ADVERTISEMENT

ಕೋಲಾರ | ಮಾಸ್ಕ್‌ ಧರಿಸದೆ ಓಡಾಟ: ದಂಡ

​ಪ್ರಜಾವಾಣಿ ವಾರ್ತೆ
Published 2 ಮೇ 2020, 14:23 IST
Last Updated 2 ಮೇ 2020, 14:23 IST
ಕೋಲಾರದಲ್ಲಿ ಶನಿವಾರ ಮಾಸ್ಕ್‌ ಧರಿಸದೆ ಓಡಾಡುತ್ತಿದ್ದ ಬೈಕ್‌ ಸವಾರರಿಗೆ ನಗರಸಭೆ ಅಧಿಕಾರಿಗಳು ದಂಡ ವಿಧಿಸಿದರು
ಕೋಲಾರದಲ್ಲಿ ಶನಿವಾರ ಮಾಸ್ಕ್‌ ಧರಿಸದೆ ಓಡಾಡುತ್ತಿದ್ದ ಬೈಕ್‌ ಸವಾರರಿಗೆ ನಗರಸಭೆ ಅಧಿಕಾರಿಗಳು ದಂಡ ವಿಧಿಸಿದರು   

ಕೋಲಾರ: ನಗರದ ವಿವಿಧೆಡೆ ಶನಿವಾರ ಕಾರ್ಯಾಚರಣೆ ನಡೆಸಿದ ನಗರಸಭೆ ಅಧಿಕಾರಿಗಳು ಮುಖಗವಸು (ಮಾಸ್ಕ್‌) ಧರಿಸದೆ ಓಡಾಡುತ್ತಿದ್ದ ಜನರಿಗೆ ಶಿಸ್ತುಕ್ರಮದ ಬಿಸಿ ಮುಟ್ಟಿಸಿದರು.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಗೆ ಬರುವಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ ಜಿಲ್ಲಾಡಳಿತ ಆದೇಶಿಸಿದೆ. ಆದರೆ, ಸಾಕಷ್ಟು ಮಂದಿ ಅನಗತ್ಯವಾಗಿ ಮನೆಯಿಂದ ಹೊರ ಬಂದು ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಮಾಸ್ಕ್‌ ಧರಿಸದೆ ರಸ್ತೆಗಳಲ್ಲಿ ಅಡ್ಡಾದಿಡ್ಡಿ ಓಡಾಡುತ್ತಿದ್ದರು.

ಹೀಗಾಗಿ ನಗರಸಭೆ ಆಯುಕ್ತ ಆರ್‌.ಶ್ರೀಕಾಂತ್‌ ಅವರ ನೇತೃತ್ವದಲ್ಲಿ ಕಾರ್ಯಾಚರಣೆಗಿಳಿದ ಅಧಿಕಾರಿಗಳು ಮೆಕ್ಕೆ ವೃತ್ತ, ಎಂ.ಜಿ ರಸ್ತೆ, ಎಂ.ಬಿ ರಸ್ತೆ, ಅಮ್ಮವಾರಿಪೇಟೆ ಹಾಗೂ ಬಂಗಾರಪೇಟೆ ರಸ್ತೆ ನಗರದ ಪ್ರಮುಖ ಸ್ಥಳಗಳಲ್ಲಿ ವಾಹನ ಸವಾರರನ್ನು ತಡೆದು ಮಾಸ್ಕ್‌ ಧರಿಸಿರುವ ಬಗ್ಗೆ ತಪಾಸಣೆ ಮಾಡಿದರು.

ADVERTISEMENT

ಬೈಕ್‌ ಹಾಗೂ ಕಾರುಗಳಲ್ಲಿ ಹೋಗುತ್ತಿದ್ದ ಸಾಕಷ್ಟು ಮಂದಿ ಮಾಸ್ಕ್‌ ಧರಿಸಿರಲಿಲ್ಲ. ಅವರಿಗೆ ಅಧಿಕಾರಿಗಳು ಸ್ಥಳದಲ್ಲೇ ತಲಾ ₹100 ದಂಡ ವಿಧಿಸಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿ ಕಳುಹಿಸಿದರು. ನಗರದಲ್ಲಿ ಶನಿವಾರ ಒಂದೇ ದಿನ 82 ಮಂದಿಯಿಂದ ₹8,200 ದಂಡ ಸಂಗ್ರಹಿಸಲಾಯಿತು.

‘ಕೊರೊನಾ ಸೋಂಕು ತಡೆಗೆ ಸರ್ಕಾರ ಜಾರಿಗೊಳಿಸಿರುವ ಸುರಕ್ಷತಾ ಮಾರ್ಗಸೂಚಿಯನ್ನು ನಗರದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ಧರಿಸಿದ್ದೇವೆ. ಮಾಸ್ಕ್‌ ಧರಿಸಿದವರ ವಿರುದ್ಧದ ಕಾರ್ಯಾಚರಣೆ ಮುಂದುವರಿಸುತ್ತೇವೆ’ ಎಂದು ನಗರಸಭೆ ಆಯುಕ್ತ ಶ್ರೀಕಾಂತ್‌ ಸುದ್ದಿಗಾರರಿಗೆ ತಿಳಿಸಿದರು.

‘ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ ₹500 ಮತ್ತು ಮಾರುಕಟ್ಟೆಗಳಲ್ಲಿ ಅಥವಾ ಅಂಗಡಿಗಳ ಬಳಿ ಅಂತರ ಕಾಯ್ದುಕೊಳ್ಳದಿದ್ದರೆ ₹500 ದಂಡ ವಿಧಿಸುತ್ತೇವೆ. ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಸುರಕ್ಷತಾ ಮಾರ್ಗಸೂಚಿ ರೂಪಿಸಿದ್ದು, ಇದನ್ನು ಪ್ರತಿಯೊಬ್ಬರು ಪಾಲಿಸಬೇಕು’ ಎಂದು ಹೇಳಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ, ನಗರಸಭೆ ಕಂದಾಯ ಮತ್ತು ಆರೋಗ್ಯ ವಿಭಾಗದ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.