ADVERTISEMENT

‘ಜನತಾ ಕರ್ಪ್ಯೂ’: ವಹಿವಾಟು ಸ್ಥಗಿತ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 15:38 IST
Last Updated 20 ಮಾರ್ಚ್ 2020, 15:38 IST

ಕೋಲಾರ: ಕೋವಿಡ್‌–19 ಭೀತಿ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸೂಚನೆಯಂತೆ ಭಾನುವಾರ (ಮಾರ್ಚ್‌ 22) ಜಿಲ್ಲೆಯಲ್ಲಿ ‘ಜನತಾ ಕರ್ಪ್ಯೂ’ ಆಚರಿಸಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಜನತಾ ಕರ್ಪ್ಯೂ ಹಿನ್ನೆಲೆಯಲ್ಲಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9ರವರೆಗೆ ಜಿಲ್ಲೆಯಾದ್ಯಂತ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಬೇಕು. ಜಿಲ್ಲೆಯ ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಶನಿವಾರ (ಮಾರ್ಚ್‌ 21) ಸಂಜೆ 4 ಗಂಟೆಯಿಂದ ಭಾನುವಾರ (ಮಾರ್ಚ್‌ 22) ರಾತ್ರಿ 9 ಗಂಟೆವರೆಗೆ ವಹಿವಾಟು ಸಂಪೂರ್ಣ ಸ್ಥಗಿತಗೊಳಿಸಲಾಗುತ್ತದೆ. ರೈತರು, ಮಂಡಿ ಮಾಲೀಕರು ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.

ಡಿ.ಎಲ್‌ ಸ್ಥಗಿತ: ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹಾಗೂ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಹೆಚ್ಚಿನ ಜನದಟ್ಟಣೆ ನಿರ್ಬಂಧಿಸಲು ಚಾಲನಾ ಪರವಾನಗಿ ವಿತರಣೆ ಮತ್ತು ವಾಹನ ಚಾಲನೆ ಕಲಿಕೆ ಪರೀಕ್ಷೆ ಸ್ಥಗಿತಗೊಳಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಏಪ್ರಿಲ್ 15ರವರೆಗೆ ವಾಹನ ಚಾಲನೆ ಕಲಿಕೆ (ಎಲ್‌.ಎಲ್‌) ಸಿಂಧುತ್ವ ಹೊಂದಿರುವ ಅಭ್ಯರ್ಥಿಗಳಿಗೆ ಮಾತ್ರ ಪರೀಕ್ಷೆಗೆ ಹಾಜರಾಗಬಹುದು. ಉಳಿದಂತೆ ಮುಂದಿನ ಆದೇಶದವರೆಗೆ ಡಿ.ಎಲ್‌ ವಿತರಣೆ ಮಾಡುವುದಿಲ್ಲ ಮತ್ತು ವಾಹನ ಚಾಲನೆ ಕಲಿಕೆ ಪರೀಕ್ಷೆ ನಡೆಸುವುದಿಲ್ಲ ಎಂದು ಹೇಳಿದ್ದಾರೆ.

ಅಧಿಕಾರಿಗಳ ದಾಳಿ: ನಗರದಲ್ಲಿ ನಿಯಮಬಾಹಿರವಾಗಿ ದುಪ್ಪಟ್ಟು ಬೆಲೆಗೆ ಮುಖಗವಸು ಮಾರುತ್ತಿದ್ದ ಔಷಧ ಮಳಿಗೆಗಳು ಹಾಗೂ ಅಂಗಡಿಗಳ ಮೇಲೆ ಆಹಾರ ನಿರೀಕ್ಷಕರು, ತೂಕ ಮತ್ತು ಅಳತೆ ಇಲಾಖೆ ಸಿಬ್ಬಂದಿ ಹಾಗೂ ಔಷದ ನಿಯಂತ್ರಣಾಧಿಕಾರಿಗಳ ತಂಡವು ಶುಕ್ರವಾರ ಸಂಜೆ ದಾಳಿ ನಡೆಸಿ ದಂಡ ವಿಧಿಸಿತು.

ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮುಖಗವಸು ಬಳಸುವವರ ಸಂಖ್ಯೆ ಹೆಚ್ಚಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲ ಔಷಧ ಮಾರಾಟ ಮಳಿಗೆಗಳ ಮಾಲೀಕರು ನಗರದಲ್ಲಿ ಹೆಚ್ಚಿನ ಬೆಲೆಗೆ ಮುಖಗವಸು ಮಾರಾಟ ಮಾಡಿ ಗ್ರಾಹಕರನ್ನು ಶೋಷಿಸುತ್ತಿದ್ದರು. ಈ ಸಂಬಂಧ ಸಾರ್ವಜನಿಕರು ನೀಡಿದ ದೂರು ಆಧರಿಸಿ ಅಧಿಕಾರಿಗಳು ಔಷಧ ಮಳಿಗೆಗಳ ಮೇಲೆ ದಿಢೀರ್‌ ದಾಳಿ ನಡೆಸಿದರು.

ಕನಕನಪಾಳ್ಯದ ಓಂಕಾರ್‌ ಮೆಡಿಕಲ್ಸ್‌, ಎಂ.ಜಿ ರಸ್ತೆಯ ಚಂಪಕ್‌ ಮೆಡಿಕಲ್ಸ್ ಹೆಚ್ಚಿನ ಬೆಲೆಗೆ ಮುಖಗವಸು ಮಾರುತ್ತಿದ್ದರು. ಈ ಮಳಿಗೆಗಳ ಮಾಲೀಕರಿಗೆ ಅಧಿಕಾರಿಗಳು ತಲಾ ₹ 500 ದಂಡ ವಿಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.