ADVERTISEMENT

ಪ್ಯಾಕ್ಸ್‌ ‌ ಗಣಕೀಕರಣ: ಐತಿಹಾಸಿಕ ಕ್ರಮ

ಸಭೆಯಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಸಂತಸ

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 13:01 IST
Last Updated 17 ಜುಲೈ 2020, 13:01 IST
ಕೋಲಾರದಲ್ಲಿ ಶುಕ್ರವಾರ ನಡೆದ ಪ್ಯಾಕ್ಸ್‌ ಸಿಇಒಗಳು ಹಾಗೂ ಗಣಕ ಯಂತ್ರ ಸಹಾಯಕರ ಸಭೆಯಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಮಾತನಾಡಿದರು.
ಕೋಲಾರದಲ್ಲಿ ಶುಕ್ರವಾರ ನಡೆದ ಪ್ಯಾಕ್ಸ್‌ ಸಿಇಒಗಳು ಹಾಗೂ ಗಣಕ ಯಂತ್ರ ಸಹಾಯಕರ ಸಭೆಯಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಮಾತನಾಡಿದರು.   

ಕೋಲಾರ: ‘ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪ್ಯಾಕ್ಸ್‌) ಗಣಕೀಕರಣ ಹಾಗೂ ಮೈಕ್ರೊ ಎಟಿಎಂ ಸೇವೆಯ ಐತಿಹಾಸಿಕ ಕ್ರಮದ ಮೂಲಕ ಡಿಸಿಸಿ ಬ್ಯಾಂಕ್ ಸಹಕಾರ ಕ್ಷೇತ್ರದಲ್ಲಿ ಹೆಗ್ಗಳಿಕೆಗೆ ಪಾತ್ರವಾಗಿದೆ’ ಎಂದು ಬ್ಯಾಂಕ್‌ನ ಅಧ್ಯಕ್ಷ ಎಂ.ಗೋವಿಂದಗೌಡ ಸಂತಸ ವ್ಯಕ್ತಪಡಿಸಿದರು.

ಇಲ್ಲಿ ಶುಕ್ರವಾರ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಿಇಒಗಳು ಹಾಗೂ ಗಣಕ ಯಂತ್ರ ಸಹಾಯಕರ ಸಭೆಯಲ್ಲಿ ಮಾತನಾಡಿ, ‘ಡಿಸಿಸಿ ಬ್ಯಾಂಕ್ ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಳಿಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣ ಮತ್ತು ಮೈಕ್ರೊ ಎಟಿಎಂ ಅಳವಡಿಕೆ ಮಾಡಿದ ಮೊದಲ ಸಹಕಾರಿ ಬ್ಯಾಂಕ್ ಆಗಿದೆ’ ಎಂದು ತಿಳಿಸಿದರು.

‘ಜಿಲ್ಲೆಯ 191 ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಜುಲೈ 25ರೊಳಗೆ ಆನ್‌ಲೈನ್‌ ವಹಿವಾಟು ಆರಂಭಿಸಲು ಗಣಕೀಕರಣದೊಂದಿಗೆ ಸಜ್ಜಾಗಬೇಕು. ಈ ಕಾರ್ಯಕ್ಕೆ ವಿ-ಸಾಫ್ಟ್ ಕಂಪನಿ ತಾಂತ್ರಿಕ ನೆರವು ನೀಡುತ್ತಿದ್ದು, ಆಗಸ್ಟ್ ವೇಳೆಗೆ ಸೊಸೈಟಿಗಳಲ್ಲಿ ಆನ್‌ಲೈನ್‌ ಮೂಲಕವೇ ವಹಿವಾಟು, ಪಾಸ್‌ಬುಕ್‌ ಮುದ್ರಣ ನಡೆಯಬೇಕು’ ಎಂದು ಸೂಚಿಸಿದರು.

ADVERTISEMENT

‘ಆ.5ರೊಳಗೆ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘಗಳ (ಎಸ್‍ಎಫ್‌ಸಿಎಸ್‌) ಲೆಕ್ಕ ಪರಿಶೋಧನೆ ಪೂರ್ಣಗೊಳಿಸಬೇಕು. ಆನ್‌ಲೈನ್‌ ವ್ಯವಸ್ಥೆ ಜಾರಿಯಾದರೆ ಆಯಾ ದಿನದ ವಹಿವಾಟು ಬ್ಯಾಂಕ್‌ನ ಕೇಂದ್ರ ಕಚೇರಿಯಲ್ಲಿ ಅದೇ ದಿನ ಲಭ್ಯವಾಗಲಿದೆ’ ಎಂದು ವಿವರಿಸಿದರು.

ನಬಾರ್ಡ್‌ ನೆರವು: ‘ನಬಾರ್ಡ್‌ನ ಶೇ 90 ಸಹಾಯಧನದೊಂದಿಗೆ ಜಿಲ್ಲೆಯ ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ 200 ಮೈಕ್ರೊ ಎಟಿಎಂ ನೀಡಲಾಗುತ್ತಿದೆ. ಈಗಾಗಲೇ ಎನ್‌ಪಿಸಿಟಿಐ (ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ) ಸಂಸ್ಥೆಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಆನ್‌ಲೈನ್‌ ವ್ಯವಸ್ಥೆ ಮತ್ತು ಮೈಕ್ರೊ ಎಟಿಎಂನಿಂದ ಸೊಸೈಟಿಗಳಿಗೆ ಸಾಲ, ಉಳಿತಾಯದ ಹಣ ಪಾವತಿಸುವ ಮಹಿಳೆಯರ ಹಣಕ್ಕೆ ಭದ್ರತೆ ಮತ್ತು ಪಾರದರ್ಶಕತೆಗೆ ಅವಕಾಶವಾಗಲಿದೆ. ಪಾವತಿಸಿದ ಹಣಕ್ಕೆ ರಸೀದಿ ಹಾಗೂ ಪಾಸ್‌ಬುಕ್‌ನಲ್ಲಿ ವಿವದ ನಮೂದು ಆಗುವುದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ’ ಎಂದು ಅಭಿಪ್ರಾಯಪಟ್ಟರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ವೆಂಕಟರೆಡ್ಡಿ, ವ್ಯವಸ್ಥಾಪಕ ನಿರ್ದೇಶಕ ರವಿ, ಸಹಾಯಕ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್, ವಿ-ಸಾಫ್ಟ್ ಕಂಪನಿ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.