ADVERTISEMENT

ಚುನಾವಣೆ ದಿನಾಂಕ ನಿಗದಿಗೆ ಸೂಚನೆ

ಗ್ರಾ.ಪಂ ಅಧ್ಯಕ್ಷ–ಉಪಾಧ್ಯಕ್ಷಗಾದಿ ಚುನಾವಣಾ ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 17:00 IST
Last Updated 28 ಜನವರಿ 2021, 17:00 IST

ಕೋಲಾರ: ಜಿಲ್ಲೆಯ 152 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷಗಾದಿ ಚುನಾವಣೆಗೆ ಅಧಿಕಾರಿಗಳನ್ನು ನೇಮಿಸಿರುವ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಜ.30ರಂದು ಚುನಾವಣಾ ಪ್ರಕ್ರಿಯೆಯ ದಿನಾಂಕ ನಿಗದಿಪಡಿಸುವಂತೆ ಆದೇಶಿಸಿದ್ದಾರೆ.

ಈಗಾಗಲೇ ತಾಲ್ಲೂಕುವಾರು ಗ್ರಾ.ಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ನಿಗದಿಪಡಿಸಲಾಗಿದೆ. ಈ ಮೀಸಲಾತಿ ಅನ್ವಯ ಚುನಾವಣೆ ನಡೆಸಲು 6 ತಾಲ್ಲೂಕುಗಳಿಗೂ ಅಧಿಕಾರಿಗಳನ್ನು ನೇಮಿಸಿರುವ ಜಿಲ್ಲಾಧಿಕಾರಿಯು ಚುನಾವಣಾ ಕಾರ್ಯ ಸುಸೂತ್ರವಾಗಿ ನಡೆಸಬೇಕು ಎಂದು ಸೂಚಿಸಿದ್ದಾರೆ.

ಆಯಾ ತಾಲ್ಲೂಕು ತಹಶೀಲ್ದಾರ್‌ಗಳು ಜ.30ರಂದು ಅಧಿಕಾರಿಗಳ ಸಭೆ ನಡೆಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ದಿನಾಂಕ ಗೊತ್ತುಪಡಿಸಬೇಕು. ಜತೆಗೆ ಚುನಾವಣಾ ಕಾರ್ಯಕ್ಕೆ ಗೊತ್ತುಪಡಿಸಿದ ಸಿಬ್ಬಂದಿಗೆ ಆದೇಶ ಜಾರಿಗೊಳಿಸಬೇಕು. ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ನಿಯಮದಂತೆ ಪ್ರಥಮ ಸಭೆಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ಸಂಬಂಧ ನೋಟಿಸ್‌ ಜಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

ನಿಗದಿಪಡಿಸಿದ ಚುನಾವಣಾ ದಿನಾಂಕದ ಬಗ್ಗೆ ಪೊಲೀಸ್‌ ಇಲಾಖೆಗೆ ಮಾಹಿತಿ ನೀಡಿ ಪೊಲೀಸ್‌ ಭದ್ರತೆ ಪಡೆಯಲು ಕ್ರಮ ಕೈಗೊಳ್ಳಬೇಕು. ಫೆ.5ರೊಳಗೆ ಗ್ರಾ.ಪಂ ಸದಸ್ಯರಿಗೆ ನೋಟಿಸ್‌ ಜಾರಿ ಮಾಡುವ ಮತ್ತು ನೋಟಿಸ್‌ ಜಾರಿಯಾಗಿರುವ ಸಂಗತಿ ಖಾತ್ರಿಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳಿಗೆ ನಾಮಪತ್ರ ನಮೂನೆ–1 ಮತ್ತು ನಮೂನೆ–2ರಲ್ಲಿ ಮತಪತ್ರ ಸಿದ್ಧಪಡಿಸಿ ಕಳುಹಿಸಬೇಕು. ತಹಸೀಲ್ದಾರ್‌ಗಳು ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು ಪರಸ್ಪರ ಸಮಾಲೋಚಿಸಿ ಚುನಾವಣಾ ಪ್ರಕ್ರಿಯೆ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.