ADVERTISEMENT

ಶಾಸಕರೇ,ಕೈಗಾರಿಕೆಗಳಿಗೆ ಧಮ್ಕಿ ಹಾಕುತ್ತೀರಾ?:ಕೊತ್ತೂರು ಮಂಜುನಾಥ್‌ ವಿರುದ್ಧ ಕಿಡಿ

ಕೊತ್ತೂರು ಮಂಜುನಾಥ್‌ ವಿರುದ್ಧ ಟೀಕಾ ಪ್ರಹಾರ, ಕ್ಷಮೆಯಾಚಿಸುವಂತೆ ಬಿಜೆಪಿ ಪಟ್ಟು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 6:53 IST
Last Updated 22 ಫೆಬ್ರುವರಿ 2026, 6:53 IST
ಕೋಲಾರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಓಂಶಕ್ತಿ ಚಲಪತಿ ಹಾಗೂ ಮುಖಂಡರು ಮಾತನಾಡಿದರು
ಕೋಲಾರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಓಂಶಕ್ತಿ ಚಲಪತಿ ಹಾಗೂ ಮುಖಂಡರು ಮಾತನಾಡಿದರು   

ಪ್ರಜಾವಾಣಿ ವಾರ್ತೆ

ಕೋಲಾರ: ವೇಮಗಲ್‌ನಲ್ಲಿ ಹೆಲಿಕಾಪ್ಟರ್ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆಯಾಗಿಲ್ಲವೆಂದು ಕಂಪನಿ ವಿರುದ್ಧ ಶಾಸಕ ಕೊತ್ತೂರು ಮಂಜುನಾಥ್ ಧಮ್ಕಿ ಹಾಕಿದ್ದು, ಕೂಡಲೇ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಓಂಶಕ್ತಿ ಚಲಪತಿ ಆಗ್ರಹಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ದೇಶದಲ್ಲೇ ಖಾಸಗಿ ವಲಯದ ಮೊದಲ ಹೆಲಿಕಾಪ್ಟರ್‌ ಜೋಡಣಾ ಘಟಕ ನಮ್ಮ ಜಿಲ್ಲೆಯಲ್ಲಿ ಸ್ಥಾಪನೆಯಾಗಿದೆ. ಇದು ದೇಶ, ರಾಜ್ಯ ಹಾಗೂ ಜಿಲ್ಲೆಯ ಪಾಲಿಗೆ ಹೆಮ್ಮೆಯ ಸಂಗತಿ. ಅಂದು ಕಾರ್ಯಕ್ರಮದಲ್ಲಿ ಬೃಹತ್‌ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ‌ ಕೂಡ ಇದ್ದು ಶ್ಲಾಘಿಸಿದ್ದಾರೆ. ಆದರೆ, ಕಂಪನಿಗೆ ರೈತರು ಟ್ರಾಕ್ಟರ್ ನುಗ್ಗಿಸಬೇಕು, ಕಂಬಕ್ಕೆ ಡಿಕ್ಕಿ ಹೊಡೆದು ವಿದ್ಯುತ್ ಪೂರೈಕೆ ಕಡಿತಗೊಳಿಸಬೇಕು, ಯಾವುದೇ ಕಾರಣಕ್ಕೂ ಖಾತೆ ಮಾಡಿಕೊಡಬಾರದು ಎಂದು ಶಾಸಕರು ಪ್ರಚೋದನಕಾರಿಯಾಗಿ ಹೇಳಿರುವುದು ಖಂಡನೀಯ’ ಎಂದರು.

ADVERTISEMENT

ಫೆ.15ರಂದು ನಡೆದ ಸಭೆಯಲ್ಲಿ ನಾನೂ ಭಾಗವಹಿಸಿದ್ದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಉಸ್ತುವಾರಿ ಸಚಿವರು, ಎಲ್ಲಾಲ್ಲ ಶಾಸಕರು, ವಿಧಾನ ಪರಿಷತ್‌ ಸದಸ್ಯರಿಗೆ ಆಸನ ವ್ಯವಸ್ಥೆ ಮಾಡಲಾಗಿತ್ತು. ಎಲ್ಲರಿಗೂ ಇ–ಮೇಲ್‌ ಮೂಲಕ ಆಹ್ವಾನ ನೀಡಿರುವುದಾಗಿ ಕಂಪನಿಯವರೂ ಮಾಹಿತಿ ನೀಡಿದ್ದರು ಎಂದು ಹೇಳಿದರು.

ನೀರು, ಅಭಿವೃದ್ಧಿ ಇಲ್ಲದೆ ಜಿಲ್ಲೆ ಸೊರಗಿದೆ. ಕಂಪನಿ ಬಂದಿರುವುದು ಸುದೈವ. ಇದಕ್ಕೆ ತಾವು ಟ್ರಾಕ್ಟರ್ ನುಗ್ಗಿಸುವೆ ಎಂದರೆ ಏನು ಅರ್ಥ? ಇಂತಹ ಹೇಳಿಕೆಗಳಿಂದಲೇ ಕೋಲಾರವು ಅಭಿವೃದ್ಧಿ ಆಗದೇ ಇದ್ದು, ದೌರ್ಜನ್ಯ ಮಾಡಿದರೆ ಬೇರೆ ಕಂಪನಿಯವರು ಬರುತ್ತಾರಾ? ವಿಸ್ಟ್ರಾನ್ ಕಂಪನಿಯಲ್ಲಿ ನಡೆದಿದ್ದ ದಾಂದಲೆಯಿಂದಾಗಿ ಈಗಲೂ ಅನೇಕ ಕಂಪನಿಯವರು ಕೋಲಾರದ ಕಡೆಗೆ ಬರುವುದಕ್ಕೆ ಹೆದರುತ್ತಿದ್ದಾರೆ ಎಂದರು.

ಉದ್ಯೋಗ, ನೀರು, ರಸ್ತೆ ವಿಚಾರವಾಗಿ ಬೇಕಾದರೆ ಮಾತನಾಡಿ. ಸ್ಥಳೀಯರಿಗೆ ಉದ್ಯೋಗದ ಕುರಿತು ಎಲ್ಲ ಕಂಪನಿಗಳಿಂದಲೂ ಮಾಹಿತಿ ಪಡೆದು, ಪ್ರಶ್ನೆ ಮಾಡಿ ಪಕ್ಷಾತೀತವಾಗಿ ತಮ್ಮ ಜತೆಗೆ ಇರುತ್ತೇವೆ. ಅದನ್ನು ಬಿಟ್ಟು ಗೊಡ್ಡು ಬೆದರಿಕೆ ಹಾಕುವುದು ಸರಿಯಲ್ಲ. ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

‘ಕುಡಾ’ ಮಾಜಿ ಅಧ್ಯಕ್ಷ ವಿಜಯ್ ಕುಮಾರ್ ಮಾತನಾಡಿ, ‘ಯಾವುದೇ ಕಂಪನಿ ವಿರುದ್ಧ ಸಾಮಾನ್ಯ ವ್ಯಕ್ತಿ ಮಾತನಾಡಿದ್ದರೆ ಪೊಲೀಸ್ ಇಲಾಖೆ ಸುಮ್ಮನೆ ಇರುತ್ತಿರಲಿಲ್ಲ. ಆದರೆ ಶಾಸಕರು ಇಷ್ಟು ಕಠೋರವಾಗಿ ಮಾತನಾಡಿದ್ದರೂ ಸುಮ್ಮನೆ ಇರುವುದು ಸರಿಯಲ್ಲ. ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ, ಕೂಡಲೇ ಕ್ರಮ ಕೈಗೊಳ್ಳಲಿ’ ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಸ್.ಬಿ.ಮುನಿವೆಂಕಟಪ್ಪ, ಸಾ.ಮಾ.ಅನಿಲ್ ಬಾಬು, ಸಿ.ಡಿ.ರಾಮಚಂದ್ರಗೌಡ, ಎನ್.ಎಸ್.ಪ್ರವೀಣ್ ಗೌಡ, ಕೆಂಬೋಡಿ ನಾರಾಯಣಸ್ವಾಮಿ, ನಾಮಾಲ್ ಮಂಜು ಇದ್ದರು.

ತಾವು ಇವತ್ತು ಇಲ್ಲಿರುತ್ತೀರಿ ನಾಳೆ ಇನ್ನೆಲ್ಲಿಗೋ ಹೋಗುತ್ತೀರಿ. ಈಗಲೇ ಎಷ್ಟು ದಿನಕ್ಕೆ ಒಂದು ಬಾರಿ ಕೋಲಾರಕ್ಕೆ ಬರುತ್ತೀರಿ ಎನ್ನುವುದು ನಮಗೆ ಗೊತ್ತಿದೆ. ಇನ್ನಾದರೂ ಅಭಿವೃದ್ಧಿಗೆ ಒತ್ತು ನೀಡಿ
ಓಂಶಕ್ತಿ ಚಲಪತಿ ಬಿಜೆಪಿ ಜಿಲ್ಲಾಧ್ಯಕ್ಷ

ಗೂಂಡಾ ರೀತಿ ಪದ ಬಳಕೆ ಬೇಡ

ಒಂದು ವೇಳೆ ಶಿಷ್ಠಾಚಾರ ಪಾಲನೆಯಾಗಿಲ್ಲ ಎನ್ನುವುದಾದರೆ ತಮಗೆ ನೋವಾಗಿದ್ದರೆ ಪ್ರಶ್ನೆ ಮಾಡಲು ಶಾಸಕರಿಗೆ ಹಕ್ಕಿದೆ. ಜಿಲ್ಲಾಧಿಕಾರಿಯ ಮೂಲಕ ಸಂಪರ್ಕಿಸಲಿ. ಅದನ್ನು ಬಿಟ್ಟು ಗೂಂಡಾ ರೀತಿ ಪದ ಬಳಕೆ ಸರಿಯಲ್ಲ. ಅದು ತಮ್ಮ ಸ್ಥಾನಕ್ಕೆ ಲಾಯಕ್ ಅಲ್ಲ. ಈ ಕಂಪನಿ ಚೆನ್ನೈ ಗುಜರಾತ್ ಗೆ ಹೋಗುವ ಪ್ರಯತ್ನವಾಗಿತ್ತು ಸಂಸದರ ಒತ್ತಡದಿಂದ ಇಲ್ಲಿ ಸ್ಥಾಪನೆಯಾಗಿದ್ದು ಎಲ್ಲರೂ ಸಹಕರಿಸಬೇಕು ಎಂದು ಓಂಶಕ್ತಿ ಚಲಪತಿ ಕೋರಿದರು.