ADVERTISEMENT

ಜಿಲ್ಲೆಯಲ್ಲಿ ಮಸೀದಿ–ಮಂದಿರಗಳಿಗೆ ನೋಟಿಸ್‌

ಧ್ವನಿವರ್ಧಕ ಬಳಸಿ ಶಬ್ದ ಮಾಲಿನ್ಯ: ಪೊಲೀಸರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 13:54 IST
Last Updated 7 ಏಪ್ರಿಲ್ 2022, 13:54 IST
ಡಿ.ದೇವರಾಜ್‌
ಡಿ.ದೇವರಾಜ್‌   

ಕೋಲಾರ: ದೇವಸ್ಥಾನ, ಮಸೀದಿ, ಚರ್ಚ್, ಧಾರ್ಮಿಕ ಕೇಂದ್ರಗಳು, ಹೋಟೆಲ್, ಬಾರ್, ರೆಸ್ಟೋರೆಂಟ್ ಸೇರಿದಂತೆ ಧ್ವನಿವರ್ಧಕ ಬಳಸುವ ಕಡೆಗಳಲ್ಲಿ ಶಬ್ದ ಮಾಲಿನ್ಯ ಉಂಟು ಮಾಡದಂತೆ ಎಚ್ಚರಿಕೆ ನೀಡಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಕಳೆದೊಂದು ವಾರದಲ್ಲಿ 400ಕ್ಕೂ ಹೆಚ್ಚು ಪ್ರಾರ್ಥನಾ ಮಂದಿರ, ವಾಣಿಜ್ಯ ಸಂಘ ಸಂಸ್ಥೆಗಳು, ಹೋಟೆಲ್‌ಗಳಿಗೆ ನೋಟಿಸ್ ನೀಡಲಾಗಿದ್ದು, ನಿಗದಿತ ಡೆಸಿಬಲ್‌ಗಿಂತ ಹೆಚ್ಚಿನ ಶಬ್ದವಾಗದಂತೆ ನೋಡಿಕೊಳ್ಳಬೇಕು. ಹೆಚ್ಚಿನ ಶಬ್ದವಾದರೆ ಅದಕ್ಕೆ ತಾವೇ ಜವಾಬ್ದಾರರು ಎಂದು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.

ವಸತಿ, ವಾಣಿಜ್ಯ, ಕೈಗಾರಿಕಾ ಪ್ರದೇಶದಲ್ಲಿ ಯಾವ ಮಿತಿಯಲ್ಲಿ ಶಬ್ದ ಇರಬೇಕು ಎಂಬ ಬಗ್ಗೆಯೂ ನಿರ್ದೇಶನ ನೀಡಿದ್ದಾರೆ. ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯ ರೂಪಿಸಿರುವ ನಿಯಮಗಳನ್ನು ಪಾಲಿಸುವಂತೆ ತಿಳಿಸಲಾಗಿದೆ.

ADVERTISEMENT

200 ದೇವಾಲಯ, 173 ಮಸೀದಿ ಹಾಗೂ 23 ಚರ್ಚ್‌ಗಳಿಗೆ ನೋಟಿಸ್‌ ಜಾರಿ ಮಾಡಿರುವ ಪೊಲೀಸರು, ‘ಶಬ್ದ ಮಾಲಿನ್ಯ ನಿಯಂತ್ರಣ ನಿಯಮ 2000ರ ತಿದ್ದುಪಡಿ 2010’ ಮತ್ತು ‘ಪರಿಸರ ಸಂರಕ್ಷಣೆ ಕಾಯ್ದೆ–1986’ರ ಅಡಿಯಲ್ಲಿ ಅತಿಯಾದ ಶಬ್ದ ಮಾಡುವುದನ್ನು ನಿಷೇಧಿಸಲಾಗಿದೆ. ಇದನ್ನು ಶಬ್ದ ಮಾಲಿನ್ಯ ಎಂದು ಪರಿಗಣಿಸಲಾಗುತ್ತದೆ. ಕೈಗಾರಿಕಾ ಪ್ರದೇಶ, ವಾಣಿಜ್ಯ ಪ್ರದೇಶ, ಜನವಸತಿ ನೆಲೆ, ನಿಶ್ಯಬ್ದ ಪ್ರದೇಶಗಳಿಗೆ ಇದು ಅನ್ವಯಿಸುತ್ತದೆ. ಈ ಬಗ್ಗೆ ಹೈಕೋರ್ಟ್‌ ಆದೇಶವನ್ನು ಎಲ್ಲರೂ ಪಾಲಿಸಬೇಕು ಎಂದು ಸೂಚಿಸಿದ್ದಾರೆ.

ಯಾವ ಸಂದರ್ಭದಲ್ಲಿ ಎಷ್ಟು ಡೆಸಿಬಲ್ಸ್ (ಶಬ್ದದ ಪ್ರಮಾಣ) ಇರಬೇಕು ಎಂಬ ಬಗ್ಗೆಯೂ ನೋಟಿಸ್‌ನಲ್ಲಿ ವಿವರ ನಮೂದಿಸಲಾಗಿದೆ. ಆಯಾ ಪೊಲೀಸ್‌ ಠಾಣೆ ವ್ಯಾಪ್ತಿಗೆ ಬರುವ ಮಸೀದಿ, ಚರ್ಚ್, ದೇವಸ್ಥಾನ, ಸಾರ್ವಜನಿಕ ಸ್ಥಳ ಬಳಕೆ ಮಾಡುವವರಿಗೂ ನೋಟಿಸ್‌ ಕಳುಹಿಸಲಾಗಿದೆ.

ಶಬ್ದ ಮಿತಿ ಎಷ್ಟು?: ನಿಯಮದ ಪ್ರಕಾರ ವಸತಿ ಪ್ರದೇಶದಲ್ಲಿ ಹಗಲು ವೇಳೆ (ಬೆಳಿಗ್ಗೆ 6ರಿಂದ ರಾತ್ರಿ 10 ಗಂಟೆವರೆಗೆ) 55 ಡೆಸಿಬಲ್, ರಾತ್ರಿ ವೇಳೆ (ರಾತ್ರಿ 10ರಿಂದ ಬೆಳಿಗ್ಗೆ 6 ಗಂಟೆವರೆಗೆ) 45 ಡೆಸಿಬಲ್ ಶಬ್ದ ಮಿತಿ ಇರಬೇಕು. ಕೈಗಾರಿಕಾ ಪ್ರದೇಶದಲ್ಲಿ ಹಗಲಲ್ಲಿ 75 ಡೆಸಿಬಲ್, ರಾತ್ರಿ 70 ಡೆಸಿಬಲ್, ವಾಣಿಜ್ಯ ಪ್ರದೇಶದಲ್ಲಿ ಹಗಲು ವೇಳೆಯಲ್ಲಿ 65 ಡೆಸಿಬಲ್, ರಾತ್ರಿ 55 ಡೆಸಿಬಲ್, ‘ನಿಶ್ಯಬ್ದ’ ಎಂದು ಗುರುತಿಸಿರುವ ಪ್ರದೇಶದಲ್ಲಿ ಹಗಲಲ್ಲಿ 50 ಡೆಸಿಬಲ್ ಮತ್ತು ರಾತ್ರಿ ವೇಳೆಯಲ್ಲಿ 40 ಡೆಸಿಬಲ್‌ಗಿಂತ ಹೆಚ್ಚು ಶಬ್ದ ಉಂಟು ಮಾಡುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.