ADVERTISEMENT

ಮುಳಬಾಗಿಲು | ಕಗ್ಗಲನತ್ತ ಗ್ರಾಮ: ಗುಡಿಸಿಲು ಮುಕ್ತ ಯಾವಾಗ?

60-70 ವರ್ಷಗಳಿಂದ ಜೀವನ ಕಳೆದಿರುವ ನಿವಾಸಿಗಳು

ಕೆ.ತ್ಯಾಗರಾಜ್ ಎನ್.ಕೊತ್ತೂರು.
Published 11 ಫೆಬ್ರುವರಿ 2025, 5:16 IST
Last Updated 11 ಫೆಬ್ರುವರಿ 2025, 5:16 IST
ಮುಳಬಾಗಿಲು ತಾಲ್ಲೂಕಿನ ಕಗ್ಗಲನತ್ತ
ಮುಳಬಾಗಿಲು ತಾಲ್ಲೂಕಿನ ಕಗ್ಗಲನತ್ತ    

ಮುಳಬಾಗಿಲು: ತಾಲ್ಲೂಕಿನ ಕಗ್ಗಲನತ್ತ ಗ್ರಾಮದಲ್ಲಿ 15ಕ್ಕೂ ಹೆಚ್ಚು ಗುಡಿಸಿಲುಗಳು ಕೇವಲ ತೆಂಗಿನ ಗರಿ, ಪೊರಕೆ ಹುಲ್ಲು ಹಾಗೂ ಪ್ಲಾಸ್ಟಿಕ್ ಕವರ್‌ಗಳಿಂದ ನಿರ್ಮಾಣವಾಗಿವೆ. ಈ ಗ್ರಾಮ ಗುಡಿಸಿಲು ಮುಕ್ತವಾಗಲು ಎದುರು ನೋಡುತ್ತಿದೆ.

ಕಗ್ಗಲನತ್ತ ಹೆಸರಿಗಷ್ಟೇ ಗ್ರಾಮ. ರಸ್ತೆ ಸಂಪರ್ಕ ಇಲ್ಲದ ಕುಗ್ರಾಮ. ಈ ಗುಡಿಸಿಲು ಮನೆಗಳಲ್ಲೇ ಇಲ್ಲಿನ ಸುಮಾರು 60-70 ವರ್ಷ ಜೀವನ ಕಳೆದಿದ್ದಾರೆ. ಆದರೂ, ಇದುವರೆಗೂ ಬಹುತೇಕ ಮಂದಿಗೆ ಸರ್ಕಾರದ ಯಾವ ವಸತಿ ಯೊಜನೆಯಿಂದಲೂ ಪ್ರಯೋಜನ ಸಿಕ್ಕಿಲ್ಲ. 

ಗ್ರಾಮದಲ್ಲಿ 41 ಮನೆಗಳಿವೆ. 15 ಮನೆಗಳು (ಗುಡಿಸಿಲುಗಳು). ಕೇವಲ ತಾತ್ಕಾಲಿಕ ಶೆಡ್‌ಗಳು. ಪ್ಲಾಸ್ಟಿಕ್, ಹುಲ್ಲು, ಸೀರೆ, ಬಟ್ಟೆಗಳಿಂದ ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿದೆ. 

ADVERTISEMENT

ಸಾಮಾನ್ಯವಾಗಿ ಅಂಬೇಡ್ಕರ್ ವಸತಿ ಯೋಜನೆ, ಆಶ್ರಯ ಯೋಜನೆ, ಬಸವ ಯೋಜನೆ ಮತ್ತಿತರ ಯೋಜನೆ ಇಲ್ಲಿನ ನಿವಾಸಿಗಳನ್ನು ತಲುಪಿಲ್ಲ.

ಈಚೆಗೆ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ವಸತಿ ರಹಿತರ ಮನೆಗಳನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ಪಟ್ಟಿ ಮಾಡುವ ಕೆಲಸ ನಡೆದಿತ್ತು. ಈ ಬಾರಿ ವಸತಿ ಭಾಗ್ಯ ಸಿಗುವುದೇ ಎಂದು ಜನ ಎದುರು ನೋಡುತ್ತಿದ್ದಾರೆ.

ಇನ್ನು ಗ್ರಾಮಕ್ಕೆ ಯಾವುದೇ ಬಸ್ ವ್ಯವಸ್ಥೆ ಇಲ್ಲ. ಮಣ್ಣಿನ ರಸ್ತೆಯಲ್ಲಿ ಗುಡಿಪಲ್ಲಿ ಅಥವಾ ಗೂಕುಂಟೆ ಮುಖ್ಯ ರಸ್ತೆ ಮೂಲಕ ಕಗ್ಗಲನತ್ತ ಗ್ರಾಮಕ್ಕೆ ಎರಡು ಮೂರು ಕಿಲೋಮೀಟರ್ ನಡೆದು ಹೋಗಬೇಕಾಗಿದೆ.

ಇನ್ನು ಗ್ರಾಮದಲ್ಲಿ ಏಕೈಕ ಸಿಸಿ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಬಿಟ್ಟರೆ ಉಳಿದಂತೆ ಚರಂಡಿ ಇಲ್ಲವಾಗಿದೆ. ಇನ್ನು ಕುಡಿಯುವ ನೀರಿಗಾಗಿ ಅಳವಡಿಸಲಾಗಿರುವ ಸಿಸ್ಟನ್ ಸುತ್ತಲೂ ಹುಲ್ಲು ಹಾಗೂ ಕಸಕಡ್ಡಿ ತುಂಬಿಕೊಂಡಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಗ್ರಾಮದಲ್ಲಿ ಸೀರೆಗಳಿಂದ ನಿರ್ಮಾಣ ಮಾಡಿಕೊಂಡಿರುವ ಗುಡಿಸಿಲು
ಪ್ಲಾಸ್ಟಿಕ್ ಕವರ್ ಹಾಕಿ ನಿರ್ಮಾಣ ಮಾಡಿರುವ ಗುಡಿಸಿಲು
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ವಸತಿ ರಹಿತರಿಗೆ ಪಟ್ಟಿ ಮಾಡಲಾಗುತ್ತಿದೆ. ಎಲ್ಲ ಗುಡಿಸಿಲು ವಾಸಿಗಳಿಗೆ ಪಿಎಂಎವೈ ಯೋಜನೆಯಡಿ ವಸತಿ ಸೌಲಭ್ಯ ಒದಗಿಸಲಾಗುವುದು
-ಅಶ್ವಥ್ ನಾರಾಯಣ, ಪಿಡಿಒ
ಇದುವರೆಗೂ ಗುಡಿಸಿಲುಗಳ ವಾಸ ತಪ್ಪಲಿಲ್ಲ. ಇನ್ನಾದರೂ ಸರ್ಕಾರ ವಸತಿ ಸೌಲಭ್ಯ ಕಲ್ಪಿಸಿದರೆ ಜೀವನ ನಡೆಸಲು ಸಹಾಯವಾಗುತ್ತದೆ.
-ನಾರಾಯಣಮ್ಮ, ಗುಡಿಸಿಲು ವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.