ADVERTISEMENT

ಕೋಲಾರ| ಅಂಗಾಂಗ ದಾನ ಮಾಡಿ ಆರೇಳು ಜೀವಗಳ ಬಾಳಿಗೆ ಬೆಳಕಾದ ಮಹಿಳೆ

ಕೆ.ಓಂಕಾರ ಮೂರ್ತಿ
Published 26 ಜನವರಿ 2026, 5:27 IST
Last Updated 26 ಜನವರಿ 2026, 5:27 IST
ಶಿಲ್ಪಾ
ಶಿಲ್ಪಾ   

ಕೋಲಾರ: ಆ ಮಹಿಳೆಯನ್ನು ಬದುಕಿಸಲು ಕುಟುಂಬಸ್ಥರು ಶಕ್ತಿ ಮೀರಿ ಪ್ರಯತ್ನಿಸಿದರು. ಆ ಪ್ರಯತ್ನಕ್ಕೆ ಫಲ ದೊರೆಯಲಿಲ್ಲ. ಆದರೆ, ಆಕೆಯ ನಿಂತ ಉಸಿರಲಿ ಆರೇಳು ಜೀವಗಳು ಬದುಕಿವೆ. ಆ ಮಹಿಳೆಯ ಹೃದಯ ಮತ್ತೊಬ್ಬರ ದೇಹ ಸೇರಿ ಮಿಡಿಯುತ್ತಿದೆ, ಮುಚ್ಚಿದ ಕಂಗಳು ಹಲವರ ಬಾಳಿಗೆ ಬೆಳಕು ನೀಡಿವೆ.

ತಾಲ್ಲೂಕಿನ ನಾಗನಾಳ ಗ್ರಾಮದ ಆ ಮಹಿಳೆ ಶಿಲ್ಪಾ ನವೀನ್‌ ಕುಮಾರ್‌ ಹಲವು ಜೀವ ಉಳಿಸಿದವರು. ಅನಾರೋಗ್ಯದಿಂದ ಮೆದುಳು ನಿಷ್ಕ್ರಿಯಗೊಂಡ ಕಾರಣ ಕುಟುಂಬದವರು 33 ವರ್ಷ ವಯಸ್ಸಿನ ಆ ಮಹಿಳೆಯ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಕಣ್ಣು, ಹೃದಯ, ಯಕೃತ್‌. ಶ್ವಾಸಕೋಶ, ಮೇದೋಜೀರಕ ಗ್ರಂಥಿ, ಕಿಡ್ನಿ ದಾನ ಮಾಡಲಾಗಿದೆ. 

ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಯ ಎಆರ್‌ಟಿ ವಿಭಾಗದಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿದ್ದ ಶಿಲ್ಪಾ, ಸ್ನೇಹಮಯಿ ನಡವಳಿಕೆ ಮೂಲಕ ಗಮನ ಸೆಳೆದಿದ್ದರು.

ADVERTISEMENT

ಆರೋಗ್ಯದಲ್ಲಿ ಉಂಟಾದ ಏರುಪೇರಿನಿಂದಾಗಿ ಕೆಲ ದಿನಗಳ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ತುಸು ವ್ಯತ್ಯಾಸವಾಗಿ ಕೋಮಾಗೆ ಜಾರಿದ್ದರು. ಒಂದು ವಾರ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಕೊನೆಗೆ ಮೆದುಳು ನಿಷ್ಕ್ರಿಯಗೊಂಡ ಕಾರಣ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ಒಪ್ಪಿದರು. ತಮ್ಮ ಸಹೋದರಿಯೂ ಆಗಿರುವ ಶಿಲ್ಪಾ ಅವರ ಅಂಗಾಂಗ ದಾನ ಮಾಡುವಲ್ಲಿ ಕುಟುಂಬಸ್ಥರ ಮನವೊಲಿಸುವಲ್ಲಿ ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ.ಎಂ.ಜಗದೀಶ್ ಯಶಸ್ವಿಯಾದರು. ನರಸಾಪುರದ ಕೈಗಾರಿಕಾ ಪ್ರದೇಶದ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿರುವ ‍ಆಕೆಯ ಪತಿ ನವೀನ್ ಕುಮಾರ್, ಕುಟುಂಬದವರಾದ ಪ್ರವೀಣ್, ಕೆಂಪೇಗೌಡ, ಗೌರಮ್ಮ ಮಾನವೀಯತೆ ಮೆರೆದಿದ್ದಾರೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ವೈದ್ಯರು ಅಂಗಾಂಗ ಕಸಿ ಮಾಡಿದ್ದಾರೆ.

ಮಹಿಳೆಯು ಅಂಗಾಂಗ ಕಸಿ ಅವಶ್ಯವಿರುವ ಹಲವು ರೋಗಿಗಳ ಪ್ರಾಣ ಉಳಿಸಿದ್ದಾರೆ. ಆ ಮಹಿಳೆಯ ಕುಟುಂಬಸ್ಥರ ಈ ನಿರ್ಧಾರ ಇತರರಿಗೆ ಮಾದರಿಯಾಗಿದೆ. ಇವರ ನಡೆಯನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ. ಡಾ.ಜಗದೀಶ್ ಅವರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಆರೋಗ್ಯ ಕ್ಷೇತ್ರದಲ್ಲೇ ಇರುವ ಅವರು ಇಂಥ ಕಾರ್ಯಕ್ಕೆ ಉಳಿದವರೂ ಮುಂದಾಗಲು ಸ್ಫೂರ್ತಿ ಆಗಿ ಹೊರಹೊಮ್ಮಿದ್ದಾರೆ. ಈ ಕಾರ್ಯ ಮೆಚ್ಚಿ ಜಿಲ್ಲಾಡಳಿತವು ಸೋಮವಾರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಿಲ್ಪಾ ಕುಟುಂಬಸ್ಥರನ್ನು ಸನ್ಮಾನಿಸುತ್ತಿದೆ.

ಡಾ.ಎಂ.ಜಗದೀಶ್

ದಾನಿಯ ಕುಟುಂಬಕ್ಕೆ ಇಂದು ಸನ್ಮಾನ

ಕೋಲಾರದ ಸರ್‌ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಅಂಗಾಂಗ ದಾನಿ ಶಿಲ್ಪಾ ಅವರ ಕುಟುಂಬಸ್ಥರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಕಾರ್ಯ ನೆರವೇರಿಸಲಿದ್ದಾರೆ. ಈ ಮೂಲಕ ಜಿಲ್ಲಾಡಳಿತ ಉತ್ತಮ ಕೆಲಸ ಮಾಡುತ್ತಿದೆ.

ಜಿಲ್ಲಾ ಸರ್ಜನ್‌ ಸಹೋದರಿ

ಶಿಲ್ಪಾ ಕೋಲಾರದ ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ.ಎಂ.ಜಗದೀಶ್‌ ಅವರ ಚಿಕ್ಕಪ್ಪನ ಪುತ್ರಿ ಶಿಲ್ಪಾ ಮೂಲತಃ ಸೂಲೂರು ಗ್ರಾಮದವರು. ನಾಗನಾಳ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಅವರ ಪತಿ ನವೀನ್‌ ಕುಮಾರ್‌‌. ಶಿಲ್ಪಾ ಜಿಲ್ಲಾಸ್ಪತ್ರೆಯ ಎಆರ್‌ಟಿ ವಿಭಾಗದಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು.

ಅಂಗಾಂಗ ದಾನದಿಂದ ಹಲವರ ಮನೆಗೆ ಬೆಳಕು

ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿ 7 ಮಂದಿಗೆ ವಿವಿಧ ಅಂಗಾಂಗ ದಾನ ಮಾಡಿ ಜೀವ ಉಳಿಸಬಹುದು. ಕಾರಣಾಂತರಗಳಿಂದ ವ್ಯಕ್ತಿಯ ಮೆದುಳು ನಿಷ್ಕ್ರಿಯಗೊಂಡ ಸಂದರ್ಭದಲ್ಲಿ ಅವರ ಕುಟುಂಬದವರು ಕಣ್ಣು ಹೃದಯ ಶ್ವಾಸಕೋಶ ಮೇದೋಜೀರಕ ಗ್ರಂಥಿ ಯಕೃತ್‌ ಕಿಡ್ನಿ ಕೊಡುವುದರೊಂದಿಗೆ ಹಲವರ ಮನೆ ಬೆಳಗುವಂತೆ ಮಾಡಬಹುದು. ಅಂಗಾಗ ದಾನದ ನಂತರ ದೇಹ ವಿರೂಪಗೊಳ್ಳುವುದಿಲ್ಲ. ದೇಹವನ್ನು ಸುಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಅಂಗಾಂಗ ದಾನ ಮಾಡಬೇಕು ಡಾ.ಎಂ.ಜಗದೀಶ್ ಜಿಲ್ಲಾ ಶಸ್ತ್ರಚಿಕಿತ್ಸಕ ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆ ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.