ADVERTISEMENT

ಜಿಲ್ಲೆಯಲ್ಲಿ ಭಾಗಶಃ ಲಾಕ್‌ಡೌನ್‌ ಜಾರಿ

ವಾಣಿಜ್ಯ ಚಟುವಟಿಕೆ ಸ್ಥಗಿತ: ದಿನಬಳಕೆ ವಸ್ತುಗಳ ವಹಿವಾಟಿಗೆ ವಿನಾಯಿತಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 13:18 IST
Last Updated 22 ಏಪ್ರಿಲ್ 2021, 13:18 IST
ಕೋವಿಡ್‌ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಭಾಗಶಃ ಲಾಕ್‌ಡೌನ್‌ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಗುರುವಾರ ಅಂಗಡಿಗಳು ಬಂದ್ ಆಗಿದ್ದವು.
ಕೋವಿಡ್‌ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಭಾಗಶಃ ಲಾಕ್‌ಡೌನ್‌ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಗುರುವಾರ ಅಂಗಡಿಗಳು ಬಂದ್ ಆಗಿದ್ದವು.   

ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾಡಳಿತವು ಗುರುವಾರದಿಂದ ಅನ್ವಯವಾಗುವಂತೆ ಭಾಗಶಃ ಲಾಕ್‌ಡೌನ್‌ ಜಾರಿ ಮಾಡಿದ್ದು, ವಾಣಿಜ್ಯ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿವೆ.

ರಾಜ್ಯ ಸರ್ಕಾರದ ಪರಿಷ್ಕೃತ ಕೋವಿಡ್‌ ಮಾರ್ಗಸೂಚಿ ಅನ್ವಯ ಜಿಲ್ಲಾಡಳಿತವು ದಿನಬಳಕೆ ವಸ್ತುಗಳ ಮಳಿಗೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಬಗೆಯ ಅಂಗಡಿಗಳನ್ನು ಮುಚ್ಚಿಸಿತು. ವ್ಯಾಪಾರಿಗಳು ಪರಿಷ್ಕೃತ ಮಾರ್ಗಸೂಚಿ ತಿಳಿಯದೆ ಬೆಳಿಗ್ಗೆ ಅಂಗಡಿಗಳನ್ನು ತೆರೆದಿದ್ದರು. ಬಳಿಕ ರಸ್ತೆಗಿಳಿದ ಪೊಲೀಸರು ಅಂಗಡಿಗಳನ್ನು ಬಂದ್ ಮಾಡಿಸಿದರು.

ಆಹಾರ ಪದಾರ್ಥ, ತರಕಾರಿ, ಹಾಲು, ಹಣ್ಣು, ಹಾರ್ಡ್‌ವೇರ್‌, ಸಿಮೆಂಟ್‌, ಔಷಧ ಮಾರಾಟ ಮಳಿಗೆಗಳು, ಕ್ಷೌರದಂಗಡಿ, ಬ್ಯೂಟಿ ಪಾರ್ಲರ್‌ಗಳಿಗೆ ವಿನಾಯಿತಿ ನೀಡಲಾಯಿತು. ಬ್ಯಾಂಕ್‌ಗಳಲ್ಲಿ ಮಧ್ಯಾಹ್ನದವರೆಗೆ ವಹಿವಾಟು ನಡೆಯಿತು. ಚಿತ್ರಮಂದಿರಗಳು, ಜಿಮ್‌ ಸೆಂಟರ್‌, ಉದ್ಯಾನಗಳನ್ನು ಸಂಪೂರ್ಣ ಬಂದ್‌ ಮಾಡಿಸಲಾಯಿತು.

ADVERTISEMENT

ಕೆಎಸ್‌ಆರ್‌ಟಿಸಿ ಬಸ್‌ಗಳು, ಆಟೊಗಳು ಹಾಗೂ ಸರಕು ಸಾಗಣೆ ವಾಹನಗಳು ಪ್ರತಿನಿತ್ಯದಂತೆ ರಸ್ತೆಗಿಳಿದವು. ಆದರೆ, ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ಸದಾ ಜನಜಂಗುಳಿ, ವಾಹನ ದಟ್ಟಣೆಯಿಂದ ಗಿಜಿಗುಡುತ್ತಿದ್ದ ಮಾರುಕಟ್ಟೆಗಳು, ವಾಣಿಜ್ಯ ಪ್ರದೇಶಗಳು ಹಾಗೂ ರಸ್ತೆಗಳು ಭಣಗುಡುತ್ತಿದ್ದವು.

ಬಸ್‌ ನಿಲ್ದಾಣಗಳು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದ್ದವು. ಬಾರ್‌, ರೆಸ್ಟೋರೆಂಟ್‌, ಬೇಕರಿ, ತಂಪು ಪಾನೀಯ ಅಂಗಡಿಗಳು, ಐಸ್‌ಕ್ರೀಮ್‌, ಚಾಟ್ಸ್‌ ಮಾರಾಟ ಮಳಿಗೆಗಳಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶ ಕಲ್ಪಿಸಲಾಯಿತು. ಪೆಟ್ರೋಲ್‌ ಬಂಕ್‌ಗಳು ತೆರೆದಿದ್ದರೂ ಗ್ರಾಹಕರ ಸಂಖ್ಯೆ ತೀರಾ ಕಡಿಮೆಯಿತ್ತು.

ಕೋಳಿ ಹಾಗೂ ಕುರಿ ಮಾಂಸ, ಮೀನಿನ ಮಾರಾಟಕ್ಕೆ ಸರ್ಕಾರ ವಿನಾಯಿತಿ ನೀಡಿದ್ದರಿಂದ ಮಾಲೀಕರು ಅಂಗಡಿ ತೆರೆದು ವಹಿವಾಟು ನಡೆಸಿದರು. ಮಾಂಸ ಮತ್ತು ಮೀನಿನ ಅಂಗಡಿಗಳು ಗ್ರಾಹಕರಿಂದ ತುಂಬಿ ಹೋಗಿದ್ದವು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಪ್ರತಿನಿತ್ಯದಂತೆ ಸೇವೆ ಒದಗಿಸಿದವು.

ಹಾಲಿನ ಬೂತ್‌ಗಳು ಹಾಗೂ ಔಷಧ ಮಾರಾಟ ಮಳಿಗೆಗಳು ಎಂದಿನಂತೆ ತೆರೆದಿದ್ದವು. ವಹಿವಾಟು ಕುಸಿಯುವ ಆತಂಕದಲ್ಲಿ ಹಾಲಿನ ಬೂತ್‌ಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಹಾಲು ಮತ್ತು ಮೊಸರು ತರಿಸಲಾಗಿತ್ತು. ಆದರೆ, ಹಾಲು ಮತ್ತು ಹಾಲಿನ ಉತ್ಪನ್ನಗಳು ಕ್ಷಣ ಮಾತ್ರದಲ್ಲಿ ಮಾರಾಟವಾದವು.

ಲಾಠಿ ರುಚಿ: ದೇವಸ್ಥಾನ, ಚರ್ಚ್‌, ಮಸೀದಿ ಸೇರಿದಂತೆ ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಜನರ ಪ್ರವೇಶ ನಿರ್ಬಂಧಿಸಲಾಯಿತು. ಎಲ್ಲೆಡೆ ಪೊಲೀಸ್ ಗಸ್ತು ಹೆಚ್ಚಿಸಲಾಗಿತ್ತು. ಆಯಕಟ್ಟಿನ ಸ್ಥಳಗಳು, ವಾಣಿಜ್ಯ ಪ್ರದೇಶಗಳು, ಧಾರ್ಮಿಕ ಕೇಂದ್ರಗಳ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಹಿರಿಯ ಪೊಲೀಸ್‌ ಅಧಿಕಾರಿಗಳು ನಿಯಮಿತವಾಗಿ ಗಸ್ತು ನಡೆಸಿದರು.

ಜಿಲ್ಲಾ ಕೇಂದ್ರದ ಅಮ್ಮವಾರಿಪೇಟೆಯಲ್ಲಿ ಅಂಗಡಿಗಳನ್ನು ಮುಚ್ಚಿಸಲು ಹೋದ ಪೊಲೀಸರೊಂದಿಗೆ ವರ್ತಕರು ವಾಗ್ವಾದ ನಡೆಸಿದರು. ಅಂಗಡಿ ಬಂದ್‌ ಮಾಡಲು ನಿರಾಕರಿಸಿದ ವರ್ತಕರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ವರ್ತಕರೊಬ್ಬರು ಸಂಚಾರ ಠಾಣೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರು. ಆ ವರ್ತಕನಿಗೆ ಪೊಲೀಸರು ಲಾಠಿ ರುಚಿ ತೋರಿಸಿ ಬಂಧಿಸಿದರು.

ಊಟಕ್ಕೆ ಅಲೆದಾಟ: ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳ ಪಾರ್ಸಲ್‌ಗೆ ಸರ್ಕಾರ ಅವಕಾಶ ನೀಡಿದ್ದರೂ ಮಾಲೀಕರು ಹೋಟೆಲ್‌ ತೆರೆಯುವ ಮನಸ್ಸು ಮಾಡಲಿಲ್ಲ. ಸಾಕಷ್ಟು ಹೋಟೆಲ್‌ಗಳು ಬಂದ್‌ ಆಗಿದ್ದರಿಂದ ಜನ ಜೀವನಕ್ಕೆ ತೊಂದರೆಯಾಯಿತು. ಹೋಟೆಲ್‌ಗಳ ಮೇಲೆ ಅವಲಂಬಿತರಾದ ಕೂಲಿ ಕಾರ್ಮಿಕರು ಹಾಗೂ ಗ್ರಾಹಕರು ಊಟ, ತಿಂಡಿಗಾಗಿ ಅಲೆದಾಡುತ್ತಿದ್ದ ದೃಶ್ಯ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.