ADVERTISEMENT

ಬ್ಯಾಂಕ್ ಅಧಿಕಾರಿಗಳ ಕಾರ್ಯವೈಖರಿ: ಅಭಿವೃದ್ಧಿ ಕುಂಠಿತ

ಟ್ಯಾಕ್ಸಿ ಫಲಾನುಭವಿಗಳ ವಿಚಾರ ಸಂಕಿರಣದಲ್ಲಿ ಶಾಸಕ ರೂಪಕಲಾ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2020, 13:21 IST
Last Updated 31 ಜನವರಿ 2020, 13:21 IST
ಕೋಲಾರದ ಸಹಕಾರ ಒಕ್ಕೂಟದ ಸಭಾಗಂಣದಲ್ಲಿ ಶುಕ್ರವಾರ ನಡೆದ ಪ್ರವಾಸಿ ಟ್ಯಾಕ್ಸಿಗಳ ಫಲಾನುಭವಿಗಳ ವಿಚಾರ ಸಂಕಿರಣದಲ್ಲಿ ಶಾಸಕಿ ರೂಪಕಲಾ ಮಾತನಾಡಿದರು.
ಕೋಲಾರದ ಸಹಕಾರ ಒಕ್ಕೂಟದ ಸಭಾಗಂಣದಲ್ಲಿ ಶುಕ್ರವಾರ ನಡೆದ ಪ್ರವಾಸಿ ಟ್ಯಾಕ್ಸಿಗಳ ಫಲಾನುಭವಿಗಳ ವಿಚಾರ ಸಂಕಿರಣದಲ್ಲಿ ಶಾಸಕಿ ರೂಪಕಲಾ ಮಾತನಾಡಿದರು.   

ಕೋಲಾರ: ‘ವಾಣಿಜ್ಯ ಬ್ಯಾಂಕ್ ಅಧಿಕಾರಿಗಳ ಕಾರ್ಯವೈಖರಿಯಿಂದಲೇ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲ’ ಎಂದು ಕೆಜಿಎಫ್ ಶಾಸಕಿ ರೂಪಕಲಾ ತಿಳಿಸಿದರು.

ಜಿಲ್ಲಾ ಸಹಕಾರ ಒಕ್ಕೂಟ ಡಿಸಿಸಿ ಬ್ಯಾಂಕ್ ಹಾಗೂ ರಾಜ್ಯ ಸಹಕಾರ ಮಹಾ ಮಂಡಳಿ ಸಹಾಯೋಗದಲ್ಲಿ ನಗರದ ಸಹಕಾರಿ ಒಕ್ಕೂಟದ ಸಭಾಂಗಣದಲ್ಲಿ ಶುಕ್ರವಾರ ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಟ್ಯಾಕ್ಸಿಗಳ ಫಲಾನುಭವಿಗಳಿಗೆ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

‘ನಿರುದ್ಯೋಗ ಯುಕವರು ಸ್ವಾವಲಂಭಿ ಬದುಕು ರೂಪಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಸರ್ಕಾರಗಳು ವಿವಿಧ ಇಲಾಖೆಗಳ ಮೂಲಕ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತದೆ. ಯೋಜನೆಗಳಡಿ ಫಲಾನುಭವಿಗಳನ್ನು ಗುರುತಿಸಿ ಸಾಲ ನೀಡುವಂತೆ ಬ್ಯಾಂಕ್‌ಗಳಿಗೆ ಗುರಿ ನೀಡಿದರೆ ವಿನಾಕಾರಣ ಅಲೆದಾಡಿಸುತ್ತಾರೆ. ಇದರಿಂದ ಸಮಾಜದ ಅಭಿವೃದ್ಧಿಯ ಮೇಲೂ ಪರಿಣಾಮ ಬೀರುತ್ತಿದೆ’ ಎಂದು ಹೇಳಿದರು.

ADVERTISEMENT

‘ಡಿಸಿಸಿ ಬ್ಯಾಂಕ್‌ನಿಂದ ರೈತರಿಗೆ, ಮಹಿಳೆಯರಿಗೆ ಮಾತ್ರ ಸಾಲ ನೀಡಲಾಗುತ್ತಿದೆ. ಬ್ಯಾಂಕ್ ಆರ್ಥಿಕವಾಗಿ ಸದೃಢವಾದ ಮೇಲೆ ಪ್ರಥಮ ಭಾರಿಗೆ ಪ್ರವಾಸೋದ್ಯಮ ಇಲಾಖೆಯಿಂದ ಟ್ಯಾಕ್ಸಿ ಫಲಾನುಭವಿಗಳನ್ನು ಗುರುತಿಸಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದ್ದು, ಪ್ರಮಾಣಿಕವಾಗಿ ಸಾಲ ಮರುಪಾವತಿ ಮಾಡಬೇಕು’ ಎಂದು ಸಲಹೆ ನೀಡಿದರು.

‘ಎರಡೂ ಜಿಲ್ಲೆಯ ಬಡವರು ಆರ್ಥಿಕವಾಗಿ ಸಬಲರಾಗಬೇಕು ಎಂಬ ಉದ್ದೇಶದಿಂದ ಬ್ಯಾಂಕ್ ಆಡಳಿತ ಮಂಡಳಿ ಕೆಲಸ ಮಾಡುತ್ತಿದೆ. ಬ್ಯಾಲಹಳ್ಳಿ ಗೋವಿಂದ ಗೌಡರು ಸಾಲ ನೀಡುತ್ತಾರೆ. ತೆಗೆದುಕೊಂಡರು ವಾಪಸ್ ಕಟ್ಟದಿದ್ದರೆ ಅವರ ರುದ್ರಾವತಾರ ನೋಡಲು ಅವಕಾಶ ನೀಡಬೇಡಿ’ ಎಂದು ಎಚ್ಚರಿಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದ ಗೌಡ ಮಾತನಾಡಿ, ‘ಸಾಲಕ್ಕಾಗಿ ಡಿಸಿಸಿ ಬ್ಯಾಂಕ್‌ಗೆ ಸ್ಥಿತಿವಂತರು ಯಾರು ಬರುವುದಿಲ್ಲ. ಬಡವರು ಮಾತ್ರ ಬರುತ್ತಾರೆ. ಅವರ ಕಷ್ಟ ಅರ್ಥ ಮಾಡಿಕೊಂಡು ಸಾಲ ನೀಡುತ್ತೆವೆ, ಅಷ್ಟೇ ಪ್ರಮಾಣಿಕವಾಗಿ ನಂಬಿಕೆ ಉಳಿಸಿಕೊಂಡು ಹೋಗಬೇಕು’ ಎಂದು ತಿಳಿಸಿದರು.

‘ಸಹಕಾರಿ ಬ್ಯಾಂಕಿನಲ್ಲಿ ದೊರೆಯುವಷ್ಟು ಸುಲಭವಾಗಿ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಸಿಗುವುದಿಲ್ಲ. ನಾವು ಬಡವರ, ರೈತರ, ಮಹಿಳರ ಪರ ಕೆಲಸ ಮಾಡಿದರೆ, ವಾಣಿಜ್ಯ ಬ್ಯಾಂಕ್‌ಗಳವರು ಶ್ರೀಮಂತರ ಪರ ಕೆಲಸ ಮಾಡುತ್ತಾರೆ, ಫಲಾನುಭವಿಗಳು ಡಿಸಿಸಿ ಬ್ಯಾಂಕಿನಲ್ಲಿ ವಹಿವಾಟು ನಡೆಸಲು ಶುರು ಮಾಡಬೇಕು’ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಎಲ್.ಅನಿಲ್‌ಕುಮಾರ್, ಸೊಣ್ಣೇಗೌಡ, ಸಹಕಾರಿ ಒಕ್ಕೂಡದ ಅಧ್ಯಕ್ಷ ವೆಂಕಟಸ್ವಾಮಿ, ನಿರ್ದೇಶಕರಾದ ರುದ್ರಸ್ವಾಮಿ, ಎಸ್.ಸುರೇಶ್, ಜಿ.ಅಶ್ವತ್ಥನಾರಾಯಣ, ಡಿಸಿಸಿ ಬ್ಯಾಂಕ್ ಎಂಡಿ ರವಿ, ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಭಾರತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.