ADVERTISEMENT

ಅರಣ್ಯ ಭೂಮಿ ಒತ್ತುವರಿ ಆರೋಪ; ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ಗೆ ನೋಟಿಸ್‌

20ಕ್ಕೆ ವಿಚಾರಣೆಗೆ ಹಾಜರಾಗುವಂತೆ ಅರಣ್ಯ ಸಂರಕ್ಷಣಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2025, 20:06 IST
Last Updated 13 ಫೆಬ್ರುವರಿ 2025, 20:06 IST
ಕೆ.ಆರ್‌.ರಮೇಶ್‌ ಕುಮಾರ್
ಕೆ.ಆರ್‌.ರಮೇಶ್‌ ಕುಮಾರ್   

ಕೋಲಾರ: ಶ್ರೀನಿವಾಸಪುರ ತಾಲ್ಲೂಕಿನ ಹೊಸಹುಡ್ಯ ಗ್ರಾಮದ ಸರ್ವೆ ನಂಬರ್ 1 ಮತ್ತು 2ರ ಅರಣ್ಯ ಜಮೀನಿನಲ್ಲಿ 60.23 ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ಸ್ವಾಧೀನದಲ್ಲಿರುವುದನ್ನು ಜಂಟಿ ಸಮೀಕ್ಷೆ ತಂಡವು ವರದಿಯಲ್ಲಿ ಉಲ್ಲೇಖಿಸಿದ ಬೆನ್ನಲ್ಲೇ, ಮುಂದಿನ ಕ್ರಮಕ್ಕಾಗಿ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್‌ ಕುಮಾರ್‌ ಹಾಗೂ ಶ್ರೀನಿವಾಸಪುರ ವಲಯದ ಅರಣ್ಯಾಧಿಕಾರಿಗೆ ಅರಣ್ಯ ಸಂರಕ್ಷಣಾಧಿಕಾರಿ (ಪ್ರಾದೇಶಿಕ) ನೋಟಿಸ್‌ ನೀಡಿದ್ದಾರೆ.

ಫೆ.20ರ ಮಧ್ಯಾಹ್ನ 3 ಗಂಟೆಗೆ ಮೇಲ್ಮನವಿ ಪ್ರಾಧಿಕಾರದಿಂದ ಮೇಲ್ಮನವಿಯ ವಿಚಾರಣೆ ನಿಗದಿಪಡಿಸಿದ್ದು, ತಪ್ಪದೇ ಹಾಜರಾಗುವಂತೆ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.

ರಿಟ್‌ ಅರ್ಜಿ ಪ್ರಕರಣದಲ್ಲಿ ಹೈಕೋರ್ಟ್‌ ಆದೇಶದಂತೆ ಮೇಲ್ಮನವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂಟಿ ಮೋಜಣಿ ಕಾರ್ಯವು ಮುಕ್ತಾಯಗೊಂಡು ವರದಿ ಹಾಗೂ ನಕಾಶೆಯು ಸ್ವೀಕೃತವಾಗಿರುವುದರಿಂದ ಮೇಲ್ಮನವಿ ವಿಚಾರಣೆ ನಿಗದಿಪಡಿಸಲಾಗಿದೆ ಎಂಬ ಅಂಶ ನೋಟಿಸ್‌ನಲ್ಲಿದೆ. ರಮೇಶ್‌ ಕುಮಾರ್ ಹೈಕೋರ್ಟ್‌ನಲ್ಲಿ ದಾಖಲಿಸಿದ್ದ 2010 ಮತ್ತು 2012ರ ರಿಟ್‌ ಅರ್ಜಿ ಸಂಬಂಧ 2013ರಲ್ಲಿ ಹೈಕೋರ್ಟ್‌ ತೀರ್ಪು ನೀಡಿತ್ತು.

ADVERTISEMENT

ಜಂಟಿ ಸಮೀಕ್ಷೆ ವರದಿಯನ್ನು ಈಗಾಗಲೇ ಅರಣ್ಯ ಸಂರಕ್ಷಣಾಧಿಕಾರಿಯು ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ಸರ್ವೆ ನಂಬರ್‌ 1ರಲ್ಲಿ 6 ಎಕರೆ ಹಾಗೂ ಸರ್ವೆ ನಂಬರ್‌ 2ರಲ್ಲಿ 54.23 ಎಕರೆ ಒತ್ತುವರಿ ಆಗಿದೆ ಎಂಬ ವಿಚಾರ ವರದಿಯಲ್ಲಿದೆ. ಹೈಕೋರ್ಟ್‌ ಸೂಚನೆ ಮೇರೆಗೆ ರಮೇಶ್‌ ಕುಮಾರ್‌ ಉಪಸ್ಥಿತಿಯಲ್ಲೇ ಜಂಟಿ ಸಮಿಕ್ಷೆ ನಡೆದಿತ್ತು. ಸರ್ವೆಗೆ 9ನೇ ಪ್ರತಿವಾದಿಯಾಗಿದ್ದ ಅವರೂ ಸಹಕರಿಸಿದ್ದರು.

ಜ.15 ಹಾಗೂ 16ರಂದು ಸತತ ಎರಡು ದಿನ ಜಿಲ್ಲಾಧಿಕಾರಿ ಎಂ.ಆರ್.ರವಿ, ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ಸರೀನಾ ಸಿಕ್ಕಲಿಗಾರ್‌ ಹಾಗೂ ಭೂಮಾಪನ ಇಲಾಖೆ ಉಪನಿರ್ದೇಶಕ (ಡಿಡಿಎಲ್‌ಆರ್‌) ಸಂಜಯ್‌ ಅವರನ್ನು ಒಳಗೊಂಡ ತಂಡ ಜಂಟಿ ಸರ್ವೆ ನಡೆಸಿತ್ತು. ವರದಿಗೆ ಮೂವರೂ ಸಹಿ ಹಾಕಿ ಜಂಟಿ ನಕ್ಷೆ ಮತ್ತು ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.

ಕೆ.ಆರ್‌.ರಮೇಶ್‌ ಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.