ADVERTISEMENT

ಅನುದಾನ ವಾಪಸ್‌ ಹೋದರೆ ಅಧಿಕಾರಿಗಳೇ ಹೊಣೆ: ಡಿಸಿ ತರಾಟೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 12:06 IST
Last Updated 7 ಡಿಸೆಂಬರ್ 2019, 12:06 IST
ಕೋಲಾರದ ಜಿಲ್ಲಾ ಪಂಚಾಯಿತಿ ಸಭಾಗಂಣದಲ್ಲಿ ಶನಿವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿದರು.
ಕೋಲಾರದ ಜಿಲ್ಲಾ ಪಂಚಾಯಿತಿ ಸಭಾಗಂಣದಲ್ಲಿ ಶನಿವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿದರು.   

ಕೋಲಾರ: ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಗಂಣದಲ್ಲಿ ಶನಿವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖಾಧಿಕಾರಿಗಳು ಮಾಹಿತಿ ನೀಡಲು ತಡಬಡಾಯಿಸುತ್ತಿದ್ದರು, ಇದಕ್ಕೆ ಅಸಮಾಧಾನಗೊಂಡ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಅಧಿಕಾರಿಗಳು ಬಾಯಿ ಮಾತಿನಲ್ಲಿ ಹೇಳಿದರೆ ನಂಬಲು ಸಾಧ್ಯವಿಲ್ಲ, ಪ್ರಾಯೋಗಿಕವಾಗಿ ಅಭಿವೃದ್ಧಿ ಕಾಣಿಸಿದರೆ ಮಾತ್ರ ಇಲಾಖೆಯ ಸಾಧನೆ ಕಾಣಬಹುದು. ಪ್ರತಿ ಇಲಾಖೆಗೂ ಕೋಟಿಗಟ್ಟಲೇ ಅನುದಾನ ಬಿಡುಗೆಯಾಗುತ್ತಿದ್ದು, ವೆಚ್ಚ ಮಾಡಿರುವುದನ್ನು ಗಮಿಸಿದರೆ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಿಲ್ಲ, ಒಂದು ವೇಳೆ ಅನುದಾನ ವಾಪಸ್ ಹೋದರೆ ಅಧಿಕಾರಿಗಳೇ ಹೊಣೆ’ ಎಂದು ಎಚ್ಚರಿಕೆ ನೀಡಿದರು.

‘ಜಿಲ್ಲೆಯ ಆಸ್ಪತ್ರೆಗಳಲ್ಲಿ ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿಯಾಗುತ್ತಿಲ್ಲ, ಈ ಬಗ್ಗೆ ಎಚ್ಚರಿಕೆ ನೀಡಿದರೂ ಇಲಾಖೆಯವರು ಎಚ್ಚೆತ್ತುಕೊಂಡಿಲ್ಲ, ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದರೆ ದಾರಿ ಬರುತ್ತಾರೇನೊ ನೋಡಬೇಕು’ ಎಂದು ಆಕ್ರೋಶವ್ಯಕ್ತಪಡಿಸಿದರು.

ADVERTISEMENT

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಎಸ್.ಎನ್.ವಿಜಿ ಕುಮಾರ್ ಮಾತನಾಡಿ, ‘ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶೇ.25ರಷ್ಟು ಹೆಚ್ಚುವರಿ ಸಿಬ್ಬಂದಿಯನ್ನು ತೆಗೆಯಲು ಸರ್ಕಾರ ಸೂಚನೆ ನೀಡಿದ್ದು ಇದಕ್ಕೆ ಕ್ರಮಕೈಗೊಳ್ಳಲಾಗಿದೆ’ ಎಂದು ಹೇಳಿದರು.

‘ಎಲ್ಲ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಳಲ್ಲಿ ವೈದ್ಯರು ಲಭ್ಯವಿದ್ದು, ಪ್ರತಿದಿನ ರೋಗಿಗಳು ಆರೋಗ್ಯ ತಾಪಾಸಣೆಗೆ ಬರುತ್ತಿದ್ದಾರೆ. ಹೆಚ್ಚಿನ ಕಿಚಿತ್ಸೆ ಅಗತ್ಯವಿದ್ದಲ್ಲಿ ತಾಲ್ಲೂಕು ಅಥವಾ ಜಿಲ್ಲಾ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಮಧ್ಯ ಪ್ರವೇಶ ಮಾಡಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್, ‘ಬಾಣಂತಿಯರು ಆಸ್ಪತ್ರೆಯಿಂದ ಮನೆಗೆ ಹೋಗುವ ಸಂದರ್ಭದಲ್ಲಿ ಅವರಿಗೆ ಸಹಾಯಧನ ನೀಡುತ್ತಿಲ್ಲ ಎಂಬ ದೂರುಗಳು ಬಂದಿವೆ. ಕೇಂದ್ರ ಮತ್ತು ರಾಜ್ಯ ಆರೋಗ್ಯ ಯೋಜನೆಯಡಿ ಸಾಕಷ್ಟು ಅನುದಾನ ಬಂದರೂ ವೆಚ್ಚವಾಗುತ್ತಿಲ್ಲ ಅಧಿಕಾರಿಗಳು ಎಷ್ಟು ಮಾತ್ರ ಕೆಲಸ ಮಾಡುತ್ತಿದೀರ. ಪ್ರಚಾರಕ್ಕೆ ಜಾಗೃತಿ ಕಾರ್ಯಕ್ರಮ, ಅಂದೋಲನಾ ಮಾಡಿದರೆ ಕೆಲಸ ಅಗುವುದಿಲ್ಲ’ ಎಂದು ಹೇಳಿದರು.

‘ಜಿಲ್ಲೆಗೆ ಕೆ.ಸಿ.ವ್ಯಾಲಿ ನೀರು ಬಂದು ಕೆರೆಗಳು ತುಂಬಿ ಅಂತರ್ಜಲ ವೃದ್ಧಿ ಆಗುತ್ತಿರುವುದರಿಂದ ಜಿಲ್ಲೆಯಲ್ಲಿ ಭತ್ತವನ್ನೂ ಬೆಳೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಇದರಿಂದಾಗಿ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳದೆ ಬೇಸಾಯಕ್ಕೆ ಅನುಕೂಲವಾಗುವ ಯೋಜನೆಗಳನ್ನು ರೂಪಿಸಬೇಕು’ ಎಂದು ಸಲಹೆ ನೀಡಿದರು.

ಈಗಾಗಲೇ ೪೧ ಕೆರೆಗಳು ತುಂಬಿವೆ ಭತ್ತ ಸೇರಿದಂತೆ ಆಲೂಗಡ್ಡೆ ಮುಂತಾದ ತರಕಾರಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯುವುದರಿಂದ ಗೋದಾಮುಗಳ ಅಗತ್ಯ ಇದೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಸುಸಜ್ಜಿತ ಗೋದಾಮುಗಳನ್ನು ನಿರ್ಮಿಸಬೇಕು’ ಎಂದು ಸೂಚನೆ ನೀಡಿದರು.

‘ಟೊಮೆಟೊ, ಕ್ಯಾಪ್ಸಿಕಾಂ ಹಾಗು ಇನ್ನಿತರೆ ಬೆಳೆಗಳಿಗೆ ರೈತರು ಯತೇಚ್ಛವಾಗಿ ಮಲ್ಚಿಂಗ್ ಪೇಪರ್‌ ಉಪಯೋಗಿಸುತ್ತಾರೆ. ಪ್ಲಾಸ್ಟಿಕ್ ಅಂಶವಿರುವ ಈ ಮಲ್ಚಿಂಗ್ ಪೇಪರ್‌ಗಳನ್ನು ಅಳವಡಿಸುವುದರಿಂದ ಪರಿಸರ ಮಾಲಿನ್ಯ ಆಗುವುದಿಲ್ಲವೇ ಇದರ ಬಗ್ಗೆ ಎಂದಾದರು ಯೋಚನೆ ಮಾಡಿದ್ದೀರೇ’ ಎಂದು ಪ್ರಶ್ನಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ವಿ.ದರ್ಶನ್ ಮಾತನಾಡಿ, ‘ಇಲಾಖೆಗಳಲ್ಲಿ ಇರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಗಮನಕ್ಕೆ ತರಬೇಕು. ನಿಮ್ಮ ಹಂತರದಲ್ಲೆ ಇಟ್ಟುಕೊಂಡರೆ ಪರಿಹಾರ ಸಿಗುವುದಿಲ್ಲ. ವಿವಿಧ ಇಲಾಖಾಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು’ ಎಂದು ತಾಕೀತು ಮಾಡಿದರು.

‘ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪ ಸಂಖ್ಯಾತರ ಇಲಾಖೆಗಳಡಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿನಿಲಯಗಳಲ್ಲಿ ಮೂಲಭೂತ ಸೌಕರ್ಯವಿಲ್ಲ. ಇದರಿಂದಲೇ ಮಕ್ಕಳ ನೋಂದಣಿಯೂ ಕುಂಠಿತಗೊಂಡಿದೆ. ನಿರ್ಮಿತಿ ಕೇಂದ್ರದವರು ಮಕ್ಕಳಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸಬೇಕು’ ಎಂದು ಎಚ್ಚರಿಸಿದರು.

ಎಚ್ಚುವರಿ ಜಿಲ್ಲಾಧಿಕಾರಿ ಪುಷ್ಪಲತಾ, ಉಪ ವಿಭಾಗಾಧಿಕಾರಿ ಸೋಮಶೇಖರ್, ಜಿ.ಪಂ ಉಪ ಕಾರ್ಯದರ್ಶಿ ಸಂಜೀವಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.