ADVERTISEMENT

ವಿ.ವಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 14:20 IST
Last Updated 4 ಏಪ್ರಿಲ್ 2020, 14:20 IST

ಕೋಲಾರ: ಕೊರೊನಾ ಸೋಂಕಿನ ಕಾರಣಕ್ಕೆ ದಿಗ್ಬಂಧನ ಜಾರಿಯಾಗಿರುವುದರಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಆ್ಯಪ್‌ ಮೂಲಕ ತರಗತಿ ನಡೆಸಲು ಹಾಗೂ ಮಾರ್ಗದರ್ಶನ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವೆ ಡಿ.ಕುಮುದಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುಜಿಸಿ, ಉನ್ನತ ಶಿಕ್ಷಣ ಇಲಾಖೆ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ ವಿಶ್ವವಿದ್ಯಾಲಯದಿಂದ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಅಧ್ಯಾಪಕರು ಆ್ಯಪ್‌ ತಂತ್ರಜ್ಞಾನದ ಮೂಲಕ ಉಪನ್ಯಾಸ, ಸಂಶೋಧನಾ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಸರ್ಕಾರ ಏ.14ರವರೆಗೂ ಕಾಲೇಜು ಮತ್ತು ವಿ.ವಿಗೆ ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ರಜೆ ದಿನಗಳಲ್ಲೂ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಚಟುವಟಿಕೆಗಳಲ್ಲಿ ರಚನಾತ್ಮಕವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ವಿವಿಧ ವಿಭಾಗಗಳ ಅಧ್ಯಾಪಕರು ಇ-–ಮೇಲ್, ಜೂಮ್ ತಂತ್ರಾಂಶ ಬಳಸಿಕೊಂಡು ಆನ್‌ಲೈನ್‌ ಮೂಲಕ ಸಲಹೆ ಸೂಚನೆ ನೀಡುತ್ತಾರೆ. ಅಸೈನ್‍ಮೆಂಟ್, ಸೆಮಿನಾರ್ ಸಿದ್ಧತೆ, ಯೋಜನಾ ವರದಿಗಳ ತಯಾರಿ, ಪಠ್ಯಕ್ರಮ ಕಲಿಕೆ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ವಿದ್ಯಾರ್ಥಿಗಳು ಇ-ಮೇಲ್ ಮತ್ತು ಆ್ಯಪ್‌ ಮೂಲಕ ಅಧ್ಯಾಪಕರನ್ನು ಮರು ಸಂಪರ್ಕಿಸಿ ಚರ್ಚಿಸಲು ಅವಕಾಶ ಮಾಡಿಕೊಡಲಾಗಿದೆ. ಯುಜಿಸಿಯ ವಿವಿಧ ಎಂ.ಒ.ಒ.ಸಿ ಕೋರ್ಸ್‌ಗಳು, ಆನ್‌ಲೈನ್ ಕೋರ್ಸ್‌ಗಳು, ಸ್ವಯಂ ಕಲಿಕಾ ಕೋರ್ಸ್‌ಗಳಿಗೆ ನೋಂದಣಿ ಮಾಡಿಕೊಂಡು ಹೆಚ್ಚುವರಿ ಡಿಪ್ಲೊಮಾ, ಸರ್ಟಿಫಿಕೇಟ್ ಕೋರ್ಸ್‌ ಪಡೆದುಕೊಳ್ಳುವ ಸಮಗ್ರ ಮಾಹಿತಿಯನ್ನೂ ಅಧ್ಯಾಪಕರು, ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.