಿಗೆ ನಿತ್ಯ ಕೆಲಸ!

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಪಕ್ಷ ಸಂಘಟಿಸುವ ಕೆಲಸ ಮಾಡಿದವರಿಗೆ ಟಿಕೆಟ್‌ ನೀಡುವುದಾಗಿ ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ನಿತ್ಯ ಮೂರು ಗಂಟೆ ಪಕ್ಷ ಸಂಘಟನೆ ಸಂಬಂಧ ಕೆಲಸದಲ್ಲಿ ತೊಡಗುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ತಾಲ್ಲೂಕು ಜಿಲ್ಲಾ ಪಂಚಾಯಿತಿ ಅಭ್ಯರ್ಥಿಗಳನ್ನು ಸಮೀಕ್ಷೆ ಮೂಲಕ ಆಯ್ಕೆ ಮಾಡುವುದಾಗಿ ಹೇಳಿದ್ದಾರೆ.

ಹೊಸ ಜಿಲ್ಲಾಧ್ಯಕ್ಷರ ನೇಮಕಕ್ಕೆ ಆಗ್ರಹ

ನಿಖಿಲ್‌ ಭೇಟಿ ವೇಳೆ ಕಾರ್ಯಕರ್ತರು ಹಾಗೂ ಮುಖಂಡರು ಹೊಸ ಜಿಲ್ಲಾಧ್ಯಕ್ಷರ ನೇಮಕ್ಕೆ ಬೇಡಿಕೆ ಇಟ್ಟಿದ್ದಾರೆ. ಅದಕ್ಕೂ ಮುನ್ನ ಎಚ್‌.ಡಿ.ಕುಮಾರಸ್ವಾಮಿ ಅವರ ಬಳಿಯೂ ನಿಯೋಗ ತೆರಳಿ ಮನವಿ ಮಾಡಿದ್ದರು. ಸಿಎಂಆರ್ ಶ್ರೀನಾಥ್‌ ಸಮೃದ್ಧಿ ಮಂಜುನಾಥ್‌ ಅಥವಾ ಆನಂದರೆಡ್ಡಿ ಅವರಲ್ಲಿ ಒಬ್ಬರನ್ನು ನೇಮಿಸುವಂತೆ ಕೋರಿದ್ದಾರೆ. ಇತ್ತ ಶ್ರೀನಿವಾಸಪುರ ಶಾಸಕ ಪಕ್ಷದ ಜಿಲ್ಲಾ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಕೂಡ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವುದಾಗಿ ವರಿಷ್ಠರಲ್ಲಿ ಹೇಳಿಕೊಂಡಿರುವುದು ಗೊತ್ತಾಗಿದೆ.

‘ಚಕ್ರವ್ಯೂಹ’ ಬೇಧಿಸುವರೇ ‘ಅಭಿಮನ್ಯು’?

ಮೂರು ಬಾರಿ ಚುನಾವಣಾ ‘ಚಕ್ರವ್ಯೂಹ’ ಬೇಧಿಸುವಲ್ಲಿ ವಿಫಲವಾಗಿರುವ ಜೆಡಿಎಸ್‌ ‘ಅಭಿಮನ್ಯು’ ನಿಖಿಲ್‌ ಕುಮಾರಸ್ವಾಮಿ ಅವರನ್ನು ಪಕ್ಷದ ರಾಜ್ಯ ಅಧ್ಯಕ್ಷರನ್ನಾಗಿಸುವ ನಿಟ್ಟಿನಲ್ಲಿ ಕುಮಾರಸ್ವಾಮಿ ರಾಜ್ಯ ಸುತ್ತಾಟಕ್ಕೆ ಕಳಿಸಿರುವುದು ಸ್ಪಷ್ಟ. ಒಂದು ಲೋಕಸಭೆ ಹಾಗೂ ಎರಡು ವಿಧಾನಸಭೆ ಚುನಾವಣೆ ಸೋಲು ತಮ್ಮ ಮನಸ್ಥಿತಿ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದಿರುವ ನಿಖಿಲ್‌ ರಾಜ್ಯದಾದ್ಯಂತ ಸುತ್ತಾಡಿ ಪಕ್ಷ ಸಂಘಟನೆ ಮಾಡುವುದಾಗಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.