ಕೋಲಾರ: ಕೋವಿಡ್-19 ನಿಯಂತ್ರಿಸಲು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಅಗತ್ಯವಾಗಿದ್ದು, ಇದಕ್ಕೆ ಪೂರಕವಾಗಿ ವೈಯಕ್ತಿಕ ಮತ್ತು ಸಮುದಾಯ ಪೌಷ್ಟಿಕ ತೋಟಗಳ ನಿರ್ಮಾಣಕ್ಕೆ ನರೇಗಾ ಅಡಿ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಥಳಾವಕಾಶವಿರುವ ಗ್ರಾಮೀಣ ಭಾಗದ ಶಾಲೆಗಳು, ಅಂಗನವಾಡಿಗಳು, ಹಾಸ್ಟೆಲ್‌ಗಳ ಆವರಣದಲ್ಲಿ ಹಾಗೂ ವೈಯಕ್ತಿಕ ಮನೆಗಳ ಹಿತ್ತಿಲು ಅಥವಾ ಕಾಂಪೌಂಡ್ ಒಳಗೆ ನಿಗದಿತ ಹಣ್ಣು ಮತ್ತು ತರಕಾರಿ ಬೆಳೆಯಬಹುದು. ವೈಯಕ್ತಿಕ ಕಾಮಗಾರಿಗಳಿಗೆ ₹ 2,397 ಹಾಗೂ ಸಮುದಾಯ ಕಾಮಗಾರಿಗಳಿಗೆ ₹ 37,391 ಮತ್ತು ₹ 25,055 ಹಾಗೂ ₹ 19,044 ಮಾದರಿ ಅಂದಾಜು ಪಟ್ಟಿ ಅನುಮೋದಿಸಲಾಗಿದೆ ಎಂದು ಹೇಳಿದ್ದಾರೆ.
ನುಗ್ಗೆಕಾಯಿ (ಒಂದು ಗಿಡಕ್ಕೆ ₹ 14), ನಿಂಬೆ (ಒಂದು ಗಿಡಕ್ಕೆ ₹ 22), ಸೀಬೆ (ಒಂದು ಗಿಡಕ್ಕೆ ₹ 36), ಕರಿಬೇವು (ಒಂದು ಗಿಡಕ್ಕೆ ₹ 12), ಪಪ್ಪಾಯ (ಒಂದು ಗಿಡಕ್ಕೆ ₹ 16), ಮಾವು (ಒಂದು ಗಿಡಕ್ಕೆ ₹ 44), ಚಕ್ರಮುನಿ (ಒಂದು ಗಿಡಕ್ಕೆ ₹ 10), ಬೆಟ್ಟದ ನೆಲ್ಲಿಕಾಯಿ (ಒಂದು ಗಿಡಕ್ಕೆ ₹ 75), ಕಿರು ನೆಲ್ಲಿಕಾಯಿ (ಒಂದು ಗಿಡಕ್ಕೆ ₹ 25), ದಾಳಿಂಬೆ (ಒಂದು ಗಿಡಕ್ಕೆ ₹ 40), ಬಸಳೆ (ಒಂದು ಗಿಡಕ್ಕೆ ₹ 15), ಫ್ಯಾಷನ್ ಫ್ರೂಟ್ (ಒಂದು ಗಿಡಕ್ಕೆ ₹ 30), ಅಂಗಾಂಶ ಬಾಳೆ (ಒಂದು ಗಿಡಕ್ಕೆ ₹ 15), ಅಂಗಾಂಶ ಬಾಳೆ (ಒಂದು ಗಿಡಕ್ಕೆ ₹ 28) ಸಾಗಾಣಿಕೆ ವೆಚ್ಚ ಒಳಗೊಂಡಂತೆ ದರ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕಾಮಗಾರಿಗಳಿಗೆ ಅವಶ್ಯವಿರುವ ಸಸಿಗಳನ್ನು ಪೂರೈಸಲು ಜಿಲ್ಲಾ ಮಟ್ಟದಲ್ಲಿ ಪೂರೈಕೆದಾರ ನರ್ಸರಿಗಳನ್ನು ಗುರುತಿಸಿ ಗರಿಷ್ಠ ದರ ನಿಗದಿಪಡಿಸಿ ಅನುಮೋದಿಸಲಾಗಿದೆ. ಆಸಕ್ತ ಫಲಾನುಭವಿಗಳು ಅನುಷ್ಠಾನ ಏಜೆನ್ಸಿಗಳಾದ ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳು ಅಥವಾ ತೋಟಗಾರಿಕೆ ಇಲಾಖೆ ಕಚೇರಿಗಳನ್ನು ಸಂಪರ್ಕಿಸಿ ಸದುಪಯೋಗ ಪಡೆಯಬಹುದು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.