ADVERTISEMENT

ಕನ್ನಡ ಮನಸ್ಸುಗಳಲ್ಲಿ ಆಕ್ರೋಶದ ಕಿಡಿ

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ನಾಚಿಕೆಗೇಡು: ಸರ್ಕಾರದ ನಡೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2020, 13:34 IST
Last Updated 18 ನವೆಂಬರ್ 2020, 13:34 IST
ನಾಗಾನಂದ ಕೆಂಪರಾಜು
ನಾಗಾನಂದ ಕೆಂಪರಾಜು   

ಕೋಲಾರ: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವ ರಾಜ್ಯ ಸರ್ಕಾರದ ನಡೆಯು ಜಿಲ್ಲೆಯ ಕನ್ನಡಪರ ಮನಸ್ಸುಗಳಲ್ಲಿ ಆಕ್ರೋಶದ ಕಿಡಿ ಹೊತ್ತಿಸಿದೆ.

‘ಕನ್ನಡ ರಾಜ್ಯೋತ್ಸವದ ಹೊತ್ತಿನಲ್ಲೇ ಸರ್ಕಾರ ಕನ್ನಡದ ದನಿ ಅಡಗಿಸುವ ಪ್ರಯತ್ನ ನಡೆದಿದೆ. ಸರ್ಕಾರ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿದೆ’ ಎಂದು ಕನ್ನಡಪರ ಸಂಘಟನೆಗಳ ಸದಸ್ಯರು, ಹೋರಾಟಗಾರರು ಸಾಹಿತಿಗಳು ಕಿಡಿಕಾರಿದ್ದಾರೆ.

‘ಮಸ್ಕಿ ಮತ್ತು ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರ, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವ ಏಕೈಕ ಉದ್ದೇಶಕ್ಕಾಗಿ ಸರ್ಕಾರ ಮರಾಠ ಪ್ರಾಧಿಕಾರ ರಚಿಸಿದೆ. ಮರಾಠ ಮತದಾರರ ಓಲೈಕೆಗಾಗಿ ನಾಡಿನ ಹಿತ ಬಲಿ ಕೊಟ್ಟಿದೆ’ ಎಂದು ಕನ್ನಡಪರ ಸಂಘಟನೆಗಳ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಸರ್ಕಾರಕ್ಕೆ ಕನ್ನಡ ನಾಡು, ನುಡಿಗಿಂತ ಚುನಾವಣಾ ಗೆಲುವು ಮುಖ್ಯವಾಗಿದೆ. ಮರಾಠ ಪ್ರಾಧಿಕಾರ ರಚಿಸುವ ಮೂಲಕ ಸರ್ಕಾರ ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವಿನ ಗಡಿ ವಿವಾದದ ಬೆಂಕಿಗೆ ತುಪ್ಪ ಸುರಿದಿದೆ. ಸರ್ಕಾರದ ಅಪಕ್ವ ನಡೆಯಿಂದ ಕನ್ನಡದ ನೆಲದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆಯ ಪುಂಡಾಟ ವಿಜೃಂಭಿಸಲಿದೆ’ ಎಂದು ಸಾಹಿತಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

‘ಸರ್ಕಾರ ಗಡಿ ಭಾಗ ಮತ್ತು ಹೊರ ರಾಜ್ಯಗಳಲ್ಲಿರುವ ಕನ್ನಡಿಗರನ್ನು ರಕ್ಷಿಸುವುದನ್ನು ಬಿಟ್ಟು ಅನ್ಯ ಭಾಷಿಕರನ್ನು ಸಂತೃಪ್ತಿಗೊಳಿಸಲು ಹೊರಟಿದೆ. ಕನ್ನಡ ಸಂಸ್ಕೃತಿ, ಪರಂಪರೆ ಉಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗದೆ ಇತರೆ ಭಾಷೆಗಳ ಅಭಿವೃದ್ಧಿಗೆ ಮಣೆ ಹಾಕಿ ನಾಡು, ನುಡಿಯ ಕಗ್ಗೊಲೆ ಮಾಡಿದೆ. ಕೋವಿಡ್‌ ಸಂಕಷ್ಟದಿಂದ ತತ್ತರಿಸಿರುವ ನಾಡಿನ ಜನರ ಏಳಿಗೆಗೆ ಸಹಾಯಹಸ್ತ ಚಾಚದೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮರಾಠ ಪ್ರಾಧಿಕಾರಕ್ಕೆ ₹ 50 ಕೋಟಿ ನೀಡಿದೆ’ ಎಂದು ಕನ್ನಡಪರ ಹೋರಾಟಗಾರರು ಟೀಕಿಸಿದ್ದಾರೆ.

ನೋವಿನ ಸಂಗತಿ: ‘ಸರ್ಕಾರಿ ಶಾಲಾ ಕಾಲೇಜುಗಳ ಉಳಿವಿಗೆ ಅನುದಾನ ಬಿಡುಗಡೆ ಮಾಡಲು ಮೀನಮೇಷ ಎಣಿಸುವ ಸರ್ಕಾರ ಮರಾಠ ಪ್ರಾಧಿಕಾರಕ್ಕೆ ಹಣ ನೀಡಿರುವುದು ರಾಜ್ಯಕ್ಕೆ ಒದಗಿ ಬಂದ ಬಹು ದೊಡ್ಡ ಶಾಪ. ಕನ್ನಡತನ ನಿರ್ನಾಮ ಮಾಡುವ, ವಿನಾಶದತ್ತ ಕೊಂಡೊಯ್ಯುವ ಸಂಚು ಸದ್ದಿಲ್ಲದೆ ನಡೆದಿದೆ. ಕನ್ನಡ ಭಾಷೆ ನೆಲಕಚ್ಚುವ ಹೊತ್ತಿನಲ್ಲಿ ಅನ್ಯ ಭಾಷೆಗಳ ಉದ್ಧಾರಕ್ಕಾಗಿ ಹಣ ಬಿಡುಗಡೆ ಮಾಡಿರುವುದು ನೋವಿನ ಸಂಗತಿ’ ಎಂದು ಸಾಹಿತಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

‘ಸಾವು ಬಂದ ಸಮಯದಲ್ಲೂ ಕನ್ನಡ ನೆಲ, ಜಲ, ಜನರಿಗೆ ಕರುಣೆ ತೋರದ ಸರ್ಕಾರವು ಮರಣ ಶಾಸನ ಬರೆದಿದೆ. ರಾಜ್ಯದ ಗಡಿ ಭಾಗದ ಹಳ್ಳಿಗಳ ಮತ್ತು ಜನರ ಆಶೋತ್ತರ ಆಲಿಸದ ಸರ್ಕಾರ ಅನ್ಯ ಭಾಷೆಗಳತ್ತ ಗಮನ ಹರಿಸುತ್ತಿರುವುದು ನಾಚಿಕೆಗೇಡು’ ಎಂದು ಕಟುವಾಗಿ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.