ADVERTISEMENT

ಜಾತಿ, ವಾಸಸ್ಥಳ ಪ್ರಮಾಣಪತ್ರ ನೀಡಲು ಕ್ರಮ

ಅಲೆಮಾರಿ ಸಮುದಾಯದ ಸಮಸ್ಯೆ ಆಲಿಸಿದ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 17:49 IST
Last Updated 12 ಆಗಸ್ಟ್ 2025, 17:49 IST
ಮಾಲೂರು ತಾಲ್ಲೂಕಿನ ಒಬ್ಬಟ್ಟಿ ಗ್ರಾಮಕ್ಕೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಮಂಗಳವಾರ ಭೇಟಿ ನೀಡಿ ಕುಂದುಕೊರತೆ ಆಲಿಸಿದರು
ಮಾಲೂರು ತಾಲ್ಲೂಕಿನ ಒಬ್ಬಟ್ಟಿ ಗ್ರಾಮಕ್ಕೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಮಂಗಳವಾರ ಭೇಟಿ ನೀಡಿ ಕುಂದುಕೊರತೆ ಆಲಿಸಿದರು   

ಮಾಲೂರು (ಕೋಲಾರ): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಜಿಲ್ಲೆಯ ವಿವಿಧೆಡೆ ಮಂಗಳವಾರ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಕುಂದುಕೊರತೆ ಆಲಿಸಿ, ಯೋಜನೆಗಳ ಪ್ರಗತಿ ಪರಿಶೀಲಿಸಿದರು.

ಮಾಲೂರು ತಾಲ್ಲೂಕಿನ ಹುಳದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಬ್ಬಟ್ಟಿ ಗ್ರಾಮದಲ್ಲಿ ಕುಂದುಕೊರತೆ ಆಲಿಸಿದರು.

‘ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ತೀರಾ ಹಿಂದುಳಿದ ಪರಿಶಿಷ್ಟ ಜಾತಿಯ ಅಲೆಮಾರಿ ಚನ್ನದಾಸರ್‌ ಸಮುದಾಯಕ್ಕೆ ಜಾತಿ ಹಾಗೂ ವಾಸಸ್ಥಳ ಪ್ರಮಾಣಪತ್ರ ನೀಡಿ ನೆಲೆ ಕಲ್ಪಿಸಬೇಕಿದೆ’ ಎಂದರು.

ADVERTISEMENT

‘ಈ ಸಮುದಾಯದ ಪರವಾಗಿ ಧ್ವನಿ ಎತ್ತಿ ಸಾಮಾಜಿಕ ನ್ಯಾಯ ಒದಗಿಸಬೇಕಿದೆ. ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸುವುದು ನನ್ನ ಕೆಲಸವಾಗಿದೆ’ ಎಂದು ಹೇಳಿದರು.

‘ಅಲೆಮಾರಿ ನಿಗಮ ಮಂಡಳಿಯು ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ ಕೆಲಸ ಮಾಡುತ್ತಿದೆ. ಅವಕಾಶ ವಂಚಿತ ಅಲೆಮಾರಿಗಳು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಾಗಿದ್ದು, ರಾಜ್ಯದಲ್ಲಿ 51 ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳಿವೆ. ಅಲೆಮಾರಿ ಜನಾಂಗವನ್ನು ಒಗ್ಗೂಡಿಸಿ ನಿಗಮದ ಸೌಲತ್ತುಗಳನ್ನು ತಲುಪಿಸಲು 27 ಜಿಲ್ಲೆಗಳ 207 ತಾಲ್ಲೂಕುಗಳಲ್ಲಿ ಪ್ರವಾಸ ಕೈಗೊಳ್ಳಲಾಗಿದೆ’ ಎಂದರು.

ಜಾತಿ ಪ್ರಮಾಣಪತ್ರಕ್ಕೆ ಮೂಲ ದಾಖಲೆಗಳು ಇಲ್ಲದಿದ್ದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವಂತೆ ತಹಶೀಲ್ದಾರ್‌ಗೆ ಸೂಚಿಸಿದರು.

‘ನೈಜ ಅಲೆಮಾರಿಗಳಿಗೆ ಜಾತಿ ಪ್ರಮಾಣಪತ್ರ ಸಿಗಬೇಕು. ಸರ್ಕಾರಿ ಆದೇಶ ಉಲ್ಲಂಘನೆ ಮಾಡದೆ ಇಚ್ಛಾಶಕ್ತಿಯಿಂದ ತಹಶೀಲ್ದಾರ್‌ಗಳು ವಿಶೇಷ ಶಿಬಿರ ಕೈಗೊಂಡು ಸಮಗ್ರ ವರದಿ ನೀಡಲು ಅಧಿಕಾರಿಗಳು ಸಮುದಾಯಕ್ಕೆ ಸಾಕಾರ ನೀಡಬೇಕು’ ಎಂದರು

ಚನ್ನದಾಸರ್ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ವಿ.ಚಲಪತಿ ಮಾತನಾಡಿ, ‘ಸಮುದಾಯದವರು ನೂರಾರು ವರ್ಷಗಳಿಂದ ತಂಬೂರಿ ಮಾಡಿ, ಭಿಕ್ಷೆ ಬೇಡಿ ಚಾವಡಿ ವಠಾರಗಳಲ್ಲಿ ತಮ್ಮ ಜೀವನ ನಡೆಸುತ್ತಿದ್ದಾರೆ. ಅವರಿಗೆ ನೆಲೆ ಹಾಗೂ ಸವಲತ್ತು ಒದಗಿಸಬೇಕು. ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಿದೆ. ಆದರೆ, ಜಾತಿ ಪ್ರಮಾಣಪತ್ರ ಸಮಸ್ಯೆ ಇದೆ. ಈ ಸಮುದಾಯದ ಕುಂದುಕೊರತೆ ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಮನವಿ ಮಾಡಿದರು.

ಸಭೆಯಲ್ಲಿ ತಹಶೀಲ್ದಾರ್ ಎಂ.ವಿ.ರೂಪಾ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್‌, ಸಹಾಯಕ ನಿರ್ದೇಶಕ ಶಿವಕುಮಾರ್, ನಿಗಮದ ಕಾರ್ಯದರ್ಶಿ ಆನಂದ್, ಗ್ರಾಮ ಪಂಚಾಯಿತಿ ಸದಸ್ಯ ಸೂರ್ಯನಾರಾಯಣರಾವ್, ದಲಿತ ಸಂಘಟನೆಯ ಸಂಚಾಲಕ ಎಸ್.ಎಂ.ವೆಂಕಟೇಶ್, ಅನುಷ್ಠಾನ ಸಮಿತಿ ಸದಸ್ಯ ನಾಗರಾಜ್ ಮೋಹನ್ ರೆಡ್ಡಿ. ಕಂದಾಯ ಅಧಿಕಾರಿ ನಾರಾಯಣಸ್ವಾಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್, ಚನ್ನದಾಸರ್ ಸಮುದಾಯದ ಮುಖಂಡ ಒಬ್ಬಟ್ಟಿ ನಾಗರಾಜ್, ಚನ್ನದಾಸರ್ ತಾಲ್ಲೂಕು ಸಂಘದ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷರಾದ ರಮೇಶ್, ನಾಗರಾಜ್, ಮುಖಂಡರಾದ ನಾರಾಯಣಸ್ವಾಮಿ, ಮುನಿಯಪ್ಪ, ಲಕ್ಷ್ಮಿನಾರಾಯಣ, ತ್ಯಾಗರಾಜ್, ಸತೀಶ್, ವೆಂಕಟಾಚಲ, ಶಿವಾನಂದ್, ಮುನಿಸ್ವಾಮಿ, ರಾಘವೇಂದ್ರ, ಬಾಲಕೃಷ್ಣ ಇದ್ದರು.

ಚನ್ನದಾಸರ್ ಸಮುದಾಯದವರು ನನ್ನನ್ನು ಭೇಟಿಯಾಗಿ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದಾರೆ. ಜಾತಿ ಪ್ರಮಾಣಪತ್ರ ಪಡೆಯಲು ಇರುವ ಅಡೆತಡೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ

ಪಲ್ಲವಿ ಜಿ. ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ

ಬಂಗಾರಪೇಟೆಗೆ ಅಧ್ಯಕ್ಷರ ಭೇಟಿ

ಬಂಗಾರಪೇಟೆ: ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ. ಜಿ ತಾಲ್ಲೂಕಿನ ಅಕ್ಕಮ್ಮ ದಿನ್ನೆಗೆ ಭೇಟಿ ನೀಡಿ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯವರ ಕುಂದುಕೊರತೆ ಆಲಿಸಿದರು. ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ನಿಗಮದಿಂದ ಜಾರಿಗೆ ತರಲಾದ ವಿವಿಧ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದರು. ಈ ಯೋಜನೆಗಳನ್ನು ಸಮುದಾಯದ ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಹಾಗೂ ಸೌಲಣ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ. ಮನೆ ನಿರ್ಮಾಣಕ್ಕೆ ಸಹಾಯಧನ ಸ್ವಯಂ ಉದ್ಯೋಗ ಯೋಜನೆ ಉದ್ಯಮಶೀಲತಾ ಯೋಜನೆ ಭೂ ಒಡೆತನ ಯೋಜನೆ ಗಂಗಾ ಕಲ್ಯಾಣ ಯೋಜನೆ ಮತ್ತು ಸ್ವಾವಲಂಬಿ ಸಾರಥಿ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ ಎಂದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಗ್ರೇಡ್ 2 ತಹಸೀಲ್ದಾರ್ ಜಿ.ಎಸ್.ಗಾಯತ್ರಿ. ಸಹಾಯಕ ನಿರ್ದೇಶಕಿ ಅಂಜಲಿ ದೇವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.