ADVERTISEMENT

ವಿದ್ಯುತ್‌ ಕಾಯ್ದೆ ತಿದ್ದುಪಡಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 29 ಮೇ 2020, 16:48 IST
Last Updated 29 ಮೇ 2020, 16:48 IST
ವಿದ್ಯುತ್ ಕಾಯ್ದೆಗೆ ತಿದ್ದುಪಡಿ ಮಾಡದಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೋಲಾರದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು.
ವಿದ್ಯುತ್ ಕಾಯ್ದೆಗೆ ತಿದ್ದುಪಡಿ ಮಾಡದಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೋಲಾರದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು.   

ಕೋಲಾರ: ವಿದ್ಯುತ್ ಕಾಯ್ದೆ 2003ಕ್ಕೆ ತಿದ್ದುಪಡಿ ಮಾಡದಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರವು ಕೊರೊನಾ ಸಂಕಷ್ಟ ಹಾಗೂ ಆರ್ಥಿಕ ಹಿಂಜರಿತದ ನಡುವೆಯೂ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೆ ಈ ತಿದ್ದುಪಡಿ ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಸಂಘಟನೆ ಸದಸ್ಯರು ಒತ್ತಾಯಿಸಿದರು.

‘ಕೊರೊನಾ ಸೋಂಕು ಹಾಗೂ ಲಾಕ್‌ಡೌನ್‌ನಿಂದ ರಾಜ್ಯದ ಜನ ತತ್ತರಿಸಿದ್ದಾರೆ. ಕೇಂದ್ರವು ಪರಿಸ್ಥಿತಿಯ ಗಂಭೀರತೆ ಅರಿಯದೆ ತನ್ನ ಜವಾಬ್ದಾರಿ ಮರೆದು ವಿದ್ಯುತ್‌ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಈ ನಡೆ ಸರಿಯಲ್ಲ’ ಎಂದು ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.

ADVERTISEMENT

‘ವಿದ್ಯುತ್ ಕಾಯಿದೆ ತಿದ್ದುಪಡಿ ತರಲು ಕೇಂದ್ರವು ಈಗಾಗಲೇ ಎಲ್ಲಾ ರಾಜ್ಯ ಸರ್ಕಾರಗಳಿಗೆ ಕರಡು ಪ್ರತಿ ರವಾನಿಸಿದೆ. ರೈತರು ಕೃಷಿ ಉದ್ದೇಶದ ಪಂಪ್‌ಸೆಟ್‌ಗಳ ವಿದ್ಯುತ್‌ ಬಿಲ್‌ ಮೊದಲು ಪಾವತಿಸಬೇಕು. ನಂತರ ಆ ಬಿಲ್‌ನ ಮೊತ್ತವನ್ನು ಹಿಂದಿರುಗಿಸುವುದಾಗಿ ಸರ್ಕಾರ ಹೇಳಿದೆ. ಕಾಯ್ದೆ ತಿದ್ದುಪಡಿಯಾದರೆ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ಸಂಪರ್ಕ ಸಿಗುವುದಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

ಖಾಸಗಿಯವರ ಕೈ ಬಲ: ‘ಕಾಯ್ದೆ ತಿದ್ದುಪಡಿ ಮಾಡಿದರೆ ವಿದ್ಯುತ್ ಪ್ರಸರಣ ವ್ಯವಸ್ಥೆಯಲ್ಲಿ ಖಾಸಗಿ ಕಂಪನಿಗಳ ಕೈ ಬಲವಾಗಲಿದೆ. ವಿದ್ಯುತ್ ಮಾರಾಟ, ಖರೀದಿ, ಪ್ರಸರಣ, ಸಬ್ ಲೈಸೆನ್ಸಿಂಗ್ ಹಾಗೂ ಪ್ರಾಂಚೈಸಿ ವ್ಯವಸ್ಥೆ ಸಂಪೂರ್ಣವಾಗಿ ಖಾಸಗಿಯವರ ಪಾಲಾಗುತ್ತದೆ. ರೈತರು ಮತ್ತು ಬಡವರಿಗೆ ಉಚಿತವಾಗಿ ನೀಡುತ್ತಿದ್ದ ಸಬ್ಸಿಡಿ ದರದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ದರ ಹೆಚ್ಚಳದ ಅಧಿಕಾರ ಖಾಸಗಿಯವರ ಪಾಲಾಗಲಿದೆ’ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೂ ವಿದ್ಯುತ್‌ ತಿದ್ದುಪಡಿ ಕಾಯ್ದೆ ಬೆಂಬಲಿಸಬಾರದು. ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯದಲ್ಲಿ ಕಾಯ್ದೆ ವಿರೋಧಿಸಿರುವಂತೆ ರಾಜ್ಯದಲ್ಲೂ ವಿರೋಧ ವ್ಯಕ್ತಪಡಿಸಿ ರೈತರು ಮತ್ತು ಬಡವರ ಹಿತ ಕಾಯಬೇಕು’ ಎಂದು ಮನವಿ ಮಾಡಿದರು.

ಸಂಘಟನೆ ಸದಸ್ಯರಾದ ನಾಗರಾಜಗೌಡ, ತಿಮ್ಮಣ್ಣ, ವೆಂಕಟೇಶಪ್ಪ, ಆಂಜಿನಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.