ಕೋಲಾರ: ಮನೆಗಳನ್ನು ವರ್ಣಮಯಗೊಳಿಸುವ ಬಣ್ಣದ ಕಾರ್ಮಿಕರ ಮನೆಗಳಲ್ಲಿ ಇನ್ನೂ ಅಂಧಕಾರವಿದ್ದು, ಅವರನ್ನು ಸಂಘಟಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಬೇಕು. ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ಶಕ್ತಿ ಗಳಿಸಬೇಕು ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾ ಬಣ್ಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ 20ನೇ ವಾರ್ಷಿಕೋತ್ಸವ ಹಾಗೂ ಸಂಘದ ಹಿರಿಯರನ್ನು ಸನ್ಮಾನಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನರೇಂದ್ರ ಮೋದಿ ಸರ್ಕಾರ ಪಿಎಂ ಸ್ವನಿಧಿ ಯೋಜನೆ, ವಿಶ್ವಕರ್ಮ ಕೌಶಲ ತರಬೇತಿ ಯೋಜನೆ, ವಿಮೆ ಸೌಲಭ್ಯ ಹೀಗೆ ಹಲವಾರು ಕಾರ್ಯಕ್ರಮ ನೀಡಿದೆ. ಮೊದಲು ಗುರುತಿನ ಚೀಟಿ, ಇ-ಶ್ರಮ ಕಾರ್ಡ್ ಮಾಡಿಸಿಕೊಂಡು ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಕೈಗಾರಿಕೆ ವಲಯ ಮಾತ್ರವಲ್ಲ, ಅಸಂಘಟಿತ ಕಾರ್ಮಿಕರಿಗೂ ಇಎಸ್‍ಐ ಆಸ್ಪತ್ರೆ ಸೌಲಭ್ಯವಿದೆ. ಕೇಂದ್ರ ಸರ್ಕಾರ ಈ ಆಸ್ಪತ್ರೆಗಾಗಿ ₹ 100 ಕೋಟಿ ಬಿಡುಗಡೆ ಮಾಡಿದೆ. ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ 5.5 ಎಕರೆ ಜಾಗ ಮೀಸಲಿಟ್ಟಿದ್ದು ಕೆಲಸ ನಡೆಯುತ್ತಿದೆ ಎಂದರು.
ರಾಜ್ಯ ಸರ್ಕಾರ ಕಟ್ಟಡ ನಿರ್ಮಾಣ ತೆರಿಗೆಯಲ್ಲಿ ಪಡೆಯುವ ಕಾರ್ಮಿಕರ ಸೆಸ್ ಹಣವನ್ನು ಇಂದಿರಾ ಕ್ಯಾಂಟೀನ್‍ಗೆ ಬಳಸುತ್ತಿದೆ. ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸಬೇಕಾದ ಹಣ ದುರ್ಬಳಕೆಯಾಗುತ್ತಿದೆ. ಇದರಿಂದಾಗಿ ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸ, ವಿದ್ಯಾರ್ಥಿವೇತನ ನೀಡದೆ ವಂಚಿಸುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರದ ಆರ್ಥಿಕ ನೀತಿಯಿಂದಾಗಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಕಳೆದ 7 ತಿಂಗಳಿಂದ ಸಂಬಳ ಸಿಕ್ಕಿಲ್ಲ. ಕಾರ್ಮಿಕರ ಹಿತ ಕಾಯುವಲ್ಲಿ ಸರ್ಕಾರ ವಿಫಲವಾಗಿದೆ. ಆರು ತಿಂಗಳಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾವಿದರಿಗೆ ಹಣ ನೀಡಿಲ್ಲ ಎಂದರು.
ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ‘ಬಣ್ಣ ಕೆಲಸಗಾರರು ಶೇ 50ಕ್ಕೂ ಹೆಚ್ಚು ಮಂದಿ ಉತ್ತರ ಭಾರತದಿಂದ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ಉದ್ಯೋಗಕ್ಕೂ ಕತ್ತರಿ ಬೀಳಲಿದೆ. ಸಂಘಟಿತರಾಗದಿದ್ದರೆ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ. ಇದರ ವಿರುದ್ದ ಕಾರ್ಯಯೋಜನೆ ರೂಪಿಸಿಕೊಳ್ಳಿ ಎಂದರು.
ಅಧ್ಯಕ್ಷತೆ ವಹಿಸಿದ್ದ ನಗರಸಭೆ ಮಾಜಿ ಉಪಾಧ್ಯಕ್ಷ ವಿ.ಕೆ.ರಾಜೇಶ್, ‘ಜಿಲ್ಲೆಯಲ್ಲಿ ಅಶುದ್ಧ ನೀರಿನಿಂದ ಸಮಸ್ಯೆಗಳು ಉಂಟಾಗುತ್ತಿದೆ. ಆಯುಷ್ಯ ಕುಸಿಯಲಿದ್ದು, ಭವಿಷ್ಯ ಆತಂಕಕಾರಿಯಾಗಿದೆ. ಶುದ್ಧ ನೀರಿಗಾಗಿ ತೆಲಂಗಾಣ ಮಾದರಿ ಹೋರಾಟ ರೂಪಿಸಲು ಜಲಾಗ್ರಹ ಪ್ರತಿಭಟನೆ ರೂಪಿಸಲಾಗಿದ್ದು, ಸಹಕಾರ ನೀಡಿ ಎಂದು ಕೋರಿದರು.
ನಗರಸಭಾ ಸದಸ್ಯ ಪ್ರವೀಣ್ ಗೌಡ ಮಾತನಾಡಿ, ಸಂಘಟಿತರಾಗುವ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.
ಹಿರಿಯ ಬಣ್ಣ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬಣ್ಣ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ನಾಗೇಶ್, ಅಪ್ಪಿ ನಾರಾಯಣಸ್ವಾಮಿ, ಕಾಡುಗುರು ನಾಗಭೂಷಣ್, ವಂಶೋದಯ ಆಸ್ಪತ್ರೆಯ ನಾಗೇಶ್, ವಕೀಲರ ಸಂಘದ ಉಪಾಧ್ಯಕ್ಷ ಸುಬ್ರಮಣಿ, ಲಯನ್ಸ್ ಕ್ಲಬ್ ಅಧ್ಯಕ್ಷ ಲಕ್ಷ್ಮಿನಾರಾಯಣ, ಶಿವಶೇಖರ್, ಮುರಲಿ, ಡಾ.ಚೇತನ, ರಾಜ್ ಕುಮಾರ್, ಯಶವಂತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.