ADVERTISEMENT

ಕೋಲಾರ: ಕಡಿಮೆಯಾಗದ ಕೋವಿಡ್ ಭೀತಿ: ಚಿತ್ರಮಂದಿರಕ್ಕೆ ಬರಲು ಪ್ರೇಕ್ಷಕರ ನಿರಾಸಕ್ತಿ

ನಾರಾಯಣಿ ಥಿಯೇಟರ್‌ಗೆ ಮಾರ್ನಿಂಗ್‌ ಶೋಗೆ 40 ಜನರು ಹಾಜರಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 5:24 IST
Last Updated 6 ಫೆಬ್ರುವರಿ 2021, 5:24 IST
ಕೋಲಾರದ ನಾರಾಯಣಿ ಚಿತ್ರಮಂದಿರದಲ್ಲಿ ಶುಕ್ರವಾರ ಸಿನಿಮಾ ನೋಡಿ ತೆರಳುತ್ತಿರುವ ಪ್ರೇಕ್ಷಕರು
ಕೋಲಾರದ ನಾರಾಯಣಿ ಚಿತ್ರಮಂದಿರದಲ್ಲಿ ಶುಕ್ರವಾರ ಸಿನಿಮಾ ನೋಡಿ ತೆರಳುತ್ತಿರುವ ಪ್ರೇಕ್ಷಕರು   

ಕೋಲಾರ: ಜಿಲ್ಲೆಯಲ್ಲಿ ಶುಕ್ರವಾರ ಚಿತ್ರ ಮಂದಿರಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆದಿದ್ದು ಪ್ರೇಕ್ಷಕರ ಸ್ಪಂದನೆ ಅಷ್ಟಾಗಿ ಇರಲಿಲ್ಲ.

ಜಿಲ್ಲೆಯಲ್ಲಿ ಈಗಾಗಲೇ ಚಿತ್ರ ಮಂದಿರಗಳನ್ನು ತೆರೆಯಲಾಗಿದ್ದು ಶೇ 50ರಷ್ಟು ಮಾತ್ರ ಪ್ರೇಕ್ಷಕರಿಗೆ ಅವಕಾಶ ನೀಡಲಾಗಿತ್ತು. ಶುಕ್ರವಾರದಿಂದಶೇ 100ರಷ್ಟು ಪ್ರೇಕ್ಷಕರು ಆಗಮಿಸಲು ಅವಕಾಶ ನೀಡಲಾಗಿತ್ತು. ಬೆಳಿಗ್ಗೆಯಿಂದ ನಡೆದ ನಾಲ್ಕುಪ್ರದರ್ಶನಗಳಿಗೆ ಪ್ರೇಕ್ಷಕರು ಅಷ್ಟಾಗಿಬಂದಿರಲಿಲ್ಲ.

ನಗರದ ಹೊಸ ಬಸ್ ನಿಲ್ದಾಣದ ಬಳಿ ಇರುವ ನಾರಾಯಣಿ ಚಿತ್ರ ಮಂದಿರದಲ್ಲಿ ಒಟ್ಟು 625 ಸೀಟುಗಳಿಗೆ ಬೆಳಿಗ್ಗೆ ನಡೆದಪ್ರದರ್ಶನಕ್ಕೆ ಕೇವಲ 40 ಪ್ರೇಕ್ಷಕರು ಬಂದಿದ್ದರು. ಮಧ್ಯಾಹ್ನದ ಪ್ರದರ್ಶನಕ್ಕೆ 85 ಮಂದಿ, ಹಾಗೂ ಮೊದಲ ಪ್ರದರ್ಶನಕ್ಕೆ ಕೇವಲ 30 ಮಂದಿ ಆಗಮಿಸಿದ್ದರು.

ADVERTISEMENT

ಪೂರ್ಣ ಪ್ರಮಾಣದಲ್ಲಿ ಸಿನಿಮಾ ಮಂದಿರಗಳನ್ನು ತೆರೆಯಲು ಅವಕಾಶ ನೀಡಿರುವುದರಿಂದ ಚಿತ್ರ ಮಂದಿರ ಮಾಲೀಕರಿಗೆ ಒಂದು ಕಡೆ ಸಂತಸವಾಗಿದೆಯಾದರೂ, ಕೊರೊನಾ ಹಿನ್ನೆಲೆಯಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಬಾರದೆ ಇರುವುದು ಬೇಸರ ತಂದಿದೆ. ಕೊರೊನಾಗೆ ವ್ಯಾಕ್ಸಿನ್ ಬಂದಿದ್ದರೂ ಕೊರೊನಾ ಸೋಂಕು ದಿನೇ ದಿನೇ ಕಡಿಮೆ ಆಗುತ್ತಿದ್ದರೂ ಸೋಂಕಿನ ಭೀತಿ ಜನರನ್ನು ಬಿಟ್ಟು ಹೋಗಿಲ್ಲ.

ಸಿನಿಮಾ ಮಂದಿರಗಳನ್ನು ನೀರು ಮತ್ತು ಸ್ಯಾನಿಟೈಸರ್ ಬಳಸಿ ಶುಭ್ರಗೊಳಿಸಲಾಗಿದೆ. ರೋಗ ನಿರೋಧಕ ರಾಸಾಯನಿಕಗಳನ್ನೂ ಸಿಂಪಡಣೆ ಮಾಡಿಶುದ್ಧೀಕರಿಸಲಾಗಿದೆ.ಪ್ರತಿ ದಿನ ನಾಲ್ಕು ಪ್ರದರ್ಶನಗಳನ್ನು ನಡೆಸುವುದರಿಂದ ಸ್ಯಾನಿಟೈಸರ್‍ ಗಳನ್ನು ಬ್ಯಾರಲ್‍ಗಳಲ್ಲಿ ತುಂಬಿಸಿಡಲಾಗಿದೆ. ಪ್ರೇಕ್ಷಕರಿಗೆ ಮಾಸ್ಕ್ ಕಡ್ಡಾಯವಾಗಿದೆ. ಸಿನಿಮಾ ಪ್ರಿಯರನ್ನು ಆಕರ್ಷಿಸಲು ಹೊಸ ರಿಲೀಸ್ ಚಿತ್ರಗಳನ್ನು ಹಾಕಲಾಗಿತ್ತು. ಟೈಗರ್ ಪ್ರಭಾಕರ್ ಅವರ ಪುತ್ರ ವಿನೋದ್ ಪ್ರಭಾಕರ್ ಅವರ ಶ್ಯಾಡೋ ಮತ್ತು ಪ್ರಜ್ವಲ್ ದೇವರಾಜ್ ಅವರ ಇನ್‌ಸ್ಪೆಕ್ಟರ್ ವಿಕ್ರಮ್ ಸಿನಿಮಾ ಬಿಡುಗಡೆಮಾಡಲಾಗಿತ್ತಾದರೂ ಅಂತಹ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಆಗಲಿಲ್ಲ. ದಿನದ ನಾಲ್ಕು ಪ್ರದರ್ಶನಗಳಿಗೆ 150 ಮಂದಿ ಚಿತ್ರ ವೀಕ್ಷಣೆ ಮಾಡುತ್ತಿದ್ದಾರೆ ಎಂದು ನಗರದ ಭವಾನಿ ಟಾಕೀಸ್‌ ವ್ಯವಸ್ಥಾಪಕರು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 17 ಚಿತ್ರ ಮಂದಿರಗಳಿದ್ದು ಆ ಪೈಕಿ ನಾಲ್ಕು ಚಿತ್ರ ಮಂದಿರಗಳು ನಡೆಯುತ್ತಿಲ್ಲ. ಇನ್ನುಳಿದ 12 ಚಿತ್ರ ಮಂದಿರಗಳು ಕಾರ್ಯಾರಂಭ ಮಾಡಿವೆ. ಕೆಜಿಎಫ್‌ ನಗರದಲ್ಲಿ ಯಾವುದೇ ಚಿತ್ರಮಂದಿರ ಪ್ರಾರಂಭವಾಗಿಲ್ಲ.

ಕೆಲ ಚಿತ್ರ ಮಂದಿರಗಳನ್ನು ಈಗಾಗಲೇ ತೆರೆದಿದ್ದು ಕೆಲ ಚಿತ್ರ ಮಂದಿರಗಳು ಡಿಸೆಂಬರ್ 25 ರಿಂದ, ಕೆಲ ಚಿತ್ರ ಮಂದಿರಗಳು ಕಳೆದ 15 ದಿವಸಗಳಿಂದ ತೆರೆದಿದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಪ್ರೇಕ್ಷಕರು ಬರುತ್ತಿಲ್ಲ. ತೆಲುಗು ಸಿನಿಮಾಗಳನ್ನು ಹಾಕಿದ್ದರೂ ಪ್ರೇಕ್ಷಕರ ಕೊರತೆಯಿಂದಾಗಿ ನಷ್ಟ ಅನುಭವಿಸುವಂತಾಗಿದೆ ಎಂದು ಚಿತ್ರ ಮಂದಿರಗಳ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ಕಳೆದ 10 ತಿಂಗಳಿನಿಂದಲೂ ಚಿತ್ರೋದ್ಯಮ ಕುಸಿದು ಬಿದ್ದಿದೆ. ಕೊರೊನಾ ಹಿನ್ನೆಲೆಯಲ್ಲಿ ಸಾಕಷ್ಟು ನಷ್ಟ ಅನುಭವಿಸುವಂತಾಗಿತ್ತು. ಚಿತ್ರ ಮಂದಿರಗಳನ್ನು ಶೇ 50ರಷ್ಟು ತೆರೆಯಲು ಸರ್ಕಾರ ಅವಕಾಶ ನೀಡಿತ್ತು. ಆದರೆ ಕೊರೊನಾ ಭಯ ಜನರಲ್ಲಿ ಇನ್ನೂ ಹೋಗಿಲ್ಲ ಇದರಿಂದಾಗಿ ಪ್ರೇಕ್ಷಕರು ಬಾರದೆ ನಷ್ಟವನ್ನು ಅನುಭವಿಸುವಂತಾಗಿದೆ.

ಬೆಳಗಿನ ಮತ್ತು ಮಧ್ಯಾಹ್ನದ ಪ್ರದರ್ಶನಗಳಿಗೆ ಮಾತ್ರ ಅಲ್ಪ ಸಲ್ವ ಜನ ಬರುತ್ತಾರೆ. ರಾತ್ರಿಯ ಎರಡು ಪ್ರದರ್ಶನಗಳಿಗೆ ಪ್ರೇಕ್ಷಕರು ತೀರಾ ಕಡಿಮೆ ಸಂಖ್ಯೆಯಲ್ಲಿ ಬರುವುದರಿಂದ ತೀವ್ರ ನಷ್ಟ ಉಂಟಾಗುತ್ತಿದೆ.

ಕೊರೊನಾ ಸೋಂಕಿನ ಭೀತಿ ದಿನೇ ದಿನೇ ಕಡಿಮೆ ಆಗುತ್ತಿದ್ದು ಚಿತ್ರೋದ್ಯಮ ಸುಧಾರಿಸಿಕೊಳ್ಳಲು ಇನ್ನೂ ಕೆಲವು ದಿನಗಳ ಸಮಯ ಬೇಕಾಗುತ್ತದೆ ಎಂದು ನಗರದ ನಾರಾಯಣಿ ಡಿಜಿಟಲ್ ಥಿಯೇಟರ್‌ನ ವ್ಯವಸ್ಥಾಪಕ ರವಿಕುಮಾರ್ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.