ADVERTISEMENT

ಪಕ್ಷಾಂತರಿಗಳಿಗೆ ಮತ ಹಾಕುವುದಿಲ್ಲ: ಮತದಾರರಿಂದ ಪ್ರಮಾಣ ಸ್ವೀಕಾರ

ಕೆಲ ಮತದಾರರಿಂದ ಪ್ರಮಾಣ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 20:07 IST
Last Updated 28 ಜನವರಿ 2023, 20:07 IST
ಕೋಲಾರದಲ್ಲಿ ಶನಿವಾರ ಪ್ರಮಾಣ ಸ್ವೀಕರಿಸಿದ ಮತದಾರರು
ಕೋಲಾರದಲ್ಲಿ ಶನಿವಾರ ಪ್ರಮಾಣ ಸ್ವೀಕರಿಸಿದ ಮತದಾರರು   

ಕೋಲಾರ: ಯಾರಿಗೆ ಟಿಕೆಟ್‌ ನೀಡಿದರೂ ಪಕ್ಷಕ್ಕೆ ದ್ರೋಹ ಬಗೆಯುವುದಿಲ್ಲವೆಂದು ಬಂಗಾರಪೇಟೆ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಿಂದ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಪ್ರಮಾಣ ಮಾಡಿಸಿಕೊಂಡ ಬೆನ್ನಲ್ಲೇ, ಪಕ್ಷಾಂತರಿಗಳಿಗೆ ಹಾಗೂ ಜಿಲ್ಲೆ ನಿರ್ಲಕ್ಷಿಸಿರುವ ಪಕ್ಷಗಳಿಗೆ ಮತ ಹಾಕುವುದಿಲ್ಲವೆಂದು ಕೆಲ ಮತದಾರರು ಶನಿವಾರ ಪ್ರಮಾಣ ಸ್ವೀಕರಿಸಿದ್ದಾರೆ.

‘ಹಣಕ್ಕಾಗಿ ಮಾರಿಕೊಂಡವರಿಗೆ, ಮುಂಬೈಗೆ ಹೋದವರಿಗೆ, ಕ್ಷೇತ್ರದ ಹೊರಗಿನವರಿಗೆ, ಜಿಲ್ಲೆಯ ಅಭಿವೃದ್ಧಿ ಮಾಡದವರಿಗೆ, ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದರೂ ನಿರ್ಲಕ್ಷಿಸಿರುವವರಿಗೆ, ರೈತರ ಸಮಸ್ಯೆಗಳಿಗೆ ಸ್ಪಂದಿಸದವರಿಗೆ, ರೈತರ ಮೇಲೆ ಗೋಲಿಬಾರ್‌ ನಡೆಸಿರುವ ಸರ್ಕಾರಗಳಿಗೆ ಕೋಲಾರದ ಮತದಾರರು ಮತದಾನ ಮಾಡುವುದಿಲ್ಲ’ ಎಂದು ನಗರದ ಎಪಿಎಂಸಿ ಮಾರುಕಟ್ಟೆಯ ಸಮೀಪದ ನರಸಿಂಹಸ್ವಾಮಿ ದೇಗುಲ ಬಳಿ ಪ್ರಮಾಣ ಮಾಡಿದ್ದಾರೆ.

ಕೊರೊನಾ ಕಾಲದಲ್ಲಿ ಜನರಿಗೆ ಸ್ಪಂದಿಸಿದ ಸ್ಥಳೀಯ ನಾಯಕರಿಗೆ ಮತ ಹಾಕುವುದಾಗಿ ನಿರ್ಣಯ ಕೈಗೊಂಡಿದ್ದಾರೆ. 10 ಸದಸ್ಯರು ಒಂದೆಡೆ ಸೇರಿ, ಪ್ರಮಾಣ ಸ್ವೀಕರಿಸಿದ್ದು, ಇವರು ಜೆಡಿಎಸ್‌ ಕಾರ್ಯಕರ್ತರು ಎಂಬುದು ಗೊತ್ತಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.