ADVERTISEMENT

ಕೆಜಿಎಫ್‌: ವರ್ತಕರಿಗೆ ಜಾಗ ಮಂಜೂರಿಗೆ ಎಂ.ಜಿ. ಮಾರುಕಟ್ಟೆ ವರ್ತಕರ ಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 3:29 IST
Last Updated 20 ಜನವರಿ 2021, 3:29 IST
ಕೆಜಿಎಫ್‌ ರಾಬರ್ಟ್‌ಸನ್‌ಪೇಟೆಯ ಎಂ.ಜಿ.ಮಾರುಕಟ್ಟೆ ವರ್ತಕರು ಇ ಹರಾಜಿಗೆ ವಿರೋಧ ವ್ಯಕ್ತಪಡಿಸಿ ಮಂಗಳವಾರ ಪ್ರತಿಭಟನೆಯನ್ನು ಮುಂದುವರೆಸಿದರು
ಕೆಜಿಎಫ್‌ ರಾಬರ್ಟ್‌ಸನ್‌ಪೇಟೆಯ ಎಂ.ಜಿ.ಮಾರುಕಟ್ಟೆ ವರ್ತಕರು ಇ ಹರಾಜಿಗೆ ವಿರೋಧ ವ್ಯಕ್ತಪಡಿಸಿ ಮಂಗಳವಾರ ಪ್ರತಿಭಟನೆಯನ್ನು ಮುಂದುವರೆಸಿದರು   

ಕೆಜಿಎಫ್‌: ನಗರಸಭೆ ವ್ಯಾಪ್ತಿಯಲ್ಲಿ ಭೂ ಬಾಡಿಗೆ ನೀಡಿದ ಜಾಗವನ್ನು ಬಾಡಿಗೆದಾರರಿಗೆ ಮಂಜೂರು ಮಾಡಬೇಕು ಎಂದು ಎಂಜಿ.ಮಾರುಕಟ್ಟೆ ವರ್ತಕರ ಸಂಘ ಆಗ್ರಹಿಸಿದೆ.

ಮಾರುಕಟ್ಟೆಯಲ್ಲಿ ವರ್ತಕರು 80–90 ವರ್ಷಗಳಿಂದ ಅಂಗಡಿಗಳನ್ನು ಇಟ್ಟುಕೊಂಡು ಜೀವನ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿರುವ 1,779 ಅಂಗಡಿಗಳನ್ನು ಎರಡು ಮೂರು ಪೀಳಿಗೆಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ. ಈಗ ಅಂಗಡಿಗಳನ್ನು ಹನ್ನೆರಡು ವರ್ಷದ ಅವಧಿಗೆ ಬಾಡಿಗೆ ನೀಡಲು ಇ ಹರಾಜಿನ ಮೂಲಕ ನಗರಸಭೆ ತೀರ್ಮಾನಿಸಿದೆ. ಇದರಿಂದಾಗಿ ಅಂಗಡಿ ಮಾಲೀಕರು ಅಂಗಡಿ ಕಳೆದುಕೊಂಡು ನಿರುದ್ಯೋಗಿಗಳಾಗುವ ಸಂಭವ ಹೆಚ್ಚಾಗಿದೆ. ಆದ್ದರಿಂದ ನೆಲ ಬಾಡಿಗೆ ಆಧಾರದ ಮೇರೆಗೆ ಕಟ್ಟಡಗಳನ್ನು ಮಂಜೂರು ಮಾಡಬೇಕು. ಈ ಸಂಬಂಧವಾಗಿ ನಗರಸಭೆಯಲ್ಲಿ ತೀರ್ಮಾನ ತೆಗೆದುಕೊಂಡು ಜಿಲ್ಲಾಧಿಕಾರಿಗಳಿಗೆ ಕಳಿಸಬೇಕು ಎಂದು ವರ್ತಕರ ಸಂಘದ ಪದಾಧಿಕಾರಿಗಳು ನಗರಸಭೆ ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ ಅವರನ್ನು
ಒತ್ತಾಯಿಸಿದ್ದಾರೆ.

ಈ ಸಂಬಂಧವಾಗಿ ಮಾತನಾಡಿದ ಕಾರ್ಮಿಕ ಮುಖಂಡ ಕೆ.ರಾಜೇಂದ್ರನ್‌, ರಾಣಿಬೆನ್ನೂರು ಪಟ್ಟಣದಲ್ಲಿ ಸ್ವಾತಂತ್ರ್ಯ ಪೂರ್ವದಿಂದ ವಾಸವಿದ್ದ ಸರ್ಕಾರಿ ಜಾಗದಲ್ಲಿ ವಾಸವಿದ್ದ ಜನರಿಗೆ ಸ್ಥಳೀಯ ಸಂಸ್ಥೆ ನಿಗದಿ ಮಾಡಿದ ದರದಲ್ಲಿ ಮನೆಗಳನ್ನು ಮಂಜೂರು ಮಾಡಬೇಕೆಂಬ ಆದೇಶವಿದೆ. ಅದಕ್ಕೆ ಡಿಸಂಬರ್ ತಿಂಗಳಲ್ಲಿ ರಾಜ್ಯ ಸಚಿವ ಸಂಪುಟ ಕೂಡನಿವಾಸಿಗಳ ಪರವಾಗಿ ತೀರ್ಮಾನ ತೆಗೆದುಕೊಂಡಿದೆ. ಅದೇ ರೀತಿಯಲ್ಲಿ ಎಂ.ಜಿ.ಮಾರುಕಟ್ಟೆಯ ವರ್ತಕರು ಕೂಡ ಸ್ವಾತಂತ್ರ್ಯ ಪೂರ್ವದಿಂದ ನಲೆ ಬಾಡಿಗೆಯಲ್ಲಿ ವ್ಯಾಪಾರ
ನಡೆಸುತ್ತಿದ್ದಾರೆ. ಅವರಿಗೆ ಸಹ ಇದೇ ಮಾದರಿಯಲ್ಲಿ ಮಂಜೂರು ಮಾಡಬೇಕು ಎಂದು ಹೇಳಿದರು.

ADVERTISEMENT

ವರ್ತಕರ ಸಂಘವು ನೀಡಿದ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ಮನವಿಯ ಪ್ರತಿಯನ್ನು ಜಿಲ್ಲಾಧಿಕಾರಿಗೆ ಸೂಕ್ತ ಕ್ರಮಕ್ಕಾಗಿ ಕಳಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.