ಕೋಲಾರ: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅತ್ಯಂತ ಕೆಟ್ಟದಾಗಿ ಆಡಳಿತ ನಡೆಸುತ್ತಿದೆ. ಇಂಥದ್ದೊಂದು ಕೆಟ್ಟ ಸರ್ಕಾರವಿತ್ತು ಎಂಬುದು ರಾಜ್ಯದ ಇತಿಹಾಸ ಪುಟಗಳಲ್ಲಿ ಶಾಶ್ವತವಾಗಿ ಉಳಿದುಹೋಗಲಿದೆ. ಮುಂದೆ ಇಂಥ ಸರ್ಕಾರ ಬರಲ್ಲ. ಈ ಮಾತನ್ನು ಜೆಡಿಎಸ್, ಬಿಜೆಪಿ ಶಾಸಕರು ಹೇಳುತ್ತಿಲ್ಲ. ಕಾಂಗ್ರೆಸ್‍ನ ಹಿರಿಯ ಶಾಸಕರೇ ಹೇಳುತ್ತಿದ್ದಾರೆ’ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ನಗರದ ಬೈರೇಗೌಡ ನಗರದಲ್ಲಿ ಗುರುವಾರ ಜೆಡಿಎಸ್ ಪಕ್ಷ ಆಯೋಜಿಸಿದ್ದ ಕೋಲಾರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶ, ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಹಿಂದಿನ ಸೋಲುಗಳಿಂದ ಧೃತಿಗೆಡುವುದು ಬೇಡ. ಮುಂದೆ ನಮಗೆ ಅವಕಾಶ ಸಿಗಲಿದೆ. ಅಧಿಕಾರಕ್ಕಾಗಿ ರಾಜಕಾರಣ ಬೇಡ, ಸಮಾಜ ಕಟ್ಟಲು ರಾಜಕಾರಣ ಮಾಡೋಣ. ಚುನಾವಣೆ ಬಂದಾಗ ನೋಡೋಣ ಎಂಬ ಮನಸ್ಥಿತಿ ಬೇಡ’ ಎಂದರು.
‘ಸುಳ್ಳುಗಳ ಭರವಸೆ ಮೇಲೆ ಸರ್ಕಾರ ರಚಿಸಿರುವ ಕಾಂಗ್ರೆಸ್‌ನವರು ಬೊಗಳೆ ಭಾಷಣ ಮಾಡುತ್ತಾರೆ. ಚುನಾವಣೆ ಬಂದಾಗ ಮಾತ್ರ ಗೃಹಲಕ್ಷ್ಮಿ ಹಣ ಜನರ ಖಾತೆ ಸೇರುತ್ತದೆ. ಇದನ್ನು ಪ್ರಶ್ನೆ ಮಾಡಿದರೆ ನಾವೇನು ಪ್ರತಿ ತಿಂಗಳು ಕೊಡುತ್ತೇವೆಂದು ಹೇಳಿದ್ದೇವಾ ಎಂಬುದಾಗಿ ಉಪಮುಖ್ಯಮಂತ್ರಿ ಕೇಳುತ್ತಾರೆ’ ಎಂದು ಟೀಕಾ ಪ್ರಹಾರ ನಡೆಸಿದರು.
‘ಗ್ಯಾರಂಟಿಗಳಿಂದ ಅಸಹಾಯಕರಾಗಿರುವುದಾಗಿ ಪಕ್ಕದ ತೆಲಂಗಾಣ ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ. ತಾವೂ ಒಪ್ಪಿಕೊಳ್ಳಿ. ನಾವು ಗ್ಯಾರಂಟಿಗಳ ವಿರೋಧಿಯಲ್ಲ. ಆದರೆ, ಗ್ಯಾರಂಟಿ ಅನುಷ್ಠಾನ ನೆಪದಲ್ಲಿ ಲೂಟಿ ಹೊಡೆಯಬೇಡಿ’ ಎಂದರು.
‘ಕೋಲಾರಕ್ಕೆ ನಾನು ಶೋ ಮಾಡಲು ಬಂದಿಲ್ಲ, ಪಕ್ಷದ ಶಕ್ತಿ ತೋರಿಸಲು ಬಂದಿಲ್ಲ. ಮುಂಬರುವ ಎಲ್ಲಾ ಚುನಾವಣೆ ಹಾಗೂ 2028ರ ವಿಧಾನಸಭೆ ಚುನಾವಣೆಗೆ ಹೆಚ್ಚಿನ ಶಾಸಕರನ್ನು ಗೆಲ್ಲಿಸಬೇಕು. 58 ದಿನಗಳ ಈ ಅಭಿಯಾನ ಕಾರ್ಯಕ್ರಮ ಮುಗಿದ ಬಳಿಕ ಮನೆಯಲ್ಲಿ ನಾನು ಸುಮ್ಮನೆ ಕೂರಲ್ಲ, ತಮ್ಮನ್ನು ಕೂರಲೂ ಬಿಡಲ್ಲ. ನಿರಂತರವಾಗಿ ಪಕ್ಷ ಸಂಘಟನೆ ಮಾಡಲೇಬೇಕಿದೆ’ ಎಂದು ಹೇಳಿದರು.
‘ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಿ ವರದಿ ಆಧಾರದ ಮೇರೆಗೆ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುತ್ತದೆ’ ಎಂದರು.
‘ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಜೆಡಿಎಸ್ ಪಕ್ಷಕ್ಕೆ ಜನರು ಹಲವಾರು ಚುನಾವಣೆಯಲ್ಲಿ ಬೆನ್ನು ತಟ್ಟಿದ್ದಾರೆ. ಮುಂದೆ ಈ ಭಾಗದ 11 ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 8 ಸ್ಥಾನ ಗೆಲ್ಲಬೇಕು. ಅದಕ್ಕಾಗಿ ಅಭ್ಯರ್ಥಿಗಳು ತಯಾರಾಗಬೇಕು, ಕಾರ್ಯಕರ್ತರು ಕೈಗೂಡಿಸಬೇಕು’ ಎಂದು ಮನವಿ ಮಾಡಿದರು.
ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ‘ಜನರಿಂದ ಜನತಾದಳ ಪರಿಕಲ್ಪನೆ ಮೂಲಕ ಪಕ್ಷ ಸಂಘಟನೆ ಮಾಡಲು ನಿಖಿಲ್ ಸುತ್ತಾಡುತ್ತಿದ್ದಾರೆ. ಮತ್ತೊಮ್ಮೆ ಜೆಡಿಎಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಪಣತೊಟ್ಟಿದ್ದಾರೆ. ಸಮೃದ್ಧ ಕರ್ನಾಟಕದ ಕನಸು ಜೆಡಿಎಸ್‌ನದ್ದು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ಚಾಮಿ ಅಧಿಕಾರ ಹಿಡಿದು ಪಂಚರತ್ನ ಜಾರಿ ಆಗಿದ್ದರೆ ಆ ಕನಸು ನನಸಾಗುತಿತ್ತು’ ಎಂದರು.
‘ಕಾಂಗ್ರೆಸ್ ಸರ್ಕಾರ ಸೋಲಿನ ಭಯದಿಂದ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿದೆ. ರಾಜ್ಯದಲ್ಲಿ ಮುಂದೆ ಜೆಡಿಎಸ್ ಬಿಜೆಪಿ ಮೈತ್ರಿಕೂಟ ಸರ್ಕಾರ ಬರಲಿದೆ. ಸಣ್ಣಪುಟ್ಟ ವ್ಯತ್ಯಾಸ ಇದ್ದರೂ ಎಲ್ಲರೂ ಜೊತೆಯಲ್ಲಿ ಸಾಗೋಣ’ ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ‘ಕುಮಾರಸ್ವಾಮಿ ಕೇಂದ್ರದಲ್ಲಿ ಮಂತ್ರಿಯಾಗಿದ್ದು, ಜವಾಬ್ದಾರಿ ಹೆಚ್ಚಿದೆ. ಹೀಗಾಗಿ, ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಿದು ಕಷ್ಟ. ಹೀಗಾಗಿ, ನಿಖಿಲ್ ಜವಾಬ್ದಾರಿ ತೆಗೆದುಕೊಂಡು ಮುನ್ನುಗ್ಗುತ್ತಿದ್ದಾರೆ. ಎಲ್ಲಾ ಕಡೆ ಜನರು ದೊಡ್ಡಮಟ್ಟದಲ್ಲಿ ಸೇರುತ್ತಿದ್ದಾರೆ’ ಎಂದರು.
‘ಸದಸ್ಯತ್ವ ನೋಂದಣಿಯೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಮಿಸ್ಡ್ ಕಾಲ್ ಮೂಲಕ ಸದಸ್ಯತ್ವ ನೋಂದಣಿ ಮಾಡಿಕೊಳ್ಳಿ. ನಿಖಿಲ್ ನಾಯಕತ್ವ ಬೆಂಬಲಿಸಿ’ ಎಂದು ಕೋರಿದರು.
ಸಂಸದ ಮಲ್ಲೇಶ್ ಬಾಬು ಮಾತನಾಡಿ, ‘ಜಿಲ್ಲೆಯಲ್ಲಿ ನಾಲ್ಕು ರೈಲ್ವೆ ಮೇಲ್ಸೇತುವೆ (ಆರ್‌ಒಬಿ) ಟೆಂಡರ್ ಹಂತದಲ್ಲಿವೆ. ಸದ್ಯದಲ್ಲೇ ಟೆಂಡರ್ ಆಗಲಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅಪಘಾತವಾಗಿ 10ರಿಂದ 15 ಜನ ಸಾಯುತ್ತಿದ್ದಾರೆ. ಈ ಬಗ್ಗೆ ಹೆದ್ದಾರಿ ಸಚಿವ ಗಡ್ಕರಿ ಗಮನಕ್ಕೆ ತಂದಿದ್ದು, ನಾಲ್ಕುಪಥದಿಂದ ಆರುಪಥಕ್ಕೆ ವಿಸ್ತರಣೆ ಮಾಡಲಾಗುವುದು’ ಎಂದು ಹೇಳಿದರು.
ಶಾಸಕ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ‘ನಾನು 45 ವರ್ಷಗಳಿಂದ ಶಾಸಕನಾಗಿದ್ದು, ಇಂಥ ಕೆಟ್ಟ ಸರ್ಕಾರ ನೋಡಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಕಮಿಷನ್ ದಂಧೆ ಹೆಚ್ಚಾಗಿದೆ. ಒಂದೂ ರಸ್ತೆ ಅಭಿವೃದ್ಧಿ ಮಾಡಿಲ್ಲ, ಬಡವರಿಗೆ ಮನೆ ಕೊಟ್ಟಿಲ್ಲ. ವಿಧಾನಸೌಧದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ’ ಎಂದರು.
=ಶಾಸಕ ಸಮೃದ್ಧಿ ಮಂಜುನಾಥ್, ‘ನಿಖಿಲ್ ಕುಮಾರಸ್ವಾಮಿ ಅವರನ್ನು ವಿಧಾನಸೌಧಕ್ಕೆ ಕರೆದುಕೊಂಡು ಹೋಗುವವರೆಗೆ ವಿರಮಿಸುವುದಿಲ್ಲ. ಆರ್‌ಸಿಬಿ ತಂಡ ಸೋತರೂ ಗೆದ್ದರೂ ನಂಬರ್ 1. ಹಾಗೆಯೇ ಜೆಡಿಎಸ್ ಕೂಡ’ ಎಂದು ಹೇಳಿದರು.
ಇದಕ್ಕೂ ಮೊದಲು ಮೆಕ್ಕೆ ವೃತ್ತದಿಂದ ಬೈಕ್ ರಾಲಿ ನಡೆಯಿತು. ಕಾರ್ಯಕರ್ತರು ಹೂವಿನ ಮಳೆಗೆರೆದು ಸ್ವಾಗತಿಸಿದರು. ಗಾಂಧಿ ಪ್ರತಿಮೆ, ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಸಾಯಿಬಾಬಾನ ದರ್ಶನ ಪಡೆದರು.
ವೇದಿಕೆಯಲ್ಲಿ ಜೆಡಿಎಸ್ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ರಶ್ಮಿ ರಾಮೇಗೌಡ, ಜಿಲ್ಲಾ ಘಟಕದ ಮಹಿಳಾ ಅಧ್ಯಕ್ಷೆ ಗಾಯತ್ರಿ ಮುತ್ತಪ್ಪ, ಅಬ್ಬಾಸ್ ಖಾನ್, ಕೋಮುಲ್ ನಿರ್ದೇಶಕರಾದ ವಡಗೂರು ಡಿ.ವಿ.ಹರೀಶ್, ಚೆಲುವನಹಳ್ಳಿ ನಾಗರಾಜ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ, ಮುಖಂಡರಾದ ಕಡಗಟ್ಟೂರು ವಿಜಯ್ ಕುಮಾರ್, ಖಾಜಿಕಲ್ಲಹಳ್ಳಿ ಹರೀಶ್ ಗೌಡ, ಕೆ.ಬಿ.ಗೋಪಾಲಕೃಷ್ಣ, ಬಾಬು ಮೌನಿ, ಡಾ.ರಮೇಶ್, ಬಣಕನಹಳ್ಳಿ ನಟರಾಜ್ ಇದ್ದರು.
- ದಲಿತರನ್ನು ಓಡಿಸಿದ ಕಾಂಗ್ರೆಸ್ಸಿಗರು: ಸಮೃದ್ಧಿ
‘ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್‌ನವರು ದಲಿತ ನಾಯಕರನ್ನು ಓಡಿಸುತ್ತಿದ್ದಾರೆ. ನಕಲಿ ದಲಿತರು ಸೇರಿ ಈಗಾಗಲೇ ಕೆ.ಎಚ್.ಮುನಿಯಪ್ಪ ಎಸ್.ಮುನಿಸ್ವಾಮಿ ಅವರನ್ನೂ ಓಡಿಸಿದರು. ಈಗ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರನ್ನೂ ಓಡಿಸುತ್ತಿದ್ದಾರೆ. ಮುಂದೆ ನನ್ನನ್ನೂ ಓಡಿಸಬಹುದು’ ಎಂದು ಶಾಸಕ ಸಮೃದ್ಧಿ ಮಂಜುನಾಥ್ ಟೀಕಿಸಿದರು. ನಿಖಿಲ್ ಕುಮಾರಸ್ವಾಮಿ ಮಾತನಾಡಿ ‘ಮಾತೆತ್ತಿದರೆ ತಾವು ದಲಿತರ ಪರ ಎಂಬುದಾಗಿ ಕಾಂಗ್ರೆಸ್‌ನವರು ಹೇಳುತ್ತಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಏನಾಯಿತು? ಅದನ್ನು ಸ್ವತಃ ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ. ₹ 10 ಕದ್ದರೂ ಕಳ್ಳನೇ ₹ 1 ಸಾವಿರ ಕದ್ದರೂ ಕಳ್ಳನೇ. ದಲಿತರ ಹಣ ನುಂಗಿದ್ದಾರೆ. ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿಗಳಿಗೆ ಬಳಸಿ ಪರಿಶಿಷ್ಟರಿಗೆ ಘೋರ ಅನ್ಯಾಯವೆಸಗಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಜೊತೆ ಪ್ರೀತಿ ವಿಶ್ವಾಸದಿಂದ ಟಿಕೆಟ್ ಹಂಚಿಕೆ
‘ಬಿಜೆಪಿಯೊಂದಿಗೆ ಕಳೆದ ಲೋಕಸಭಾ ಚುನಾವಣೆಯಿಂದ ಕೈಜೋಡಿಸಿದ್ದೇವೆ. ಇದೀಗ ನಮ್ಮ ಮುಂದೆ ದೊಡ್ಡ ಸವಾಲಿದೆ. ಮುಂದಿನ ಚುನಾವಣೆಗಳಲ್ಲಿ ಟಿಕೆಟ್ ಪಡೆದುಕೊಳ್ಳಲು ಎರಡೂ ಪಕ್ಷದವರಿಗೆ ಪರಸ್ಪರ ಪ್ರೀತಿ ವಿಶ್ವಾಸ ಅಗತ್ಯವಿದೆ. ಹೀಗಾಗಿ ಕುಮಾರಸ್ವಾಮಿ ನಿರ್ದೇಶನದ ಮೆರೆಗೆ ಸಂಘಟನೆ ನಿರಂತರವಾಗಿ ಮಾಡುತ್ತೇನೆ. ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಿದವರಿಗೆ ಪಕ್ಷ ಏನೂ ಮಾಡಲಿಲ್ಲ ಎನ್ನುವ ನೋವು ಕುಮಾರಸ್ವಾಮಿ ಅವರಿಗಿದೆ’ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.