ADVERTISEMENT

ಕೆಜಿಎಫ್‌: ಅಸ್ತಿತ್ವದಲ್ಲಿಯೇ ಇಲ್ಲದ ಕೆರೆಯಲ್ಲಿ ಅಭಿವೃದ್ಧಿ ಕಾಮಗಾರಿ!

ನಗರಸಭೆ ಕೆರೆಯಲ್ಲಿ ಗ್ರಾಮ ಪಂಚಾಯಿತಿ ಕೆಲಸ* ನಕಲಿ ದಾಖಲೆ ಸೃಷ್ಟಿ ಆರೋಪ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 8:02 IST
Last Updated 17 ಜುಲೈ 2025, 8:02 IST
ಕೆಜಿಎಫ್‌ ರಾಬರ್ಟಸನ್‌ಪೇಟೆ ನಗರಸಭೆಗೆ ಸೇರಿದ ತಣಿ ಕೆರೆಯಲ್ಲಿ ಪಿಆರ್‌ಇಡಿ ಇಲಾಖೆಯ ಕಾಮಗಾರಿ ನಡೆದಿರುವ ನಾಮಫಲಕ
ಕೆಜಿಎಫ್‌ ರಾಬರ್ಟಸನ್‌ಪೇಟೆ ನಗರಸಭೆಗೆ ಸೇರಿದ ತಣಿ ಕೆರೆಯಲ್ಲಿ ಪಿಆರ್‌ಇಡಿ ಇಲಾಖೆಯ ಕಾಮಗಾರಿ ನಡೆದಿರುವ ನಾಮಫಲಕ   

ಕೆಜಿಎಫ್‌: ತಾಲ್ಲೂಕಿನ ನಕ್ಕನಹಳ್ಳಿಯ ಗ್ರಾಮದಲ್ಲಿ ಅಸ್ತಿತ್ವದಲ್ಲಿಯೇ ಇಲ್ಲದ ಕೆರೆಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಮತ್ತು  ರಾಬರ್ಟಸನ್‌ಪೇಟೆ ನಗರಸಭೆ ವ್ಯಾಪ್ತಿಗೆ ಬರುವ ಕೆರೆಯಲ್ಲಿ ನರೇಗಾ ಕಾಮಗಾರಿ ನಡೆಸಿರುವುದಾಗಿ ಮಾರಿಕುಪ್ಪ ಗ್ರಾಮ ಪಂಚಾಯಿತಿಯಲ್ಲಿ ನಕಲಿ ದಾಖಲೆ ಸೃಷ್ಟಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಪಂಚಾಯಿತಿಯಲ್ಲಿ ನಡೆದಿರುವ ಅಕ್ರಮ ಕಾಮಗಾರಿಗಳ ಕುರಿತು ಗ್ರಾಮಸ್ಥರು ದಾಖಲೆ ಸಮೇತ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ ಬಳಿಕ ಕೆರೆ ಕಟ್ಟೆಯಲ್ಲಿ ಜಿಲ್ಲಾ ಪಂಚಾಯಿತಿ ನಡೆಸುತ್ತಿದ್ದ ರಸ್ತೆ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ.  

ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ವಿಭಾಗದವರು ಕೆರೆಯಲ್ಲಿ ಕಾಮಗಾರಿ ನಡೆಸಿರುವ ದಾಖಲೆ ಸೃಷ್ಟಿಸಿದ್ದಾರೆ. ಎನ್‌ಎಂಆರ್‌ ಕೂಡ ತೆಗೆಯಲಾಗಿದೆ. ಗ್ರಾಮಸ್ಥರು ಕೂಲಿ ಕೆಲಸ ಮಾಡಿರುವುದಾಗಿ ಮಾನವ ದಿನಗಳನ್ನು ಕೂಡ ಸೃಜಿಸಲಾಗಿದೆ.

ADVERTISEMENT

ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ದಾಖಲೆಗಳಲ್ಲಿ ಒಮ್ಮೆ ಮಸ್ಕಂ ಕೆರೆಯಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ನಮೂದಿಸಿದರೆ, ಮತ್ತೊಮ್ಮೆ ಇದೇ ಕೆರೆಯನ್ನು ನಕ್ಕನಹಳ್ಳಿ ಕೆರೆ ಎಂದು ತಪ್ಪಾಗಿ ನಮೂದಿಸಲಾಗಿದೆ. ವಿಪರ್ಯಾಸ ಎಂದರೆ ನಕ್ಕನಹಳ್ಳಿಯ ಗ್ರಾಮ ನಕ್ಷೆಯಲ್ಲಿ ಗ್ರಾಮದಲ್ಲಿ ಯಾವುದೇ ಕೆರೆ ಇಲ್ಲ. ಈ ಕಾಮಗಾರಿಯಲ್ಲಿ ಸಹ ಒಂದು ಬಾರಿ ಎನ್‌ಎಂಆರ್‌ ತೆಗೆಯಲಾಗಿದ್ದು, ಕೂಲಿ ಕಾರ್ಮಿಕರು ಹಣ ಪಡೆದಿದ್ದಾರೆ.

ರಾಬರ್ಟಸನ್‌ಪೇಟೆ ನಗರಸಭೆಗೆ ಸೇರಿದ ತಣಿಕೆರೆಯನ್ನು ಕಾಮಗಾರಿಗಾಗಿ ಪಂಚಾಯಿತಿ ಉಪಯೋಗಿಸಿಕೊಂಡಿದೆ. ಕೆರೆಯ ಹೂಳೆತ್ತೆವುದು, ಬ್ರಿಜ್‌ ನಿರ್ಮಾಣ, ಕೆರೆಯ ಅಭಿವೃದ್ಧಿ, ಕೆರೆಯ ಕೋಡಿ ದುರಸ್ತಿ ಕಾಮಗಾರಿಗಳನ್ನು ಪಂಚಾಯಿತಿ ವತಿಯಿಂದ ಕೈಗೊಳ್ಳಲಾಗಿದೆ ಎಂದು ದಾಖಲೆಗಳು ಹೇಳುತ್ತವೆ. 

ಕೆರೆಯ ಕಟ್ಟೆಯ ಅಭಿವೃದ್ಧಿ ಕಾಮಗಾರಿಯನ್ನು ತಾಲ್ಲೂಕು ಪಂಚಾಯಿತಿ, ಗ್ರಾಮಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಕ್ರಿಯಾ ಯೋಜನೆ ಅನುಮೋದನೆಯಾಗಿದ್ದು, ಕೆರೆಯ ಕಟ್ಟೆ ಮೇಲೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂಬ ದೃಷ್ಟಿಯಿಂದ ಜಲ್ಲಿ ರಸ್ತೆಯನ್ನು ಆರಂಭಿಸಿ, ಕೂಲಿ ಕಾರ್ಮಿಕರಿಗೆ ಒಂದು ಎನ್‌ಎಂಆರ್‌ ಪಾವತಿ ಮಾಡಲಾಗಿದೆ. ಆದರೆ ಈ ಸ್ಥಳವು ಕೆಜಿಎಫ್‌ ನಗರಸಭೆ ಅಂಚಿನಲ್ಲಿರುವುದರಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಿರುವುದಾಗಿ ಪಂಚಾಯಿತಿ ರಾಜ್‌ ದಾಖಲೆಯಲ್ಲಿ ಈಗ ಉಲ್ಲೇಖಿಸಲಾಗಿದೆ.

ಮೊದಲ ಬಾರಿಗೆ 2008-2009ನೇ ಸಾಲಿನಲ್ಲಿ ಕಾಮಗಾರಿ ಶುರುವಾಗಿದೆ. ನಂತರ ಬಹಳ ವರ್ಷಗಳ ಯಾವುದೇ ಕಾಮಗಾರಿ ನಡೆಯಲಿಲ್ಲ. ನಂತರ 2019- 20ನೇ ಸಾಲಿನಿಂದ ಕಾಮಗಾರಿಗಳು ನಡೆಯುತ್ತಲೇ ಬಂದಿದೆ. ಕೆರೆಯ ದುರಸ್ತಿ ಮತ್ತು ಅಭಿವೃದ್ಧಿಗೆ ₹20 ಲಕ್ಷಕ್ಕೂ ಹೆಚ್ಚು ಹಣ ವ್ಯಯಮಾಡಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ದೂರುಗಳು ಬಂದ ಮೇಲೆ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ವಿಭಾಗ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದೆ. ಕೆರೆಯ ಕಟ್ಟೆಯ ಮೇಲೆ ಜಲ್ಲಿ ಹಾಕಲಾಗಿದ್ದು, ಅದರ ಮೇಲೆ ತೆಳುವಾದ ಮಣ್ಣಿನ ಪದರವನ್ನು ಹಾಕಲಾಗಿದೆ. ಇದರಿಂದ ಕೆರೆಯ ಕಟ್ಟೆಯ ಮೇಲೆ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಟ್ಟೆ ಮೇಲೆ ಹಸುಗಳನ್ನು ಕರೆದುಕೊಂಡು ಹೋಗುವುದು, ಮೇವು ತರಲು ಮತ್ತಿತರ ಕೆಲಸಗಳಿಗೆ ಈಗ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಅವಲತ್ತುಕೊಂಡಿದ್ದಾರೆ.

ಕೆರೆಯ ಅಭಿವೃದ್ಧಿಗೆ ಪಂಚಾಯಿತಿಯಲ್ಲಿಯೇ ಕ್ರಿಯಾ ಯೋಜನೆ ತಯಾರಾಗಿದ್ದು, ಅದನ್ನು ಎಂಜಿನಿಯರಿಂಗ್‌ ವಿಭಾಗದಿಂದ ಕಾಮಗಾರಿ ನಡೆಸಲಾಗಿದೆ. ಈಗ ಕೆರೆ ನಗರಸಭೆ ವ್ಯಾಪ್ತಿಗೆ ಸೇರಿದ್ದು ಎಂದು ತಿಳಿದು ಬಂದಿದ್ದರಿಂದ, ಕಾಮಗಾರಿ ನಿಲ್ಲಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು ಹೇಳುತ್ತಾರೆ.

ಕಾಮಗಾರಿ ಬಗ್ಗೆ ಮಾರಿಕುಪ್ಪೆ ಪಂಚಾಯಿತಿ ವೆಬ್‌ಸೈಟ್‌ನಲ್ಲಿ ನಮೂದಿಸಿರುವುದು 
ಕಾಮಗಾರಿ ಬಗ್ಗೆ ಮಾರಿಕುಪ್ಪೆ ಪಂಚಾಯಿತಿ ವೆಬ್‌ಸೈಟ್‌ನಲ್ಲಿ ನಮೂದಿಸಿರುವುದು 

ಕೆರೆಯ ಕಟ್ಟೆ ಮೇಲೆ ನಡೆದಿರುವ ರಸ್ತೆ ಕಾಮಗಾರಿ ಗ್ರಾಮ ಪಂಚಾಯಿತಿಯಿಂದ ನಡೆದಿಲ್ಲ ಜಗದೀಶ್‌ ಪಿಡಿಒ ಮಾರಿಕುಪ್ಪ ಗ್ರಾಮ ಪಂಚಾಯಿತಿ

ನಗರಸಭೆಗೆ ಸೇರಿದ ಮಸ್ಕಂ ತಣಿಕೆರೆಯನ್ನು ಅಭಿವೃದ್ಧಿ ಮಾಡಲು ಮುಂದಿನ ದಿನಗಳಲ್ಲಿ ಅನುದಾನವನ್ನು ನಗರಸಭೆಯಿಂದ ಬಿಡುಗಡೆ ಮಾಡಲು ಯೋಚಿಸಲಾಗಿದೆ. ಮಂಜುನಾಥ್‌ ನಗರಸಭೆ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.