ADVERTISEMENT

ಕೋಲಾರ ಜಿಲ್ಲೆಯಲ್ಲಿ ಅವರೆಕಾಯಿ ಸುಗ್ಗಿ, ಸೊಗಡು! ಮಾರುಕಟ್ಟೆ ತುಂಬೆಲ್ಲಾ ಘಮಲು

ಚುಮುಚುಮು ಚಳಿ ನಡುವೆ ಮಾರುಕಟ್ಟೆ ತುಂಬೆಲ್ಲಾ ಅವರೆ ಘಮಲು

ಕೆ.ಓಂಕಾರ ಮೂರ್ತಿ
Published 16 ಡಿಸೆಂಬರ್ 2025, 4:50 IST
Last Updated 16 ಡಿಸೆಂಬರ್ 2025, 4:50 IST
ಕೋಲಾರ ತಾಲ್ಲೂಕಿನ ತೊಟ್ಲಿ ಬಳಿ ಜಮೀನಿನಲ್ಲಿ ರೈತರೊಬ್ಬರು ಅವರೆಕಾಯಿ ಬೆಳೆ ವೀಕ್ಷಿಸಿದ ಸಂದರ್ಭ
ಕೋಲಾರ ತಾಲ್ಲೂಕಿನ ತೊಟ್ಲಿ ಬಳಿ ಜಮೀನಿನಲ್ಲಿ ರೈತರೊಬ್ಬರು ಅವರೆಕಾಯಿ ಬೆಳೆ ವೀಕ್ಷಿಸಿದ ಸಂದರ್ಭ   

ಕೋಲಾರ: ಜಿಲ್ಲೆಯಾದ್ಯಂತ ಈಗ ಅವರೆಕಾಯಿ ಸುಗ್ಗಿ, ಸೊಗಡು. ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಇನ್ನು ಎರಡು ತಿಂಗಳ ಎಲ್ಲೆಲ್ಲೂ ಅವರೆಕಾಯಿಯದ್ದೇ ಪರಿಮಳ!

ನಾಟಿ ಅವರೆಗೆ ಬೇಡಿಕೆ ಹೆಚ್ಚಿದ್ದು, ಸದ್ಯ ಕೆ.ಜಿಗೆ ₹ 100 ವರೆಗೆ ದರವಿದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದ್ದಂತೆ, ‌ಸಂಕ್ರಾಂತಿ ಹಬ್ಬ ಹತ್ತಿರ ಬರುತ್ತಿದ್ದಂತೆ ದರ ಕಡಿಮೆ ಆಗುತ್ತಾ ಹೋಗಲಿದೆ. ಕೆಲವು ಕಡೆಗಳಲ್ಲಿ ಸುಲಿದ ಅವರೆ ಕಾಳುಗಳ ಮಾರಾಟವೂ ನಡೆಯುತ್ತಿದೆ. ಹಿತುಕಿದ ಅವರೆ ಬೆಳೆ ಕೆ.ಜಿಗೆ ₹ 250ರಿಂದ 300 ಇರುತ್ತದೆ. ರೈತರು ಕಾಳುಗಳನ್ನು ಒಣಗಿಸಿ ಕೂಡ ಇಡುತ್ತಾರೆ.

ಚುಮು ಚುಮು ಚಳಿಯ ನಡುವೆ ಮಾರುಕಟ್ಟೆಯ ತುಂಬೆಲ್ಲ ಘಮಲು ಹರಡಿಕೊಂಡಿದೆ. ಚಳಿಗಾಲದ ವಿಶೇಷ ಖಾದ್ಯವಾದ ಅವರೆಕಾಯಿ ಖರೀದಿಸಲು ಗ್ರಾಹಕರು ಉತ್ಸಾಹ ತೋರುತ್ತಿದ್ದಾರೆ. ತರಕಾರಿ ಮಾರುಕಟ್ಟೆ ಮಾತ್ರವಲ್ಲದೆ; ತಳ್ಳುಗಾಡಿ ಹಾಗೂ ರಸ್ತೆ ಬದಿಗಳಲ್ಲೂ ಅವರೆಕಾಯಿ ಮಾರಾಟ ಸಾಗಿದೆ.

ADVERTISEMENT

ಶ್ರೀನಿವಾಸಪುರ ಹಾಗೂ ಕೋಲಾರ ತಾಲ್ಲೂಕಿನಲ್ಲಿ ರಾಗಿ ಹಾಗೂ ಮಾವಿನ ತೋಪಿನ ನಡುವೆ ಹೆಚ್ಚಿನ ಪ್ರಮಾಣದಲ್ಲಿ ಮಿಶ್ರ ಬೆಳೆಯಾಗಿ ಅವರೆ ಬೆಳೆಯಲಾಗುತ್ತದೆ. ಇನ್ನುಳಿದಂತೆ ಪ್ರತ್ಯೇಕವಾಗಿ ವಾಣಿಜ್ಯ ಬೆಳೆಯಾಗಿಯೂ ರೈತರು ಬೆಳೆಯುತ್ತಾರೆ. ಕೆಲವೆಡೆ ಇತರ ದಿನಗಳಲ್ಲೂ ಅವರೆಕಾಯಿ ಲಭ್ಯವಿದೆ. ಆದರೆ, ಅದು ಹೈಬ್ರೀಡ್ ಅವರೆ. ರುಚಿಕರವಾಗಿರುವುದಿಲ್ಲವೆಂದು ಖರೀದಿಸುವವರ ಸಂಖ್ಯೆ ಕಡಿಮೆ.

ಆದರೆ, ಡಿಸೆಂಬರ್‌ನಿಂದ ಜನವರಿ ಅವಧಿಯಲ್ಲಿ ಬೆಳೆಯುವ ಅವರೆಕಾಯಿಗೆ ಹೆಚ್ಚು ಬೇಡಿಕೆ ಹೆಚ್ಚಿರುತ್ತದೆ. ಈ ಋತುವಿನಲ್ಲಿ ಬೆಳೆದ ಅವರೆಗೆ ಸೊಗಡಿನ ಜೊತೆ ರುಚಿಯೂ ಅಧಿಕ.

‘15 ದಿನಗಳಿಂದ ಅವರೆಕಾಯಿ ಮಾರುಕಟ್ಟೆಗೆ ಬರುತ್ತಿದೆ. ಬಲಿತಿರುವುದನ್ನು ಮಾತ್ರ ಕಟಾವು ಮಾಡುತ್ತಿದ್ದಾರೆ. ಇನ್ನೂ ಕಾಯಿ ಅಷ್ಟೊಂದು ಬೀಜ ಹಿಡಿದಿಲ್ಲ. ‌ಇನ್ನು ಎಂಟತ್ತು ದಿನಗಳಲ್ಲಿ ಉತ್ತಮ ಗುಣಮಟ್ಟದ ಕಾಯಿಗಳು ಮಾರುಕಟ್ಟೆಗೆ ಬರಲಿವೆ’ ಎಂದು ತಾಲ್ಲೂಕಿನ ತೊಟ್ಲಿ ಗ್ರಾಮದ ರೈತ ಟಿ.ವಿ.ರಮೇಶ್‌ ಹೇಳಿದರು.

ಒಂದು ಎಕರೆ ಅವರೆ ಬೆಳೆಯಲು ಉಳುಮೆ, ಎರಡು ಬಾರಿ ಔಷಧಿ ಸಿಂಪಡಣೆ ಸೇರಿ ₹ 15 ಸಾವಿರವರೆಗೆ ಖರ್ಚು ಬರುತ್ತದೆ. ಹಸಿ ಕಾಯಿ ದರ ಇದೇ ರೀತಿ ಇದ್ದರೆ ಎಕರೆ ₹ 60 ಸಾವಿರವರೆಗೆ ಆದಾಯ ಸಿಗುತ್ತದೆ ಎನ್ನುತ್ತಾರೆ.

ಸೊನೆಯಾಡುವ, ಜಿಡ್ಡಿನ ಹೊಂದಿರುವ ಅವರೆಕಾಯಿಗೆ ಹೆಚ್ಚು ಬೇಡಿಕೆಯಿದ್ದು, ಕೆಲವರು ರೈತರ ಹೊಲ, ತೋಟಕ್ಕೆ ಹೋಗಿ ಖರೀದಿ ಮಾಡುತ್ತಾರೆ. ತೇರಹಳ್ಳಿ ಬೆಟ್ಟದಲ್ಲಿ ಬೆಳೆಯುವ ಅವರೆಕಾಯಿ ಮತ್ತಷ್ಟು ರುಚಿಕರ. ಜನವರಿ ಅಂತ್ಯದವರೆಗೆ ಅವರೆಕಾಯಿ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ ಎನ್ನುತ್ತಾರೆ ವ್ಯಾಪಾರಿ ನಾರಾಯಣಸ್ವಾಮಿ.

ಶ್ರೀನಿವಾಸಪುರದ ಎಂಪಿಎಂಸಿ ಮುಂದೆ ದೊಡ್ಡ ಮಟ್ಟದ ವ್ಯಾಪಾರ ನಡೆಯಲಿದ್ದು, 50 ಕೆ.ಜಿ ಮೂಟೆ ಹರಾಜು ಕೂಗುತ್ತಾರೆ. ಅಲ್ಲಿಂದ ಬೆಂಗಳೂರಿಗೆ ಸಾಗಿಸಿ ಮಾರಾಟ ಮಾಡುತ್ತಾರೆ. ಕೆಲವರು ಆಂಧ್ರ ಹಾಗೂ ತಮಿಳುನಾಡಿಗೆ ಮಾರಾಟ ಮಾಡುತ್ತಾರೆ.

ಕೋಲಾರ ತಾಲ್ಲೂಕಿನ ವಿವಿಧೆಡೆ ಜಮೀನುಗಳಲ್ಲಿ ಅವರೆಕಾಯಿ ಬೆಳೆ ಅಬ್ಬರ
ಕೋಲಾರದ ಹಳೆ ಮಾರುಕಟ್ಟೆಯಲ್ಲಿ ಅವರೆಕಾಯಿ ಮಾರಾಟ

ವಾರಕ್ಕೆ ನಾಲ್ಕು ದಿನ ಅವರೆಯದ್ದೇ ಊಟ!

ಕೋಲಾರ ಜಿಲ್ಲೆಯಲ್ಲಿ ಅವರೆ ಕಾಯಿ ಋತುವಿನಲ್ಲಿ ಸಾಮಾನ್ಯವಾಗಿ ವಾರಕ್ಕೆ ನಾಲ್ಕು ದಿನ ಅವರೆಕಾಯಿ ಊಟವಿಲ್ಲದ ಮನೆಗಳು ಇರಲ್ಲ! ತರಹೇವಾರಿ ಅವರೆ ಕಾಯಿ ಖಾದ್ಯಗಳನ್ನು ತಯಾರಿಸಿ ಸವಿಯುತ್ತಾರೆ. ಜಿಲ್ಲೆಯಲ್ಲಿ ಹಿತುಕಿದ ಅವರೆಕಾಳು ಸಾಂಬಾರು ಹಾಗೂ ಮುದ್ದೆ ಊಟ ಪ್ರಸಿದ್ಧಿ. ಇದಲ್ಲದೇ ಪೊಂಗಲ್‌ ಉಪ್ಪಿಟ್ಟು ದೋಸೆ ಇಡ್ಲಿ ವಡೆ ಚಿತ್ರಾನ್ನಕ್ಕೆ ಹೆಚ್ಚು ಬಳಸುತ್ತಾರೆ. ರೊಟ್ಟಿ ಚಪಾತಿ ಜೊತೆಗೆ ಪಲ್ಯವಾಗಿಯೂ ಅವರೆಕಾಳು ಸ್ವಾದಿಷ್ಟ ರುಚಿ ನೀಡುತ್ತದೆ. ಮಾಂಸ ಆಹಾರಕ್ಕೂ ಅವರೆಕಾಯಿ ಬಳಕೆ ಮಾಡುತ್ತಾರೆ. ಸಂಜೆಯ ಕುರುಕಲು ತಿಂಡಿಯಾಗಿಯೂ ಬಳಕೆಯಾಗುತ್ತದೆ. ಹೋಟೆಲ್‌ಗಳಲ್ಲೂ ಇನ್ನು ಸ್ಪಲ್ಪ ದಿನ ಅವರೆಕಾಯಿ ಖಾದ್ಯಗಳಿಗೆ ಹೆಚ್ಚು ಒತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.