ADVERTISEMENT

ಕೋಲಾರ: ವಾರಾಂತ್ಯ ಕರ್ಫ್ಯೂಗೆ ಜನರು ಸಹಕರಿಸಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 13:27 IST
Last Updated 7 ಜನವರಿ 2022, 13:27 IST

ಕೋಲಾರ: ‘ಕೋವಿಡ್‌ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ರೂಪಿಸಿರುವ ಮಾರ್ಗಸೂಚಿಯಂತೆ ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5ರವರೆಗೆ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿದ್ದು, ಸಾರ್ವಜನಿಕರು ಸಹಕರಿಸಬೇಕು’ ಎಂದು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಮನವಿ ಮಾಡಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯದಲ್ಲಿ ಕೋವಿಡ್‌ ಹಾಗೂ ಓಮೈಕ್ರಾನ್‌ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಿದೆ. ಜಿಲ್ಲೆಯಲ್ಲಿ ಕರ್ಫ್ಯೂ ಅವಧಿಯಲ್ಲಿ ದೈನಂದಿನ ಅಗತ್ಯ ವಸ್ತುಗಳ ಖರೀದಿ ಮತ್ತು ತುರ್ತು ಚಟುವಟಿಕೆಗೆ ಮಾತ್ರ ಅವಕಾಶವಿದ್ದು, ಜನರು ಕೋವಿಡ್‌ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಸೂಚಿಸಿದರು.

‘ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಶನಿವಾರ (ಜ.8) ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ದಿನಸಿ, ತರಕಾರಿ ವಹಿವಾಟಿಗೆ ಬೆಳಿಗ್ಗೆ 10 ಗಂಟೆವರೆಗೆ ಮಾತ್ರ ಅವಕಾಶವಿದೆ. ಹೋಟೆಲ್‌ಗಳಲ್ಲಿ ಪಾರ್ಸಲ್ ಸೇವೆ ಮಾತ್ರ ನೀಡಬೇಕು. ಮದ್ಯದಂಗಡಿಗಳನ್ನು ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆ 5 ಗಂಟೆವರೆಗೆ ಬಂದ್‌ ಮಾಡಬೇಕು’ ಎಂದು ಹೇಳಿದರು.

ADVERTISEMENT

‘ಔಷಧ ಮಾರಾಟ ಮಳಿಗೆಗಳ ವಹಿವಾಟಿಗೆ, ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಜನರ ಆರೋಗ್ಯದ ದೃಷ್ಟಿಯಿಂದ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಲಾಗಿದೆ. ಸರ್ಕಾರದ ಮತ್ತು ಜಿಲ್ಲಾಡಳಿತದ ಮಾರ್ಗಸೂಚಿ ಪಾಲಿಸುವುದು ಜನರ ಕರ್ತವ್ಯ. ಈ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ’ ಎಂದು ಕಿವಿಮಾತು ಹೇಳಿದರು.

‘ವಾರಾಂತ್ಯದ ಕರ್ಫ್ಯೂ ಭಾಗವಾಗಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕರ್ಫ್ಯೂ ಅವಧಿಯಲ್ಲಿ ವಿನಾಕಾರಣ ಮನೆಯಿಂದ ಹೊರಬಂದು ರಸ್ತೆಯಲ್ಲಿ ಓಡಾಡುತ್ತಿದ್ದರೆ ಅಥವಾ ವಾಹನಗಳಲ್ಲಿ ಸಂಚರಿಸಿದರೆ ಪ್ರಕರಣ ದಾಖಲಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.