ADVERTISEMENT

ರಾಜಕೀಯ ದುರುದ್ದೇಶಕ್ಕೆ ವಿರೋಧ

ವಿಪಕ್ಷಗಳ ವಿರುದ್ಧ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೇಣುಗೋಪಾಲ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 14:48 IST
Last Updated 22 ಸೆಪ್ಟೆಂಬರ್ 2020, 14:48 IST

ಕೋಲಾರ: ‘ವಿಪಕ್ಷಗಳು ರಾಜಕೀಯ ದುರುದ್ದೇಶದಿಂದ ಭೂ ಸುಧಾರಣೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿವೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಎನ್‌.ವೇಣುಗೋಪಾಲ್‌ ಟೀಕಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿರುವುದು ಸರ್ಕಾರದ ಜನಪರ ನಡೆಯಾಗಿದೆ. ಆದರೆ, ವಿಪಕ್ಷಗಳು ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಕೇಂದ್ರದ ವಿರುದ್ಧ ಜನರನ್ನು ಎತ್ತಿ ಕಟ್ಟುತ್ತಿವೆ’ ಎಂದು ಆರೋಪಿಸಿದರು.

‘ಪ್ರಧಾನಿ ಮೋದಿ ಅವರು ಮಂಡಿಸಿದ ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ, ರೈತರ (ಕಲ್ಯಾಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ ಮಸೂದೆಗೆ ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲಿ ಅಂಗೀಕಾರ ದೊರತಿದೆ. ಇದು ಕೇಂದ್ರ ಸರ್ಕಾರದ ಮಹತ್ವದ ಹೆಜ್ಜೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಈ ತಿದ್ದುಪಡಿ ಮಸೂದೆಗಳು ದೇಶದ ಕೃಷಿ ವಲಯದಲ್ಲಿ ಕ್ರಾಂತಿ ಸೃಷ್ಟಿಸಲಿವೆ. ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಮುಂದುವರಿಯಲಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ ಅನ್ವಯ ನೋಂದಣಿ ಮಾಡಿಕೊಂಡಿರುವ ಮಾರುಕಟ್ಟೆಗಳ ಹೊರತಾಗಿ ರೈತರು ಕೃಷಿ ಉತ್ಪನ್ನ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕೃಷಿ ಕ್ಷೇತ್ರದಲ್ಲಿ ಸ್ವಾತಂತ್ರ್ಯ, ಮೂಲಸೌಕರ್ಯ ಅಭಿವೃದ್ಧಿ, ಹೂಡಿಕೆ ಆಕರ್ಷಣೆಗೆ ಈ ಮಸೂದೆಗಳು ಸೂಕ್ತ’ ಎಂದರು.

‘ಪ್ರತಿಪಕ್ಷಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ನೀತಿ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡು ಕೋಲಾಹಲ ಸೃಷ್ಟಿಸುತ್ತಿರುವುದು ಸರಿಯಲ್ಲ. ಈ ತಿದ್ದುಪಡಿಗಳನ್ನು ವಿರೋಧಿಸುತ್ತಿರುವ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಕೃಷಿ ಮಾರುಕಟ್ಟೆ ಸುಧಾರಣೆ ಸಂಗತಿಯನ್ನು ಪ್ರಮುಖವಾಗಿ ಉಲ್ಲೇಖಿಸಿದ್ದರೂ ರಾಜಕೀಯ ಕಾರಣಕ್ಕೆ ಅನಗತ್ಯ ಗೊಂದಲ ಸೃಷ್ಟಿಸುತ್ತಿವೆ’ ಎಂದು ದೂರಿದರು.

ಉತ್ತೇಜನ: ‘ನೂತನ ಕಾಯ್ದೆಯಡಿ ರೈತರಿಗೆ ಹಾಗೂ ವ್ಯಾಪಾರಿಗಳಿಗೆ ತಮಗಿಷ್ಟ ಬಂದ ಕೃಷಿ ಉತ್ಪನ್ನ ಖರೀದಿಸುವ ಸ್ವಾತಂತ್ರ್ಯ ನೀಡಲಾಗಿದೆ. ಪರ್ಯಾಯ ವ್ಯಾಪಾರ ವ್ಯವಸ್ಥೆ ಮೂಲಕ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ದರ ನಿಗದಿಪಡಿಸಲು ನೆರವಾಗಲಿದೆ. ಜತೆಗೆ ಕೃಷಿ ಉತ್ಪನ್ನಗಳ ಪಾರದರ್ಶಕ, ತಡೆರಹಿತ ಅಂತರರಾಜ್ಯ ಹಾಗೂ ರಾಜ್ಯದೊಳಗಿನ ವ್ಯಾಪಾರಕ್ಕೆ ಉತ್ತೇಜನ ಸಿಗಲಿದೆ’ ಎಂದು ವಿವರಿಸಿದರು.

‘ರೈತರ (ಕಲ್ಯಾಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ ಮಸೂದೆಯು ಕೃಷಿ ಉದ್ಯಮ ಸಂಸ್ಥೆಗಳು, ಸಗಟು ವ್ಯಾಪಾರಿಗಳು, ರಫ್ತುದಾರರು, ಚಿಲ್ಲರೆ ವ್ಯಾಪಾರಿಗಳೊಂದಿಗೆ ವಹಿವಾಟು ನಡೆಸಲು ರೈತರಿಗೆ ಭದ್ರತೆ ಹಾಗೂ ಪ್ರೋತ್ಸಾಹ ನೀಡುವ ಒಪ್ಪಂದ ಕುರಿತು ರಾಷ್ಟ್ರೀಯ ಚೌಕಟ್ಟು ನಿರ್ಮಿಸುವ ಉದ್ದೇಶ ಹೊಂದಿದೆ’ ಎಂದು ಮಾಹಿತಿ ನೀಡಿದರು.

₹ 6,800 ಕೋಟಿ: ‘ಕೇಂದ್ರ ಸರ್ಕಾರವು ಕೃಷಿ ಉತ್ಪನ್ನಗಳಿಗೆ ರೈತರೇ ಬೆಲೆ ನಿಗದಿಪಡಿಸಲು ನೆರವಾಗುವ ನಿಟ್ಟಿನಲ್ಲಿ 10 ಸಾವಿರ ರೈತ ಉತ್ಪಾದಕ ಸಂಸ್ಥೆಗಳ ಸ್ಥಾಪನೆಗೆ ಅವಕಾಶ ಕಲ್ಪಿಸಿದೆ. ಅಲ್ಲದೇ, ₹ 6,800 ಕೋಟಿ ಮೀಸಲಿಟ್ಟಿದೆ. ಇದರಿಂದ 30 ಲಕ್ಷ ರೈತರಿಗೆ ಅನುಕೂಲವಾಗುತ್ತದೆ’ ಎಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಲಕ್ಷ್ಮಣಗೌಡ ಹೇಳಿದರು.

ಬಿಜೆಪಿ ಜಿಲ್ಲಾ ಸಮನ್ವಯ ಸಮಿತಿ ಸದಸ್ಯ ಎಸ್.ಬಿ.ಮುನಿವೆಂಕಟಪ್ಪ, ಜಿಲ್ಲಾ ಘಟಕದ ಉಪಾಧ್ಯಕ್ಷ ನಾರಾಯಣಸ್ವಾಮಿ, ನಗರ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ, ಗ್ರಾಮಾಂತರ ಘಟಕದ ಅಧ್ಯಕ್ಷ ಸಿ.ಡಿ.ರಾಮಚಂದ್ರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.