ADVERTISEMENT

ಕ್ಷೇತ್ರದ ಜನರ ಋಣ ತೀರಿಸುತ್ತೇನೆ: ಬಿಜೆಪಿ ವಿಜೇತ ಅಭ್ಯರ್ಥಿ ಮುನಿಸ್ವಾಮಿ

​ಪ್ರಜಾವಾಣಿ ವಾರ್ತೆ
Published 23 ಮೇ 2019, 16:21 IST
Last Updated 23 ಮೇ 2019, 16:21 IST
ಎಸ್‌.ಮುನಿಸ್ವಾಮಿ
ಎಸ್‌.ಮುನಿಸ್ವಾಮಿ   

ಕೋಲಾರ: ‘ನನ್ನನ್ನು ಮನೆ ಮಗನಂತೆ ಗೆಲ್ಲಿಸಿದ ಕ್ಷೇತ್ರದ ಮತದಾರರ ಋಣ ತೀರಿಸಲು ಶಕ್ತಿ ಮೀರಿ ದುಡಿಯುತ್ತೇನೆ’ ಎಂದು ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಹೇಳಿದರು.

ಲೋಕಸಭಾ ಚುನಾವಣೆ ಫಲಿತಾಂಶ ಘೋಷಣೆ ಬಳಿಕ ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜಿಲ್ಲೆಯ ಅಭಿವೃದ್ದಿಗಾಗಿ ದುಡಿಯುತ್ತೇನೆ. ಅಭಿವೃದ್ಧಿ ಹಾದಿಯ ಪ್ರತಿ ಹೆಜ್ಜೆಯಲ್ಲೂ ಚುನಾವಣೆಯಲ್ಲಿ ನನಗೆ ಬೆಂಬಲ ನೀಡಿದವರ ಸಹಕಾರವನ್ನು ಪಕ್ಷಾತೀತವಾಗಿ ಪಡೆಯುತ್ತೇನೆ’ ಎಂದರು.

‘ಕೋಲಾರದ ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸಗೌಡ, ಮಾಜಿ ಶಾಸಕರಾದ ಸುಧಾಕರ್‌ರೆಡ್ಡಿ, ಕೊತ್ತೂರು ಮಂಜುನಾಥ್ ಹಾಗೂ ಮಂಜುನಾಥಗೌಡ ಅವರು ಸೇರಿದಂತೆ ವಿಪಕ್ಷಗಳ ಹಲವು ಮುಖಂಡರು ಚುನಾವಣೆಯಲ್ಲಿ ನನಗೆ ನೆರವಾಗಿದ್ದಾರೆ. ಕೆಲವರ ಹೆಸರು ನಾನು ಹೇಳುವಂತಿಲ್ಲ. ಆದರೆ, ಅವರ ಆಶೀರ್ವಾದ ಮರೆಯುವುದಿಲ್ಲ’ ಎಂದು ಸ್ಮರಿಸಿದರು.

ADVERTISEMENT

‘ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಪಕ್ಷದ ರಾಜ್ಯ ಮಟ್ಟದ ಹಾಗೂ ಜಿಲ್ಲೆಯ ಮುಖಂಡರ ಸಹಕಾರ ಪಡೆದು ಕೇಂದ್ರದಿಂದ ಜಿಲ್ಲೆಯ ಅಭಿವೃದ್ಧಿಗೆ ಹೊಸ ಹೊಸ ಯೋಜನೆ ತರುತ್ತೇನೆ. ಬಡವರಿಗೆ ಮಾತ್ರ ಬಿಜೆಪಿಯಲ್ಲಿ ಟಿಕೆಟ್ ಸಿಗಲು ಸಾಧ್ಯ. ಪಕ್ಷ ನನ್ನ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುತ್ತೇನೆ’ ಎಂದು ಹೇಳಿದರು.

‘ಕಾಂಗ್ರೆಸ್‌ನಿಂದ 7 ಬಾರಿ ಸಂಸದರಾಗಿದ್ದ ಕೆ.ಎಚ್.ಮುನಿಯಪ್ಪ ಒಳ್ಳೆಯ ಕೆಲಸ ಮಾಡಿದ್ದರೆ ಕ್ಷೇತ್ರದ ಜನ ಅವರನ್ನು ಬೆಂಬಲಿಸುತ್ತಿದ್ದರು. ಆದರೆ, ಅವರು ಕಳೆದ 28 ವರ್ಷದಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಏನೂ ಮಾಡಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ನಾನು ಕೋಲಾರ ಬಿಟ್ಟು ಓಡಿ ಹೋಗಲ್ಲ. ಈ ಜಿಲ್ಲೆಯ ಮಣ್ಣಿನ ಮಗನಾದ ನಾನು ಇಲ್ಲೇ ಇದ್ದು ಮತದಾರರ ಋಣ ತೀರಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಶಾಸಕರಿಲ್ಲ. ಆದರೂ ಜನ ನನ್ನನ್ನು ಬೆಂಬಲಿಸಿದ್ದಾರೆ. ಪಕ್ಷಾತೀತವಾಗಿ ಸಿಕ್ಕಿರುವ ಈ ಬೆಂಬಲಕ್ಕೆ ಚಿರಋಣಿ. ಹಿಂದಿನ 7 ಚುನಾವಣೆಗಳಲ್ಲಿ ಮುನಿಯಪ್ಪ ಅಲ್ಪ ಮತಗಳ ಅಂತರದಿಂದ ಗೆದ್ದಿದ್ದರು. ಈ ಬಾರಿ ಜನ ಬಿಜೆಪಿಗೆ ಅಭೂತ ಪೂರ್ವ ಬೆಂಬಲ ನೀಡಿದ್ದಾರೆ ಎಂಬುದಕ್ಕೆ ನನ್ನ ಗೆಲುವೇ ಸಾಕ್ಷಿ. ಬಿಜೆಪಿ ಅಧಿಕಾರಕ್ಕೆ ಬಂದಿರುವುದರಿಂದ ಜನ ಆತಂಕಪಡುವ ಅಗತ್ಯವಿಲ್ಲ. ನರೇಂದ್ರ ಮೋದಿಯವರದು ಒಂದೇ ಅಜೆಂಡಾ, ಅದು ದೇಶದ ಅಭಿವೃದ್ಧಿ ಮಾತ್ರ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.